ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ನಿಮಿಷದಲ್ಲಿ ಬಿಎಸ್‌ವೈ ಬರ ಅಧ್ಯಯನ

ಅಂಗರಕ್ಷಕರಂತೆ ಸಭೆಗೆ ನುಗ್ಗಿದ ಬಿಜೆಪಿ ಮುಖಂಡರು– ಹಿಂಬಾಲಕರು
Last Updated 25 ಜನವರಿ 2019, 14:34 IST
ಅಕ್ಷರ ಗಾತ್ರ

ಕೋಲಾರ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ಜಿಲ್ಲೆಗೆ ಆಗಮಿಸಿದ್ದ ಪಕ್ಷದ ಮುಖಂಡರ ತಂಡವು ಕಾಟಾಚಾರಕ್ಕೆ ಕೇವಲ 5 ನಿಮಿಷದಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿತು.

ಯಡಿಯೂರಪ್ಪ ಅವರು ಪೂರ್ವ ನಿಗದಿ ಸಮಯದಂತೆ ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ದೇವಸ್ಥಾನಕ್ಕೆ ಆಗಮಿಸಬೇಕಿತ್ತು. ಆದರೆ, ಅವರು ಸುಮಾರು ಒಂದೂವರೆ ತಾಸು ತಡವಾಗಿ ಮಧ್ಯಾಹ್ನ 12.30ಕ್ಕೆ ಕುರುಡುಮಲೆ ದೇವಸ್ಥಾನಕ್ಕೆ ಬಂದರು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸುಮಾರು 45 ನಿಮಿಷ ಅಲ್ಲಿಯೇ ಕಾಲ ಕಳೆದ ಯಡಿಯೂರಪ್ಪ ಹಾಗೂ ಮುಖಂಡರು ಕುರುಡುಮಲೆ ಗ್ರಾಮದ ರೈತರಾದ ವೆಂಕಟರಾಮ್‌ ಮತ್ತು ಎಂ.ವೆಂಕಟರಾಮಪ್ಪ ಅವರ ಜಮೀನಿಗೆ ಭೇಟಿ ನೀಡಿ ತೊಗರಿ, ಟೊಮೆಟೊ ಬೆಳೆ ವೀಕ್ಷಿಸಿದರು.

ರೈತರು ಬೆಳೆ ನಷ್ಟ ಸಂಬಂಧ ಅಳಲು ತೋಡಿಕೊಳ್ಳಲು ಮುಂದಾದಾಗ ಯಡಿಯೂರಪ್ಪ, ‘ಅಣ್ಣಾ ನನಗೆ ಇಲ್ಲಿಯ ಪರಿಸ್ಥಿತಿ ಗೊತ್ತಿದೆ. ಜಿಲ್ಲಾಧಿಕಾರಿ ಜತೆ ಮಾತನಾಡಿ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿ 5 ನಿಮಿಷದಲ್ಲಿ ಜಮೀನಿನಿಂದ ಕಾಲ್ಕಿತ್ತರು.

ಭೇಟಿಗೆ ಅವಕಾಶವಿಲ್ಲ: ಯಡಿಯೂರಪ್ಪ ಗ್ರಾಮಕ್ಕೆ ಬರುವ ವಿಷಯ ತಿಳಿದಿದ್ದ ಕುರುಡುಮಲೆಯ ಅಂಗವಿಕಲ ಯಲ್ಲಪ್ಪ ಎಂಬುವರು ಅವರನ್ನು ಮಾತನಾಡಿಸಲು ದೇವಾಲಯದ ಪ್ರವೇಶ ಭಾಗದಲ್ಲೇ ಬೆಳಿಗ್ಗೆಯಿಂದ ಕಾದು ಕುಳಿತ್ತಿದ್ದರು. ಯಡಿಯೂರಪ್ಪ ಅವರಿಗೆ ಹಾಕಲು ಸ್ವಂತ ಹಣದಲ್ಲಿ ಹೂವಿನ ಹಾರ ಸಹ ತಂದಿದ್ದರು. ಆದರೆ, ಪೊಲೀಸರು ಹಾಗೂ ಪಕ್ಷದ ಮುಖಂಡರು ಯಡಿಯೂರಪ್ಪರನ್ನು ಭೇಟಿ ಮಾಡಲು ಯಲ್ಲಪ್ಪ ಅವರಿಗೆ ಅವಕಾಶ ಕೊಡಲಿಲ್ಲ. ಇದರಿಂದ ಯಲ್ಲಪ್ಪ ನಿರಾಸೆಗೊಂಡರು.

ಕುರುಡಮಲೆ ದೇವಾಲಯ ಪ್ರವೇಶಕ್ಕೆ ಬೆರಳೆಣಿಕೆ ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಯಡಿಯೂರಪ್ಪರ ಆಗಮನದ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ದೇವಾಲಯ ಪ್ರವೇಶಿಸಲು ಮುಂದಾದರು. ಆದರೆ, ಸಾಧ್ಯವಾಗದೆ ಬೇಸರಗೊಂಡರು.

ಕಾರ್ಯಕರ್ತರ ಗದ್ದಲ: ಮುಳಬಾಗಿಲಿನಿಂದ ಜಿಲ್ಲಾ ಕೇಂದ್ರಕ್ಕೆ ಬಂದ ಯಡಿಯೂರಪ್ಪ ಅವರು ಸುಮಾರು ಅರ್ಧ ತಾಸು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಯಡಿಯೂರಪ್ಪರ ಹಿಂಬಾಲಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಭೆ ನಡೆಯುತ್ತಿದ್ದ ಕೊಠಡಿಗೆ ಅನಧಿಕೃತವಾಗಿ ಪ್ರವೇಶಿಸಿ ಗದ್ದಲ ಸೃಷ್ಟಿಸಿದರು.

ಇದರಿಂದ ಅಸಮಾಧಾನಗೊಂಡ ಯಡಿಯೂರಪ್ಪ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು ಮುಖಂಡರು ಮತ್ತು ಕಾರ್ಯಕರ್ತರಿಗೆ ಕೊಠಡಿಯಿಂದ ಹೊರ ಹೋಗುವಂತೆ ಮೂರ್ನಾಲ್ಕು ಬಾರಿ ಸೂಚನೆ ನೀಡಿದರು. ಅದಕ್ಕೂ ಜಗ್ಗದ ಮುಖಂಡರು ಅಂಗರಕ್ಷಕರಂತೆ ಯಡಿಯೂರಪ್ಪರ ಹಿಂದೆ ನಿಂತು ಫೋಟೊಗೆ ಫೋಸು ನೀಡುತ್ತಾ ಕಾಲ ಕಳೆದರು.

ವಿಧಾನ ಪರಿಷತ್ ಸದಸ್ಯೆ ಭಾರತಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಾಜಿ ಶಾಸಕರಾದ ಬಿ.ಎನ್‌.ಬಚ್ಚೇಗೌಡ, ವೈ.ಸಂಪಂಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರಕುಮಾರ್‌ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT