ಸ್ವಸ್ಥ ಸಮಾಜ ನಿರ್ಮಾಣ ಮಾಡಿ

7
ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಶಾಸಕ ಶ್ರೀನಿವಾಸಗೌಡ ಕಿವಿಮಾತು

ಸ್ವಸ್ಥ ಸಮಾಜ ನಿರ್ಮಾಣ ಮಾಡಿ

Published:
Updated:
Prajavani

ಕೋಲಾರ: ‘ಯಾವುದೇ ಸಮುದಾಯದವರು ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು. ಕಲಿಕೆಗೆ ಕೊನೆಯಿಲ್ಲ. ಮಕ್ಕಳಿಗೆ ಆಸಕ್ತಿ ಇರುವವರೆಗೂ ಶಿಕ್ಷಣ ಕೊಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಹಿಂದೆ ಜಾತಿ ಪದ್ಧತಿ ಆಚರಣೆಯಲ್ಲಿರಲಿಲ್ಲ. ಇತ್ತೀಚೆಗೆ ಜಾತೀಯತೆ ಹೆಚ್ಚಿದ್ದು, ಸಮಾಜದ ಅಭಿವೃದ್ಧಿ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರತಿ ಸಮಾಜದಲ್ಲೂ ಬಡವರು, ಶ್ರೀಮಂತರು ಇದ್ದಾರೆ. ಉಳ್ಳವರು ಬಡವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪ್ರತಿ ಸಮುದಾಯದಲ್ಲೂ ಮಹನೀಯರು ಸಮಾಜದ ಅಭಿವೃದ್ಧಿಗೆ ಪೂರಕ ಕೊಡುಗೆ ನೀಡಿದ್ದಾರೆ. ಅವರ ತತ್ವಾದರ್ಶ ಪಾಲಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು. ಮಕ್ಕಳು ಪೂರ್ವಿಕರ ಕುಲ ಕಸುಬನ್ನೇ ಅವಲಂಬಿಸದೆ ಸುಶಿಕ್ಷಿತರಾಗಬೇಕು’ ಎಂದು ಹೇಳಿದರು.

ಸ್ವಾವಲಂಬಿಗಳಾಗಿ: ‘ಮಡಿವಾಳ ಸಮುದಾಯದವರು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸ್ವಾವಲಂಬಿಗಳಾಗಬೇಕು. ಈ ಸಮುದಾಯದವರು ರಾಜಕೀಯವಾಗಿ ಮುಂದೆ ಬರಲು ಪ್ರಯತ್ನಿಸಿದರೆ ಸಹಾಯ ಮಾಡುತ್ತೇನೆ’ ಎಂದರು ಭರವಸೆ ನೀಡಿದರು.

‘ಮಡಿವಾಳ ಮಾಚಿದೇವ, ಬಸವಣ್ಣ ಸೇರಿದಂತೆ ಅನೇಕ ವಚನಕಾರರು ಸಾಮಾಜಿಕ ಕ್ರಾಂತಿ ಸೃಷ್ಟಿಸಿದರು. ಸಾಮಾಜಿಕ ಬದಲಾವಣೆ ತಂದ ವಚನಗಳು ಸರ್ವ ಕಾಲಕ್ಕೂ ಸಲ್ಲುತ್ತವೆ. ದುಡಿಮೆಯಲ್ಲಿ ದೇವರನ್ನು ಕಂಡ ವಚನಕಾರರು ದೇವರ ಆರಾಧನೆ ವಿರೋಧಿಸಿದ್ದರು. ಮಾಚಿದೇವ ದುಡಿಮೆಗೆ ಪ್ರಾಶಸ್ತ್ಯ ನೀಡಿರುವುದು ಒಪ್ಪಿಕೊಳ್ಳುವ ವಿಚಾರ’ ಎಂದು ಅಭಿಪ್ರಾಯಪಟ್ಟರು.

ಅಪರೂಪದ ಶರಣ: ‘ವೃತ್ತಿಯಿಂದ ಅಗಸನಾದ ಮಾಚಿದೇವ ಬದುಕು ಹಾಗೂ ವಚನಗಳ ಮೂಲಕ ಸಮಾಜದ ಕೊಳೆ ತೊಳೆಯಲು ಪ್ರಯತ್ನಿಸಿದ ಅಪರೂಪದ ಶರಣ. ಶ್ರೇಷ್ಠ ವಚನಕಾರರಾದ ಅವರು ವಚನಗಳ ಮೂಲಕ ಹಿಂದುಳಿದವರು, ದಲಿತರು ಹಾಗೂ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದರು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಸ್ಮರಿಸಿದರು.

‘ಜೀವನವು ಉತ್ತಮ ಮಾರ್ಗದಲ್ಲಿ ಸಾಗಬೇಕಾದರೆ ಬೆಳಕಿನಂತಹ ಮಹನೀಯರ ಆದರ್ಶ ಅವಶ್ಯಕ. ಸಮಾಜದಲ್ಲಿ ಹಿಂದುಳಿದಿರುವ ಸಮುದಾಯವರು ಸರ್ಕಾರದ ಸವಲತ್ತುಗಳ ಪ್ರಯೋಜನ ಪಡೆದು ಅಭಿವೃದ್ಧಿ ಪಥದಲ್ಲಿ ಸಾಗಬೇಕು’ ಎಂದು ಆಶಿಸಿದರು.

ಶೋಷಣೆ ನಿರಂತರ: ‘ಮಾಚಿದೇವ ಸತ್ಯ, ನ್ಯಾಯ, ಜ್ಞಾನ, ವೀರ ನಿಷ್ಠೆಗೆ ಸಾಕಾರಮೂರ್ತಿಯಾಗಿದ್ದರು. ಶಿವ ಶರಣರ ಬಟ್ಟೆ ತೊಳೆದುಕೊಂಡು ಬದುಕು ಸಾಗಿಸುತ್ತಿದ್ದ ಮಾಚಿದೇವ ಸಮಾಜದಲ್ಲಿನ ಕೊಳಕು ನಿರ್ಮೂಲನೆ ಮಾಡಲು ಶ್ರಮಿಸಿದರು. ಶಾಂತಿ, ನೆಮ್ಮದಿಯಿಲ್ಲದ ಜಟಿಲ ಜಂಜಾಟದಲ್ಲಿ ಜೀವಿಸುತ್ತಿದ್ದೇವೆ. ವಂಚನೆ, ಶೋಷಣೆ ನಿರಂತರವಾಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ವಿಷಾದಿಸಿದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಗಳ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಜಿಲ್ಲೆಯ ಶ್ರೀನಿವಾಸಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಗೋಪಾಲ್ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ನಗರಸಭೆ ಸದಸ್ಯರಾದ ಮಂಜುನಾಥ್, ಸಿ.ಸೋಮಶೇಖರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !