ಶನಿವಾರ, ಜುಲೈ 24, 2021
27 °C

ತೇಜೋವಧೆಗೆ ಜಾತಿ ನಿಂದನೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ತೇಜೋವಧೆಗಾಗಿ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಜಾತಿ ನಿಂದನೆಯ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿ ಸತ್ಯಕ್ಕೆ ದೂರವಾದದ್ದು’ ಎಂದು ಸಂಸದ ಎಸ್.ಮುನಿಸ್ವಾಮಿ ಸ್ಪಷ್ಟಪಡಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಅಧಿಕಾರ ಕೇಳುವುದು ಸಹಜ. ಅಂತಹ ಕಾರ್ಯಕರ್ತರ ಹೆಸರು ಪಟ್ಟಿ ಮಾಡಿ ಹೈಕಮಾಂಡ್‌ಗೆ ಕಳುಹಿಸಲಾಗಿದೆ’ ಎಂದು ವಿವರಿಸಿದರು.

‘ಪಕ್ಷದ ಮುಖಂಡ ಮಾಗೇರಿ ನಾರಾಯಣಸ್ವಾಮಿ ಅವರು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (ಕೂಡಾ) ಅಧ್ಯಕ್ಷ ಸ್ಥಾನ ತಮಗೆ ನೀಡಬೇಕೆಂದು ನನ್ನ ಬಳಿ ಬೇಡಿಕೆ ಇಟ್ಟಿದ್ದರು. ಕೂಡಾ ಆಡಳಿತ ಮಂಡಳಿ ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡುವಂತೆ ಹೈಕಮಾಂಡ್ ಸೂಚನೆ ನೀಡಿತ್ತು, ಹೀಗಾಗಿ 15ಕ್ಕೂ ಹೆಚ್ಚು ಆಕಾಂಕ್ಷಿಗಳ ಹೆಸರು ಪಟ್ಟಿ ಮಾಡಿ ವರಿಷ್ಠರಿಗೆ ಕಳುಹಿಸಲಾಗಿದೆ. ಅವರು ಸೂಚಿಸಿದ ವ್ಯಕ್ತಿಗಳು ಕೂಡಾ ಸದಸ್ಯರಾಗುತ್ತಾರೆ’ ಎಂದರು.

‘ನಾನು ಜಿಲ್ಲೆಯ ನಿವಾಸಿಯಾಗಿದ್ದು, ಚುನಾವಣೆಯಲ್ಲಿ ಗೆದ್ದು ಬಂದ ದಿನದಿಂದ ಮನೆ ಮಗನಾಗಿ ದುಡಿಯುತ್ತಿದ್ದೇನೆ. ಸಂಸದನಾಗಿ ಒಂದು ವರ್ಷವಾಗಿದ್ದು, ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇನೆ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಿಲ್ಲ’ ಎಂದು ತಿಳಿಸಿದರು.

‘ಸಮುದಾಯಗಳನ್ನು ಎತ್ತಿ ಕಟ್ಟುವುದು ನನಗೆ ಗೊತ್ತಿಲ್ಲ. ಮಾಗೇರಿ ನಾರಾಯಣಸ್ವಾಮಿ ಸಹ ಕೂಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅವರಿಗೆ ಅಧ್ಯಕ್ಷಗಾದಿ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ. ವರಿಷ್ಠರು ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಾರದ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿ ವಿಪಕ್ಷದವರ ಜತೆ ಸೇರಿಕೊಂಡು ನನ್ನ ವಿರುದ್ಧ ಜಾತಿ ನಿಂದನೆಯ ಆರೋಪ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಗ್ರಾಮಾಂತರ ಘಟಕದ ಅಧ್ಯಕ್ಷ ರಾಮಚಂದ್ರ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು