ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ವೆ ಮೀನು ಸಾಕಾಣಿಕೆ: ದಾಳಿ

ಚಂಜಿಮಲೆ ಗ್ರಾಮದಲ್ಲಿ ನೀರಿನ ತೊಟ್ಟಿಗಳ ತೆರವು: ಪ್ರಕರಣ ದಾಖಲು
Last Updated 9 ಏಪ್ರಿಲ್ 2020, 13:16 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಸೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಜಿಮಲೆ ಗ್ರಾಮದಲ್ಲಿ ನಿಷೇಧಿತ ಮಾರ್ವೆ (ಕ್ಯಾಟ್‌) ಮೀನು ಸಾಕಾಣಿಕೆ ಮಾಡುತ್ತಿದ್ದ ಕೇಂದ್ರದ ಮೇಲೆ ಗುರುವಾರ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ನೇತೃತ್ವದ ತಂಡವು ಮೀನು ಸಾಕಾಣಿಕೆ ತೊಟ್ಟಿಗಳನ್ನು ನಾಶಪಡಿಸಿತು.

ಬೆಂಗಳೂರಿನ ಹುಸೇನ್‌ ಸಾಬು ಎಂಬುವರು ಚಂಜಿಮಲೆ ಗ್ರಾಮದ ರಾಜಣ್ಣ ಎಂಬುವರ ಜಮೀನನ್ನು ಗುತ್ತಿಗೆಗೆ ಪಡೆದು 5 ತೊಟ್ಟಿಗಳನ್ನು ನಿರ್ಮಿಸಿ ಸುಮಾರು 6 ಲಕ್ಷದಷ್ಟು ಮಾರ್ವೆ ಮೀನು ಸಾಕಾಣಿಕೆ ಮಾಡುತ್ತಿದ್ದರು. ರಾಜಣ್ಣ ಮೀನು ಸಾಕಾಣಿಕೆಯ ಜವಾಬ್ದಾರಿ ಹೊತ್ತಿದ್ದರು.

ಸೀತಿಹೊಸೂರು ಗ್ರಾಮದ ಬಳಿಯ ಕೆ.ಸಿ ವ್ಯಾಲಿ ಯೋಜನೆ ಕಾಲುವೆಯಿಂದ ಪೈಪ್‌ಲೈನ್‌ ಮೂಲಕ ಮೀನು ಸಾಕಾಣಿಕೆಗೆ ಅಕ್ರಮವಾಗಿ ನೀರಿನ ಸಂಪರ್ಕ ಪಡೆಯಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸೀತಿಹೊಸೂರು ಗ್ರಾಮದ ಮುರಳಿಗೌಡ ಮತ್ತು ಗ್ರಾಮಸ್ಥರ ಮೇಲೆ ತಿಪ್ಪೇನಹಳ್ಳಿಯ ಕೆಲವರು ಇತ್ತೀಚೆಗೆ ಹಲ್ಲೆ ನಡೆಸಿದ್ದರು.

ನಿಷೇಧಿತ ಮಾರ್ವೆ ಮೀನುಗಳ ಸಾಕಾಣಿಕೆ ಸಂಬಂಧ ಸೀತಿಹೊಸೂರು ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಇತ್ತೀಚೆಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ 3 ದಿನದೊಳಗೆ ಮೀನಿನ ತೊಟ್ಟಿಗಳನ್ನು ನಾಶಪಡಿಸುವಂತೆ ಜಮೀನು ಮಾಲೀಕ ರಾಜಣ್ಣ ಅವರಿಗೆ ಎಚ್ಚರಿಕೆ ನೀಡಿದ್ದರು.

ಆದರೂ ರಾಜಣ್ಣ ಅವರು ಮೀನು ಸಾಕಾಣಿಕೆ ಮುಂದುವರಿಸಿದ್ದರು. ಹೀಗಾಗಿ ಉಪ ವಿಭಾಗಾಧಿಕಾರಿ ಸೋಮಶೇಖರ್‌, ತಹಶೀಲ್ದಾರ್‌ ಶೋಭಿತಾ ಪೊಲೀಸ್‌ ಭದ್ರತೆಯೊಂದಿಗೆ ಜಮೀನಿನ ಮೇಲೆ ದಾಳಿ ನಡೆಸಿ ಮೀನಿನ ತೊಟ್ಟಿಗಳನ್ನು ತೆರವುಗೊಳಿಸಿದರು. ತೊಟ್ಟಿಗಳಲ್ಲಿದ್ದ ಮೀನುಗಳನ್ನು ಮರಿಗಳನ್ನು ಗುಂಡಿಗೆ ಸುರಿದು ಮಣ್ಣಿನಿಂದ ಮುಚ್ಚಲಾಯಿತು.

ಅಪಾಯಕಾರಿ: ‘ದೇಶದಲ್ಲಿ ಮಾರ್ವೆ ಮೀನು ಸಾಕಾಣಿಕೆ ನಿರ್ಬಂಧಿಸಲಾಗಿದೆ. ಈ ಮೀನುಗಳನ್ನು ಆಹಾರವಾಗಿ ಸೇವಿಸುವುದು ಅಪಾಯಕಾರಿ. ಮಾರ್ವೆ ಮೀನಿಗೆ ಹೊರ ದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಕಾರಣಕ್ಕೆ ಹುಸೇನ್‌ ಸಾಬ್‌ ಅವರು ಕದ್ದುಮುಚ್ಚಿ ಮೀನು ಸಾಕಾಣಿಕೆ ಮಾಡಿದ್ದರು. ಜಮೀನು ಮಾಲೀಕ ರಾಜಣ್ಣ ಅವರ ವಿರುದ್ಧ ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಪೆದ್ದಯ್ಯ ಮಾಹಿತಿ ನೀಡಿದರು.

ಅಧಿಕಾರಿಗಳು ಮೀನು ಸಾಕಾಣಿಕೆ ತೊಟ್ಟಿಗಳನ್ನು ತೆರವು ಮಾಡುತ್ತಿದ್ದ ವೇಳೆ ಸುತ್ತಮುತ್ತಲಿನ ಗ್ರಾಮಗಳ ಯುವಕರು ಗೋಣಿ ಚೀಲಗಳಲ್ಲಿ ಮೀನು ತುಂಬಿಸಿಕೊಳ್ಳಲು ಮುಗಿಬಿದ್ದರು. ಈ ಮೀನುಗಳನ್ನು ತಿನ್ನಬಾರದೆಂದು ಅಧಿಕಾರಿಗಳು ಹಾಗೂ ಪೊಲೀಸರು ಮನವಿ ಮಾಡಿದರೂ ಯುವಕರು ಚೀಲಗಳಲ್ಲಿ ಮೀನು ತುಂಬಿಸಿಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT