ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಅರಸು ಜಯಂತಿ ಸರಳವಾಗಿ ಆಚರಿಸಿ: ಜಿಲ್ಲಾಧಿಕಾರಿ ಸಿ. ಸತ್ಯಭಾಮ

Last Updated 12 ಆಗಸ್ಟ್ 2020, 16:28 IST
ಅಕ್ಷರ ಗಾತ್ರ

ಕೋಲಾರ: ‘ಎಲ್ಲೆಡೆ ಕೋವಿಡ್‌ ಭೀತಿ ಹೆಚ್ಚಿದೆ. ಹೀಗಾಗಿ ಈ ಬಾರಿ ದೇವರಾಜ ಅರಸು ಜಯಂತಿ ಸರಳವಾಗಿ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮ ತಿಳಿಸಿದರು.

ದೇವರಾಜ ಅರಸು ಜಯಂತಿ ಆಚರಣೆ ಸಂಬಂಧ ಇಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಸಮಾಜಕ್ಕೆ ಸೇವೆ ಸಲ್ಲಿಸಿದ ಮಹನೀಯರ ಜಯಂತಿ ಆಚರಿಸುವುದು ಮತ್ತು ಅವರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

‘ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಸಾರ್ವಜನಿಕ ಸಭೆ, ಸಮಾರಂಭ, ಮೆರವಣಿಗೆ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು ಅವರ ಜಯಂತಿಯನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಧರಿಸಿ ಮತ್ತು ಅಂತರ ಕಾಯ್ದುಕೊಂಡು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಬೇಕು’ ಎಂದು ಹೇಳಿದರು.

‘ಈ ವರ್ಷವು ದೇವರಾಜ ಅರಸು ಭವನದಲ್ಲಿ ಜಯಂತಿ ಆಚರಿಸಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಆಯೋಜಿಸಬೇಕು. ಹೆಚ್ಚು ಜನ ಸೇರಿಸಬಾರದು. ಒಟ್ಟಾರೆ ಕಾರ್ಯಕ್ರಮ ಸರಳವಾಗಿರಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪುತ್ಥಳಿ ನಿರ್ಮಿಸಿ: ‘ದೇವರಾಜ ಅರಸು ಭವನದ ಮುಂದೆ ಪುತ್ಥಳಿ ನಿರ್ಮಿಸಬೇಕು. ಭವನಕ್ಕೆ ರಸ್ತೆಯ ವ್ಯವಸ್ಥೆ ಮಾಡಬೇಕು ಮತ್ತು ಭವನದ ಆವರಣಕ್ಕೆ ಹೊಂದಿಕೊಂಡಂತೆ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ನಿರ್ಮಿಸಿರುವ ತಡೆಗೋಡೆ ತೆರವುಗೊಳಿಸಬೇಕು’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಆಧ್ಯಕ್ಷ ಪ್ರಸಾದ್‌ಬಾಬು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಅರಸು ಜಯಂತಿ ಆಚರಣೆಗೆ ಸರ್ಕಾರದಿಂದ ₹ 1 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಹಣವನ್ನು ಪುತ್ಥಳಿ ನಿರ್ಮಾಣಕ್ಕೆ ಬಳಸುತ್ತೇವೆ. ಜತೆಗೆ ಭವನಕ್ಕೆ ರಸ್ತೆ ಸೌಕರ್ಯ ಕಲ್ಪಿಸುತ್ತೇವೆ ಮತ್ತು ಅಕ್ರಮ ತಡೆಗೋಡೆ ತೆರವುಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಕೋಲಾರದ ವೆಂಕಟರಮಣಸ್ವಾಮಿ ದೇವಾಲಯದ ಬಾಗಿಲು ತೆರೆಸಬೇಕು’ ಎಂದು ಸವಿತ ಸಮಾಜದ ಮುಖಂಡರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡುತ್ತೇವೆ’ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜಣ್ಣ, ಹಿಂದುಳಿದ ವರ್ಗಗಳ ಮುಖಂಡರಾದ ಫಲ್ಗುಣ, ವಿಷ್ಣು ಸೇರಿದಂತೆ ಹಲವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT