ಸೋಮವಾರ, ಡಿಸೆಂಬರ್ 6, 2021
24 °C

ಮಗು ಅಪಹರಣ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ತಮಿಳುನಾಡು ಮೂಲದ ದಂಪತಿಯ ನವಜಾತ ಶಿಶುವಿನ ಅಪಹರಣ ಪ್ರಕರಣ ಸಂಬಂಧ ನಾಗಮಣಿ ಮತ್ತು ಅವರ ಸಂಬಂಧಿ ಅನುಸೂಯಮ್ಮ ಎಂಬುವರನ್ನು ನಗರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪ ಗೀತಾ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ. ನವಜಾತ ಶಿಶುವಿನ ಅಪಹರಣದ ನಂತರ ಕಳೆದೊಂದು ತಿಂಗಳಿಂದ ನಾಪತ್ತೆಯಾಗಿರುವ ಗೀತಾ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಪತ್ತೆ ಕಾರ್ಯಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಮಾಲೂರು ತಾಲ್ಲೂಕಿನ ಹುಂಗೇನಹಳ್ಳಿಯ ನಾಗಮಣಿಯು ಗೀತಾ ಮತ್ತು ಪುಷ್ಪಾ ಎಂಬುವರಿಂದ ₹50 ಸಾವಿರಕ್ಕೆ ಮಗು ಖರೀದಿಸಿದ್ದರು. ಮಗುವಿನ ಪೋಷಕರಾದ ಸತ್ಯ ಮತ್ತು ಸುಮಿತ್ರಾ ದಂಪತಿಯು ಹಣದಾಸೆಗೆ ಮಗುವನ್ನು ಗೀತಾಗೆ ಮಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಗು ಮಾರಿದ ಕೆಲ ದಿನಗಳ ಬಳಿಕ ಸತ್ಯ ದಂಪತಿ ಮಗುವನ್ನು ವಾಪಸ್‌ ಕೇಳಿದ್ದರು. ಗೀತಾ ಮತ್ತು ಪುಷ್ಪಾ ಮಗು ವಾಪಸ್‌ ಕೊಡದ ಕಾರಣ ಮಹಿಳಾ ಠಾಣೆಯಲ್ಲಿ ನ.2ರಂದು ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಗೀತಾ ಮತ್ತು ಪುಷ್ಪಾರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಒಂದು ವಾರದೊಳಗೆ ಮಗು ತಂದು ಕೊಡುವಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಪೊಲೀಸರು ಠಾಣೆಗೆ ಕರೆದೊಯ್ದಿದ್ದರಿಂದ ಬೇಸರಗೊಂಡಿದ್ದ ಪುಷ್ಪಾ, ಅವರ ತಂದೆ ಮುನಿಯಪ್ಪ, ತಾಯಿ ನಾರಾಯಣಮ್ಮ, ಪತಿ ಬಾಬು ಹಾಗೂ ಮಗಳು ಗಂಗೋತ್ರಿ ಮರ್ಯಾದೆಗೆ ಅಂಜಿ ನ.7ರಂದು ತಂಪು ಪಾನೀಯದಲ್ಲಿ ವಿಷ ಬೆರೆಸಿಕೊಂಡು ಕುಡಿದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.‌

ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದ ಪುಷ್ಪಾ, ‘ಮಗುವಿನ ಅಪಹರಣ ಮತ್ತು ಮಾರಾಟ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಆದರೆ, ಪೊಲೀಸರು ನನ್ನನ್ನು ಠಾಣೆಗೆ ಎಳೆದೊಯ್ದು ಕಿರುಕುಳ ನೀಡಿದರು. ಇದರಿಂದ ಬೇಸರಗೊಂಡು ಕುಟುಂಬ ಸದಸ್ಯರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಸಾವಿಗೆ ಪೊಲೀಸರ ಕಿರುಕುಳ ಕಾರಣ’ ಎಂದು ಆರೋಪಿಸಿದ್ದರು.

ಪುಷ್ಪಾ ಪಾತ್ರವಿತ್ತು: ‘ಮಗುವಿನ ಅಪಹರಣ ಮತ್ತು ಮಾರಾಟ ಪ್ರಕರಣದಲ್ಲಿ ಪುಷ್ಪಾ ಅವರ ಪಾತ್ರವಿದ್ದ ಸಂಗತಿ ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿ ನಾಗಮಣಿ ಮತ್ತು ಪುಷ್ಪಾ ಸಂಬಂಧಿಕರು. ಪುಷ್ಪಾ ಅವರೇ ಗೀತಾ ಜತೆ ಸೇರಿ ಸತ್ಯ ದಂಪತಿಯಿಂದ ಮಗುವನ್ನು ಖರೀದಿಸಿದ್ದರು. ಈ ಸಂಗತಿ ಪುಷ್ಪಾ ಅವರ ತಂದೆ ಮುನಿಯಪ್ಪ ಅವರಿಗೂ ಗೊತ್ತಿತ್ತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಕರಣದ ಮತ್ತೊಬ್ಬ ಆರೋಪಿಯಾದ ಅನುಸೂಯಮ್ಮ ಅವರು ಮುನಿಯಪ್ಪರ ಸಹೋದರಿ. ಅವರಿಗೂ ಮಗುವಿನ ಅಪಹರಣ ಮತ್ತು ಮಾರಾಟದ ಸಂಗತಿ ತಿಳಿದಿತ್ತು. ಹೀಗಾಗಿ ಅವರನ್ನೂ ಬಂಧಿಸಿದ್ದೇವೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.