ಸೋಮವಾರ, ಸೆಪ್ಟೆಂಬರ್ 27, 2021
21 °C
ಕೋಲಾರ ಜಿಲ್ಲೆಯಲ್ಲಿ ಜೂನ್‌ಗೆ ಸ್ವಚ್ಛತಾ ಅಭಿಯಾನ

ಕಸದ ತೊಟ್ಟಿಗಳಾದ ಹಳ್ಳಿಗಳು: ವಿಡಿಯೋ ಸಂವಾದದಲ್ಲಿ ಜಿ.ಪಂ ಸಿಇಒ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸ್ವಚ್ಛ ಗ್ರಾಮ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಜೂನ್‌ 5ರಿಂದ 30ರವರೆಗೆ ಸ್ವಚ್ಛ ಮೇವ ಜಯತೆ ಹೆಸರಿನಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಇಲ್ಲಿ ಮಂಗಳವಾರ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಕಸದ ಸಮಸ್ಯೆ ತೀವ್ರಗೊಂಡಿದ್ದು, ಹಳ್ಳಿಗಳು ಕಸದ ತೊಟ್ಟಿಗಳಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸ್ವಚ್ಛತೆಯು ಜನರ ಜೀವನದ ಭಾಗವಾಗಿರಬೇಕು. ಮನೆ, ಸುತ್ತಲಿನ ಪರಿಸರ, ರಸ್ತೆ ಹೀಗೆ ಎಲ್ಲೆಡೆ ಸ್ವಚ್ಛತೆ ಕಾಪಾಡಿಕೊಂಡರೆ ಇಡೀ ಸಮಾಜ ಸ್ವಚ್ಛ ಮತ್ತು ಶುಭ್ರವಾಗಿರುತ್ತದೆ. ಸ್ವಚ್ಛತೆ ಇದ್ದ ಕಡೆ ಆರೋಗ್ಯವಿರುತ್ತದೆ. ಅಭಿಯಾನದ ಸಮರ್ಪಕ ಜಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಿ’ ಎಂದು ಸಿಬ್ಬಂದಿಗೆ ಸೂಚಿಸಿದರು.

‘ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಅಭಿಯಾನದ ಬಗ್ಗೆ ಅರಿವು ಮೂಡಿಸಲು ಕನಿಷ್ಠ ಐದಾರು ಕಡೆ ಗೋಡೆ ಬರಹ ಬರೆಸಲಾಗುವುದು. ವಿಶೇಷವಾಗಿ ಈ ಅಭಿಯಾನದ ಹೆಸರಿನಲ್ಲಿ 3 ರಥಗಳನ್ನು ಮಾಡಿ ಪ್ರತಿ ಗ್ರಾಮದಲ್ಲೂ ಪ್ರಚಾರಾಂದೋಲನ ನಡೆಸಲಾಗುವುದು. ಅಭಿಯಾನದ ಆಗುಹೋಗುಗಳ ಕುರಿತು ಮಾಹಿತಿ ವಿನಿಮಯಕ್ಕಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌್ ರೂಪಿಸಬೇಕು’ ಎಂದು ಹೇಳಿದರು.

‘ಪ್ರಮುಖ ಸಾರ್ವಜನಿಕ ಸ್ಥಳಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣದಲ್ಲಿ ಅಭಿಯಾನದ ಬಗ್ಗೆ ಹೆಚ್ಚು ಪ್ರಚಾರ ನಡೆಸಬೇಕು. ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಅಧಿಕಾರಿಗಳು, ರಾಜಕೀಯ ಪಕ್ಷಗಳು, ಎನ್ಎಸ್ಎಸ್ ಮತ್ತು ಎನ್‌ಸಿಸಿ ತಂಡಗಳ ನೆರವಿನೊಂದಿಗೆ ಅಭಿಯಾನ ಯಶಸ್ವಿಗೊಳಿಸಬೇಕು’ ಎಂದು ಕಿವಿಮಾತು ಹೇಳಿದರು.

ಪ್ರಬಂಧ ಸ್ಪರ್ಧೆ: ‘ಮಕ್ಕಳಿಂದಲೇ ಈ ಅಭಿಯಾನ ಆರಂಭಿಸುವುದರಿಂದ ಸಂಪೂರ್ಣ ಯಶಸ್ಸು ಕಾಣಬೇಕು. ಮನೆಗಳಲ್ಲಿ ಮಕ್ಕಳೇ ಶೌಚಾಲಯ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ತರುತ್ತಾರೆ. ಜತೆಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಾರೆ. ಒಣ ಮತ್ತು ಹಸಿ ಕಸ ವಿಂಗಡಿಸಿ ವಿಲೇವಾರಿ ಮಾಡುವಂತೆ ಜಾಗೃತಗೊಳಿಸುತ್ತಾರೆ’ ಎಂದು ತಿಳಿಸಿದರು.

‘ಅಭಿಯಾನದ ಭಾಗವಾಗಿ ಪ್ರಬಂಧ ಸ್ಪರ್ಧೆ ಮತ್ತು ಜೂನ್‌ 27ರಂದು ಗ್ರಾಮ ಸಭೆ ನಡೆಸಲಾಗುತ್ತದೆ. ಅಂತಿಮವಾಗಿ ಜೂನ್ 30ರಂದು ಗ್ರಾಮ ಗೌರವ ಯಾತ್ರೆ ಮೂಲಕ ಅರಿವು ಮೂಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.