ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ, ಮುಳಬಾಗಿಲು, ಕೆಜಿಎಫ್ ನಗರಸಭೆಗಳಲ್ಲಿ ಅತಂತ್ರ ಫಲಿತಾಂಶ

ತಲೆಕೆಳಗಾದ ಪಕ್ಷಗಳ ರಾಜಕೀಯ ಲೆಕ್ಕಾಚಾರ: ಪಕ್ಷೇತರರು ನಿರ್ಣಾಯಕ
Last Updated 15 ನವೆಂಬರ್ 2019, 6:26 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ 3 ನಗರಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಅಧಿಕಾರದ ಕನವರಿಕೆಯಲ್ಲಿದ್ದ ಪಕ್ಷಗಳ ರಾಜಕೀಯ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ.

ಕೋಲಾರ, ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ಹಾಗೂ ಮುಳಬಾಗಿಲು ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲಾರ ಮತ್ತು ಕೆಜಿಎಫ್‌ ನಗರಸಭೆಯಲ್ಲಿ ಅಧಿಕಾರದ ಸನಿಹಕ್ಕೆ ಬಂದು ನಿಂತಿರುವ ಕಾಂಗ್ರೆಸ್‌ ಪಾಳಯವು ಪಕ್ಷೇತರರ ಸದಸ್ಯರ ಕೈ ಕುಲುಕಲು ಮುಂದಾಗಿದೆ.

ಕೋಲಾರ ನಗರಸಭೆಯ 12 ವಾರ್ಡ್‌ಗಳಲ್ಲಿ ಗೆದ್ದಿರುವ ಕೈ ಪಾಳಯಕ್ಕೆ ಆಡಳಿತದ ಚುಕ್ಕಾಣಿ ಹಿಡಿಯಲು 6 ಸದಸ್ಯರ ಬೆಂಬಲ ಬೇಕಿದೆ. ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) 3 ಸದಸ್ಯರು ಹಾಗೂ 9 ಮಂದಿ ಪಕ್ಷೇತರ ಸದಸ್ಯರ ಬಲದೊಂದಿಗೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ ತೆರೆಮರೆಯಲ್ಲೇ ಕಸರತ್ತು ನಡೆಸಿದೆ.

ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮ್ಮದ್‌ ಹಾಗೂ ಶಾಸಕ ರಮೇಶ್‌ಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿರುವ ಕೈ ಪಾಳಯದ ಮೂರ್ನಾಲ್ಕು ಸದಸ್ಯರು 8 ಮಂದಿ ಸದಸ್ಯ ಬಲ ಹೊಂದಿರುವ ಜೆಡಿಎಸ್‌ ಜತೆ ಕೈಜೋಡಿಸುವ ಗುಸು ಗುಸು ಕೇಳಿಬರುತ್ತಿದೆ.

ಹಿಂದಿನ ಅವಧಿಯಲ್ಲಿ ಜೆಡಿಎಸ್‌ ಪಕ್ಷವು ಸಿಪಿಎಂ ಬೆಂಬಲದೊಂದಿಗೆ ಎರಡೂವರೆ ವರ್ಷ ಅಧಿಕಾರ ನಡೆಸಿತ್ತು. ನಂತರ ಕಾಂಗ್ರೆಸ್‌ ಪಾಳಯವು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಬಣದ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿದಿತ್ತು. ಉಭಯ ಪಕ್ಷಗಳು ಇದೀಗ ಅಧಿಕಾರಕ್ಕಾಗಿ ತಂತ್ರ– ಪ್ರತಿತಂತ್ರ ರೂಪಿಸುತ್ತಿದ್ದು, ಪಕ್ಷೇತರ ಸದಸ್ಯರು ನಿರ್ಣಾಯಕರಾಗಿದ್ದಾರೆ.

ಮುಳಬಾಗಿಲು:ಅಧಿಕಾರದ ಹೊಸ್ತಿಲಲ್ಲಿ ಜೆಡಿಎಸ್‌

ಮುಳಬಾಗಿಲು ನಗರಸಭೆಯ 31 ವಾರ್ಡ್‌ಗಳ ಪೈಕಿ 10ರಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್‌ ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿದೆ. ಹಿಂದಿನ ಅವಧಿಯಲ್ಲೂ ಅಧಿಕಾರ ಅನುಭವಿಸಿದ್ದ ಜೆಡಿಎಸ್‌ ಶತಾಯಗತಾಯ ಗದ್ದುಗೆ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದೆ. ಮುಳಬಾಗಿಲು ವಿಧಾನಸಭಾ ಚುನಾವಣೆಯಲ್ಲಿ ಜಿಡಿಎಸ್‌ನಿಂದ ಸ್ಪರ್ಧಿಸಿ ಸೋತಿರುವ ಸಮೃದ್ಧಿ ಮಂಜುನಾಥ್‌ ನಗರಸಭೆಯನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಪಕ್ಷೇತರ ಸದಸ್ಯರಿಗೆ ಬಲೆ ಬೀಸಿದ್ದಾರೆ.

7 ವಾರ್ಡ್‌ನಲ್ಲಿ ಗೆದ್ದಿರುವ ಕಾಂಗ್ರೆಸ್‌ ಸಹ ಪಕ್ಷೇತರ ಸದಸ್ಯರಿಗೆ ಗಾಳ ಹಾಕಿದೆ. ಎಸ್‌ಡಿಪಿಐನ 1 ಹಾಗೂ ಪಕ್ಷೇತರ 11 ಸದಸ್ಯರ ನಿರ್ಧಾರದ ಮೇಲೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಹಣೆಬರಹ ತೀರ್ಮಾನವಾಗಲಿದೆ.

ಕೆಜಿಎಫ್: ಚಿನ್ನದ ಊರಲ್ಲಿ ‘ಕೈ’

ಚಿನ್ನದ ಊರು ಕೆಜಿಎಫ್‌ ನಗರಸಭೆಯಲ್ಲೂ ಮತದಾರ ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿಲ್ಲ. 35 ವಾರ್ಡ್‌ಗಳ ಪೈಕಿ 13ರಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್‌ ಪಕ್ಷೇತರ ಸದಸ್ಯರ ಬಲದೊಂದಿಗೆ ಅಧಿಕಾರಕ್ಕೇರುವುದು ಬಹುತೇಕ ನಿಶ್ಚಿತವಾಗಿದೆ.

ಕೆಜಿಎಫ್‌ ಶಾಸಕಿ ಎಂ.ರೂಪಕಲಾ ಅವರು ಪಕ್ಷೇತರ ಸದಸ್ಯರ ಓಲೈಕೆಗೆ ಈಗಾಗಲೇ ಅಖಾಡಕ್ಕೆ ಇಳಿದಿದ್ದಾರೆ. ಸಿಪಿಎಂನ 1 ಹಾಗೂ ಪಕ್ಷೇತರ 16 ಸದಸ್ಯರ ಪೈಕಿ ಹಲವರು ಕಾಂಗ್ರೆಸ್‌ ಜತೆ ಕೈಜೋಡಿಸುವ ಸಾಧ್ಯತೆ ನಿಚ್ಚಳವಾಗಿದೆ.

ಜಿಲ್ಲೆಯಲ್ಲಿ ಕಮಲ ಪಡೆ ದೂಳೀಪಟ

ಜಿಲ್ಲೆಯ ಮೂರೂ ನಗರಸಭೆಯಲ್ಲೂ ಸಂಪೂರ್ಣ ನೆಲಕಚ್ಚಿದೆ. ಕೋಲಾರ ಮತ್ತು ಕೆಜಿಎಫ್‌ನಲ್ಲಿ ತಲಾ 3 ಹಾಗೂ ಮುಳಬಾಗಿಲಿನಲ್ಲಿ ಕೇವಲ 2 ವಾರ್ಡ್‌ಗಳಲ್ಲಿ ಗೆದ್ದಿರುವ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಕೆಜಿಎಫ್‌ ಹಾಗೂ ಕೋಲಾರ ನಗರಸಭೆ ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಫಲಿತಾಂಶ ಮರ್ಮಾಘಾತ ನೀಡಿದೆ.

ಕಾಂಗ್ರೆಸ್‌ನ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ವಿರುದ್ಧ ತೊಡೆ ತಟ್ಟಿ ಕೆಜಿಎಫ್‌ ಮತ್ತು ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ಮುನಿಸ್ವಾಮಿ ಅವರಿಗೆ ಮತದಾರರು ದೊಡ್ಡ ಪೆಟ್ಟು ಕೊಟ್ಟಿದ್ದಾರೆ. ಎರಡೂ ನಗರಸಭೆಗಳಲ್ಲಿ ಕಮಲ ಪಡೆ ಧೂಳಿಪಟವಾಗಿದೆ.

ಉಸ್ತುವಾರಿ ಸಚಿವರಿಗೆ ಮುಖಭಂಗ

ಬಿಜೆಪಿ ಸರ್ಕಾರ ಬೆಂಬಲಿಸಿ ಜಿಲ್ಲಾ ಉಸ್ತುವಾರಿ ಸಚಿವಗಾದಿ ಪಡೆದಿರುವ ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಅವರಿಗೆ ನಗರಸಭೆ ಚುನಾವಣೆ ಅಗ್ನಿ ಪರೀಕ್ಷೆಯಾಗಿತ್ತು. ಸ್ವಕ್ಷೇತ್ರದಲ್ಲೇ ಕಮಲ ಪಾಳಯದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ವಿಫಲವಾಗಿರುವ ನಾಗೇಶ್‌ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಮುಳಬಾಗಿಲಿನ ನ 31 ವಾರ್ಡ್‌ಗಳ ಪೈಕಿ ಬಿಜೆಪಿ ಕೇವಲ 2ರಲ್ಲಿ ಗೆದ್ದಿದೆ. 11 ವಾರ್ಡ್‌ಗಳಲ್ಲಿ ಗೆದ್ದಿರುವ ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ.

ಬಲಾಬಲ

ಕೋಲಾರ ನಗರಸಭೆ– 35 ವಾರ್ಡ್‌
ಕಾಂಗ್ರೆಸ್‌– 12
ಜೆಡಿಎಸ್‌– 8
ಬಿಜೆಪಿ– 3
ಪಕ್ಷೇತರರು– 9
ಎಸ್‌ಡಿಪಿಐ– 3

ಕೆಜಿಎಫ್‌ ನಗರಸಭೆ– 35 ವಾರ್ಡ್‌
ಕಾಂಗ್ರೆಸ್‌– 13
ಜೆಡಿಎಸ್‌– 2
ಬಿಜೆಪಿ– 3
ಸಿಪಿಎಂ– 1
ಪಕ್ಷೇತರರು– 16

ಮುಳಬಾಗಿಲು– 31 ವಾರ್ಡ್‌
ಕಾಂಗ್ರೆಸ್‌– 7
ಜೆಡಿಎಸ್‌– 10
ಬಿಜೆಪಿ– 2
ಎಸ್‌ಡಿಪಿಐ– 1
ಪಕ್ಷೇತರರು– 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT