ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮಿಶ್ರ ಸರ್ಕಾರ ಸುಭದ್ರ: ಸಂಸದ ಮುನಿಯಪ್ಪ

Last Updated 31 ಆಗಸ್ಟ್ 2018, 16:18 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ 5 ವರ್ಷ ಆಡಳಿತ ನಡೆಸುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಾತ್ಯಾತೀತ ತತ್ವಕ್ಕೆ ಅನುಸಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಒಗ್ಗೂಡಿ ಮೈತ್ರಿ ಸರ್ಕಾರ ರಚಿಸಿವೆ. ಮೈತ್ರಿ ವಿಚಾರದಲ್ಲಿ ಗೊಂದಲವಿಲ್ಲ. ಸರ್ಕಾರ ಬೀಳುತ್ತದೆ, ಉಳಿಯುವುದಿಲ್ಲ ಎಂಬುದು ಮಾಧ್ಯಮಗಳ ಸೃಷ್ಟಿ. ಆದರೆ, ಸರ್ಕಾರ ಸುಭದ್ರವಾಗಿದೆ’ ಎಂದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಿದರು. ಇದರಿಂದ ಸುಮಾರು ₹ 45 ಸಾವಿರ ಕೋಟಿ ಸಾಲ ಮನ್ನಾ ಆಗಿದೆ. ಇದಕ್ಕೆ ಕಾಂಗ್ರೆಸ್‌ ಬೆಂಬಲವೂ ಇದೆ. ಸರ್ಕಾರ ಹಂತ ಹಂತವಾಗಿ ಎಲ್ಲಾ ರೈತರ ಸಾಲ ಮನ್ನಾ ಮಾಡಲಿದೆ. ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ಆಗದಂತೆ ಸಮನ್ವಯ ಕಾಪಾಡಿಕೊಳ್ಳಲಾಗುವುದು’ ಎಂದು ವಿವರಿಸಿದರು.

‘ಸರ್ಕಾರವನ್ನು ಸುಗಮವಾಗಿ ನಡೆಸಲು ಸಲಹಾ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪ್ರಮುಖರು ಇದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಆ ಪ್ರಮುಖರೇ ಸರಿಪಡಿಸುತ್ತಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಯುವಕರು. ಅವರು ಪಕ್ಷ ಸಂಘಟಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲೇ ಎಲ್ಲಾ ಚುನಾವಣೆ ನಡೆಯುತ್ತಿವೆ. ಅವರಿಗೆ ನಮ್ಮೆಲ್ಲರ ಬೆಂಬಲವಿದೆ’ ಎಂದು ತಿಳಿಸಿದರು.

ನೆರವು ಸಿಗುತ್ತಿಲ್ಲ: ‘ಕೊಡಗು ಜಿಲ್ಲೆಯಲ್ಲಿ ಆಗಿರುವ ಪ್ರಕೃತಿ ವಿಕೋಪಕ್ಕೆ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಹಣಕಾಸು ನೆರವು ಸಿಗುತ್ತಿಲ್ಲ. ಕುಮಾರಸ್ವಾಮಿ ಅವರು ಈಗಾಗಲೇ ಆರ್ಥಿಕ ನೆರವು ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ನೆರೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಅಭಿವೃದ್ದಿಗೆ ಕೈಜೋಡಿಸುವುದು ಕೇಂದ್ರದ ಜವಾಬ್ದಾರಿ’ ಎಂದು ಹೇಳಿದರು.

ಅವಿಶ್ವಾಸ ನಿರ್ಣಯ: ‘ಕೋಲಾರ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಜೆಡಿಎಸ್ ಸದಸ್ಯರು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ. ಸ್ಥಳೀಯ ಮತ್ತು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಅಧ್ಯಕ್ಷರ ಅಧಿಕಾರಾವಧಿ ಇನ್ನು 6 ತಿಂಗಳು ಮಾತ್ರ ಇದ್ದು, ಅದಕ್ಕಾಗಿ ಕಿತ್ತಾಡುವುದು ಬೇಡ. ಈ ವಿಷಯವಾಗಿ ಶಾಸಕ ಶ್ರೀನಿವಾಸಗೌಡರ ಬಳಿ ಮಾತನಾಡಿ ನಗರಸಭೆ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಕೋಲಾರ ನಗರದಲ್ಲಿ ಅನೇಕ ಸಮಸ್ಯೆಗಳಿವೆ. ಕುಡಿಯುವ ನೀರು, ಸ್ವಚ್ಛತೆ, ಒಳಚರಂಡಿ ಸಮಸ್ಯೆ ಸರಿಪಡಿಸಿ ನಗರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸದಸ್ಯರು ಇದನ್ನು ಮನಗಂಡು ಒಟ್ಟಾಗಿ ಹೋಗಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT