ಶನಿವಾರ, ಫೆಬ್ರವರಿ 27, 2021
30 °C
ಗಣರಾಜ್ಯೋತ್ಸವ ಪೆರೇಡ್ ಪ್ರಚಾರಾಂದೋಲನ ಜಾಥಾಕ್ಕೆ ಚಾಲನೆ

ಶ್ರೀನಿವಾಸಪುರ: ಕೇಂದ್ರದ ವಿರುದ್ಧ ಸಾಂಘಿಕ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗ ಸಾಂಘಿಕ ಹೋರಾಟ ನಡೆಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಜನ ಗಣರಾಜ್ಯೋತ್ಸವ ಪೆರೇಡ್ ಪ್ರಚಾರಾಂದೋಲನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಾಗಿದ್ದು, ಜನ ಸಾಮಾನ್ಯರ ಹಿತವನ್ನು ಕಡೆಗಣಿಸಿದೆ. ದುಡಿಯುವ ವರ್ಗ ಬೀದಿಗೆ ಬೀಳುವಂತೆ ಮಾಡಿದೆ ಎಂದು ಹೇಳಿದರು.

ಎಪಿಎಂಸಿ ರದ್ದತಿ ಕಾಯ್ದೆ, ಕಂಪನಿ ಗುತ್ತಿಗೆ ಕೃಷಿ ಕಾಯ್ದೆ, ಆಹಾರ ಸರಕುಗಳ ದಾಸ್ತಾನು ಕಾಯ್ದೆ, ವಿದ್ಯುತ್ ಖಾಸಗೀಕರನ ಕಾಯ್ದೆ, ಉಳ್ಳವರದೇ ಭೂಮಿ ಕಾಯ್ದೆ, ಜಾನುವಾರು ಮಾರಾಟ ನಿಷೇಧ ಕಾಯ್ದೆ ಸಮಾಜದ ದೊಡ್ಡ ದುಡಿಯುವ ವರ್ಗಕ್ಕೆ ಮಾರಕವಾಗಿದೆ. ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುವ ಕಾಯ್ದೆಗಳ ಜಾರಿಯಿಂದ, ಕಾರ್ಮಿಕರ ಬದುಕು ಭಾರವಾಗುತ್ತದೆ ಎಂದು ಹೇಳಿದರು.

ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಜ.26 ರಂದು ಬೆಂಗಳೂರಿನಲ್ಲಿ ಪೆರೇಡ್ ನಡೆಸಲು ನಿರ್ಧರಿಸಲಾಗಿದೆ. ಅಂದು ಸಾವಿರಾರು ವಾಹನಗಳೊಂದಿಗೆ ಬೆಂಗಳೂರು ಪ್ರವೇಶಿಸಲಾಗುವುದು. ಸಂಯುಕ್ತ ಹೋರಾಟ ಸಂಘಟನೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯದ ಎಲ್ಲ ಕಡೆಗಳಿಂದ ವಾಹನಗಳು ಪ್ರತಿಭಟನೆಯಲ್ಲಿ ಪಾಲ್ಗೊಲಿದ್ದು, ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ಜಿಲ್ಲೆಯಾದ್ಯಂತ ಪ್ರಚಾರ ನಡೆಸಲಾಗುತ್ತಿದೆ. ಜನರಿಂದ ಉತ್ತಮ ಸ್ಪಂದನೆ ಕಂಡುಬರುತ್ತಿದೆ. ಟ್ರ್ಯಾಕ್ಟರ್ ಮತ್ತಿತರ ವಾಹನಗಳಲ್ಲಿ ಬೆಂಗಳೂರಿಗೆ ಹೊರಟು ಪೆರೇಡ್‌ನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ
ಎಂದು ಹೇಳಿದರು.

ಕನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಾತಕೋಟ ನವೀನ್ ಕುಮಾರ್, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ, ಜಿಲ್ಲಾ ಘಟಕದ ಉಪಾಧ್ಯಕ್ಷ ವೀರಭದ್ರಸ್ವಾಮಿ, ಮುಖಂಡ ಬಷೀರ್, ಅಮರನಾರಾಯಣಪ್ಪ, ಈಶ್ವರ್, ಜಿ.ಈಶ್ವರಮ್ಮ, ನಾಗಭೂಷಣ್, ಎನ್.ವೀರಪ್ಪರೆಡ್ಡಿ, ಫಾರೂಕ್, ಎಸ್.ಎಂ.ನಾಗರಾಜ್, ವೆಂಕಟರಾಮರೆಡ್ಡಿ, ಮಂಜುನಾಥ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು