ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಸ್ಟ್ರಾನ್‌’ ದಾಂದಲೆ ಪ್ರಕರಣದ ಕಾರ್ಮಿಕರ ರಕ್ಷಣೆಗೆ ಬದ್ಧ: ಸಂಸದ ಮುನಿಸ್ವಾಮಿ

Last Updated 20 ಡಿಸೆಂಬರ್ 2020, 13:41 IST
ಅಕ್ಷರ ಗಾತ್ರ

ಕೋಲಾರ: ‘ವಿಸ್ಟ್ರಾನ್‌ ಕಂಪನಿ ಪ್ರಕರಣದಲ್ಲಿ ತಪ್ಪು ಮಾಡಿರದ ಅಮಾಯಕ ಕಾರ್ಮಿಕರ ರಕ್ಷಣೆಗೆ ಬದ್ಧ. ಆದರೆ, ಉದ್ದೇಶಪೂರ್ವಕವಾಗಿ ದಾಂದಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದೆ ಬಿಡಲು ಸಾಧ್ಯವೆ? ಸಿಪಿಐ, ಸಿಪಿಎಂನವರು ಮಾತ್ರ ಕಾರ್ಮಿಕರ ಪರವಾಗಿದ್ದಾರಾ?’ ಎಂದು ಸಂಸದ ಎಸ್.ಮುನಿಸ್ವಾಮಿ ಪ್ರಶ್ನಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾರ್ಮಿಕರ ಪರ ಎಂದು ಹೇಳಿಕೊಂಡು ದುರುದ್ದೇಶಪೂರ್ವಕವಾಗಿ ದುಷ್ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ. ಸಂಘಟನೆಗಳವರು ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ’ ಎಂದು ಗುಡುಗಿದರು.

‘ವಿಸ್ಟ್ರಾನ್‌ ಕಂಪನಿ ಘಟನೆ ಸಂಬಂಧ ಪೊಲೀಸರು 7 ಸಾವಿರ ಕಾರ್ಮಿಕರ ಮೇಲೆ ಪ್ರಕರಣ ದಾಖಲಿಸಿದ್ದರೆ ಅದನ್ನು ತೆಗೆಸುತ್ತೇವೆ. ತಪ್ಪು ಮಾಡದ ಕಾರ್ಮಿಕರು ಹೆದರುವ ಅಗತ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯುವಕರು ಹಾಗೂ ನಿರುದ್ಯೋಗಿಗಳ ಪರವಾಗಿವೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದವರು ಕಾರ್ಮಿಕರ ಪರ ಅಲ್ಲ’ ಎಂದು ಕಿಡಿಕಾರಿದರು.

‘ವಿಸ್ಟ್ರಾನ್‌ ಕಂಪನಿಯ ಗುತ್ತಿಗೆ ಕಾರ್ಮಿಕರಿಗೆ ವೇತನ ನೀಡಿಕೆಯಲ್ಲಿ ಆಗಿರುವ ಅನ್ಯಾಯಕ್ಕೆ ಸಂಬಂಧಪಟ್ಟಂತೆ ಕಂಪನಿಯು ತನ್ನ ಉಪಾಧ್ಯಕ್ಷರನ್ನು ಕೆಲಸದಿಂದ ವಜಾಗೊಳಿಸಿದೆ. ಕಂಪನಿ ಕಡೆಯಿಂದ ಆಗಿರುವ ಲೋಪಕ್ಕೆ ಕ್ಷಮೆ ಸಹ ಕೋರಿದೆ. ನಾವು ಸಹ ಕಾರ್ಮಿಕ ಗುತ್ತಿಗೆದಾರ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಸುತ್ತೇವೆ’ ಎಂದು ತಿಳಿಸಿದರು.

ಭವಿಷ್ಯಕ್ಕೆ ಕುತ್ತು: ‘ವಿಸ್ಟ್ರಾನ್‌ ಕಂಪನಿಯಲ್ಲಿ ನಡೆದಂತಹ ಘಟನೆಗಳು ಜಿಲ್ಲೆಯ ಭವಿಷ್ಯಕ್ಕೆ ಕುತ್ತು ತರುತ್ತವೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ 6 ಸಾವಿರ ಎಕರೆ ಜಾಗ ಗುರುತಿಸಲಾಗಿದೆ. ಜಿಲ್ಲೆಯ ಮೂಲಕ ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಹಾದು ಹೋಗುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳು ಜಿಲ್ಲೆಗೆ ಬರುತ್ತವೆ. ಕೈಗಾರಿಕೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ’ ಎಂದು ಹೇಳಿದರು.

‘ಚೀನಾ ಮಾಧ್ಯಮಗಳು ಭಾರತಕ್ಕೆ ಕೈಗಾರಿಕೆಗಳು ಹೋದರೆ ಎಂತಹ ಗತಿ ಬರುತ್ತದೆ ಎಂದು ವಿಸ್ಟ್ರಾನ್ ಕಂಪನಿ ಘಟನೆ ಉದಾಹರಿಸಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಭಾರತವು ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ’ ಎಂದರು.

‘ದೇಶದಲ್ಲಿ ಸರ್ಕಾರಗಳು ಉದ್ಯೋಗದಾತರ ಪರವಾಗಿವೆ. ಕೇಂದ್ರದಲ್ಲಿ ಪ್ರಧಾನಿ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೂಡಿಕೆದಾರರೊಂದಿಗೆ ಮಾತನಾಡಿ ಸೌಹಾರ್ದಯುತ ಸಂಬಂಧ ಕಾಪಾಡಿಕೊಂಡಿದ್ದಾರೆ. ಯಾವುದೇ ಕೈಗಾರಿಕೆಗಳು ಜಿಲ್ಲೆಯಿಂದ ಹೊರ ಹೋಗಲ್ಲ’ ಎಂದು ಸ್ಪಷ್ಪಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT