ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಬಯಸಿದರೆ ಕೋಲಾರದಲ್ಲಿ ಸ್ಪರ್ಧೆ: ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಘೋಷಣೆ

Last Updated 28 ಜುಲೈ 2021, 15:57 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅನಿಲ್‌ಕುಮಾರ್‌ರನ್ನು ಕಣಕ್ಕಿಳಿಸಬೇಕೆಂದು ನಿರ್ಧರಿಸಿದ್ದೆ. ಈ ಹಿಂದೆ ಸಹ ಇದೇ ಮಾತು ಹೇಳಿದ್ದೆ. ಆದರೆ, ಕೋಲಾರದ ಜನರು ಬಯಸಿದರೆ ಈ ಕ್ಷೇತ್ರದಿಂದಲೇ ಸ್ಪರ್ಧಿಸಿ ಸೇವೆ ಮಾಡಲು ಸಿದ್ಧ’ ಎಂದು ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಘೋಷಿಸಿದರು.

ನಗರದ ಕೋಲಾರಮ್ಮ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ‘ಬಿಸೇಗೌಡರು ಹಾಗೂ ಅನಿಲ್‌ಕುಮಾರ್‌ ನನಗೆ ರಾಜಕೀಯ ಗುರುಗಳು. ಅವರು ನನಗೆ ಉತ್ತಮ ಮಾರ್ಗದರ್ಶನ ನೀಡಿ ರಾಜಕೀಯವಾಗಿ ಮುನ್ನಡೆಸಿದ್ದಾರೆ’ ಎಂದರು.

‘ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಖಂಡಿತ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತೇನೆ. ಇಲ್ಲವಾದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಬೆಂಬಲಿಗರನ್ನು ಕಣಕ್ಕಿಳಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಯಾವುದೇ ಕಾರಣಕ್ಕೂ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ. ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲಿ ಬೆಂಬಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುತ್ತೇನೆ. ಇಷ್ಟು ದಿನ ಕ್ಷೇತ್ರದಿಂದ ಹಾಗೂ ಬೆಂಬಲಿಗರಿಂದ ದೂರವಿದ್ದು ಕೆಲಸ ಮಾಡುತ್ತಿದ್ದೆ. ಮುಂದೆ ಬೆಂಬಲಿಗರ ಜತೆ ಕ್ಷೇತ್ರದಲ್ಲೇ ಇದ್ದು ಕೆಲಸ ಮಾಡುತ್ತೇನೆ’ ಎಂದು ವಿವರಿಸಿದರು.

‘ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಯಾವುದೇ ನಾಯಕರು ರಾಜಕೀಯವಾಗಿ ನನ್ನೊಂದಿಗೆ ಚರ್ಚೆ ಮಾಡಿಲ್ಲ. ರಾಜಕಾರಣ ಬಿಟ್ಟು ಬೇರೆ ವಿಚಾರ ಮಾತನಾಡಿದ್ದಾರೆ. ಕಾಂಗ್ರೆಸ್ ದುರ್ಬಲವಾಗಿದ್ದರೆ ದೊಡ್ಡವರು ಸರಿಪಡಿಸುತ್ತಾರೆ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಮುಳಬಾಗಿಲು ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಲಿ, ಸ್ವಾಗತಿಸುತ್ತೇನೆ’ ಎಂದು ಹೇಳಿದರು.

‘ನಾನು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದರೆ ಬೆಂಬಲ ನೀಡಲೇಬೇಕಾಗುತ್ತದೆ. ಬಿಜೆಪಿ ಸಂಸದ ಮುನಿಸ್ವಾಮಿ ಅವರು ನನ್ನ ಬಳಿ ವಿಶ್ವಾಸದಿಂದ ಇದ್ದಾರೆ. ಆದರೆ, ರಾಜಕಾರಣದ ವಿಚಾರವಾಗಿ ಅವರು ಏನೂ ಮಾತನಾಡಿಲ್ಲ’ ಎಂದು ತಿಳಿಸಿದರು.

ರಾಜಕೀಯ ಭವಿಷ್ಯ: ‘ನನ್ನ ರಾಜಕೀಯದ ಭವಿಷ್ಯದ ಬಗ್ಗೆ ಏನೂ ಯೋಚಿಸಿಲ್ಲ. ಅಧಿಕಾರಕ್ಕೆ ಆಸೆಪಡಲ್ಲ. ಸೇವಾ ಮನೋಭಾವದಿಂದ ಜನರೊಂದಿಗೆ ಇರುತ್ತೇನೆ. ನನ್ನ ರಾಜಕೀಯ ಭವಿಷ್ಯ ಜನರೇ ತೀರ್ಮಾನ ಮಾಡುತ್ತಾರೆ. ಕೋಲಾರ ಕ್ಷೇತ್ರದ ಜನರು ಬೇಕು ಎಂದರೆ ಇರುತ್ತೇನೆ. ಇಲ್ಲವಾದರೆ ವ್ಯಾಪಾರ ಮಾಡಿಕೊಂಡು ಸೇವಾ ಕಾರ್ಯ ಮುಂದುವರಿಸುತ್ತೇನೆ’ ಎಂದು ಹೇಳಿದರು.

‘ರಾಜ್ಯ ರಾಜಕೀಯದ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಗೂಳೆತ್ತುಗಳು ಗುದ್ದಿಕೊಂಡಾಗ ಯಾವುದಾದರೂ ಒಂದು ಗೂಳಿಯ ಕೊಂಬು ಮುರಿಯುವುದು ಹಾಗೂ ಮತ್ತೊಂದು ಗೂಳಿ ಗೆಲ್ಲುವುದು ಸಹಜ. ನಾವು ಗೂಳೆತ್ತುಗಳ ಬಳಿ ಗುದ್ದಾಡುವುದಕ್ಕೆ ಆಗುವುದಿಲ್ಲ. ನನಗೆ ಜಿಲ್ಲೆಯ ರಾಜಕಾರಣ ಸಾಕು’ ಎಂದು ಸ್ಪಷ್ಟಪಡಿಸಿದರು.

ಕ್ಷಮೆ ಕೋರುತ್ತೇನೆ: ‘ನನ್ನ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಪಟ್ಟ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಆ ಬಗ್ಗೆ ಹೆಚ್ಚು ಮಾತನಾಡಲ್ಲ. ಜಿಲ್ಲಾಧಿಕಾರಿ ಏನು ನಿರ್ಧಾರ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಆ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಜಾತಿ ಪ್ರಮಾಣಪತ್ರ ಪ್ರಕರಣದಿಂದ ನನ್ನ ಇಡೀ ಸಮುದಾಯಕ್ಕೆ ತೊಂದರೆಯಾಗಿದೆ. ಆ ನೋವು ಪ್ರತಿನಿತ್ಯ ಕಾಡುತ್ತಿದೆ. ಇದಕ್ಕಾಗಿ ಸಮುದಾಯದ ಕ್ಷಮೆ ಕೋರುತ್ತೇನೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌, ವಕ್ಕಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರಳಿ ಹಾಗೂ ಬೆಂಬಲಿಗರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT