ಕುರುಬರ ಸಂಘದಲ್ಲಿ ಗೊಂದಲ ಸೃಷ್ಟಿ

ಮಂಗಳವಾರ, ಜೂಲೈ 23, 2019
27 °C
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಮಧುಸೂದನ್‌ ಅಸಮಾಧಾನ

ಕುರುಬರ ಸಂಘದಲ್ಲಿ ಗೊಂದಲ ಸೃಷ್ಟಿ

Published:
Updated:
Prajavani

ಕೋಲಾರ: ‘ಕುರುಬರ ಸಂಘದಲ್ಲಿ ರಾಜಕೀಯ ಬೆರೆಸುವ ಮೂಲಕ ಗೊಂದಲ ಸೃಷ್ಟಿಸಿ ಸಮಾಜಕ್ಕೆ ಜಿಲ್ಲೆಯಲ್ಲಿ ಬೆಲೆಯಿಲ್ಲದ ವಾತಾವರಣ ನಿರ್ಮಾಣ ಮಾಡಿದ್ದೀರಿ’ ಎಂದು ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷ ಮಧುಸೂದನ್‌ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ನಡೆದ ಕುರುಬರ ಸಂಘದ ಸಭೆಯಲ್ಲಿ ರಾಜ್ಯ ಕುರುಬರ ಸಂಘದ ಕಾರ್ಯಾಧ್ಯಕ್ಷ ಅಂಜಲಿ ಸೋಮಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಮಧುಸೂದನ್‌, ‘ಜಿಲ್ಲಾ ಕುರುಬರ ಸಂಘದಲ್ಲಿ ರಾಜಕೀಯ ಬೆರೆಸಲು ನಿಮಗೆ ಯಾರು ಅಧಿಕಾರ ನೀಡಿದ್ದು?’ ಎಂದು ಪ್ರಶ್ನಿಸಿದರು.

‘ನಾವೆಲ್ಲಾ ಸಂಘಕ್ಕೆ ಒಮ್ಮತದಿಂದ ಅಧ್ಯಕ್ಷರನ್ನು ನೇಮಿಸಿ ನಿಮಗೆ ತಿಳಿಸಿದ ನಂತರ ಕನಕ ಜಯಂತಿ ಆಚರಿಸಲಾಗಿತ್ತು. ಆದರೆ, ಮತ್ತೊಮ್ಮೆ ಜಯಂತಿ ಆಚರಿಸುವಂತೆ ಮಾಡಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಲು ಕಾರಣರಾಗಿದ್ದೀರಿ. ಮತ್ತೆ ಅಧ್ಯಕ್ಷಗಾದಿಯ ಪತ್ರ ನೀಡಿದ್ದು ಯಾಕೆ? ಈ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಸಂಘಕ್ಕೆ ಕಿಂಚಿತ್ತೂ ಬೆಲೆ ಇಲ್ಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದರು.

ಸಭೆಯಲ್ಲಿ ಇಷ್ಟೆಲ್ಲಾ ಕೋಲಾಹಲ ಸೃಷ್ಟಿಯಾದರೂ ಅಂಜನಿ ಸೋಮಣ್ಣ ತಟಸ್ಥರಾಗಿದ್ದರು. ಆಗ ಸಂಘದ ಪದಾಧಿಕಾರಿಗಳು ಮಧ್ಯಪ್ರವೇಶಿಸಿ, ‘ಸಭೆಯಲ್ಲಿ ಚರ್ಚಿಸುವ ವಿಷಯಗಳು ಸಾಕಷ್ಟಿವೆ. ಈ ವಿಚಾರವನ್ನು ದಯವಿಟ್ಟು ಇಲ್ಲಿಗೆ ನಿಲ್ಲಿಸಿ’ ಎಂದು ಗೊಂದಲಕ್ಕೆ ತೆರೆ ಎಳೆದರು.

ವಸತಿನಿಲಯ ಅಭಿವೃದ್ಧಿ: ಸಂಘದ ಜಿಲ್ಲಾ ಅಧ್ಯಕ್ಷ ಮುನಿಯಪ್ಪ ಮಾತನಾಡಿ, ‘ಕೋಲಾರ ಜಿಲ್ಲಾ ಕೇಂದ್ರದಲ್ಲಿನ ಕುರುಬರ ವಸತಿನಿಲಯ ಅಭಿವೃದ್ಧಿಪಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 1 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಆದಷ್ಟು ಬೇಗನೆ ವಸತಿನಿಲಯದ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಬೇಕು’ ಎಂದು ಹೇಳಿದರು.

‘ಗ್ರಾಮ ಮಟ್ಟದಿಂದ ಸಮುದಾಯದ ಸಂಘಟನೆ ಬೆಳೆಸಬೇಕು. ಆಗಸ್ಟ್‌ನಲ್ಲಿ ಸಂಘದ ಚುನಾವಣೆ ನಡೆಯಲಿದ್ದು, ತಾಲ್ಲೂಕುವಾರು ರಾಜ್ಯ ಸಂಘದ ಸದಸ್ಯತ್ವ ಪಡೆದ ಚೀಟಿ ನೀಡಬೇಕು. ಒಗ್ಗಟ್ಟಿನಿಂದ ಸಂಘವನ್ನು ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ಸಂಘ ಕಟ್ಟಬೇಕು: ‘ಕೆಲ ಪ್ರಸಂಗಗಳಿಂದ ಸಂಘದಲ್ಲಿ ಒಡಕು ಉಂಟಾಗಿದೆ. ವ್ಯಕ್ತಿಗತವಾಗಿ ಸಂಘಟನೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಸಂಘ ಕಟ್ಟಬೇಕು. ಸಮಾಜದಲ್ಲಿ ಕುರುಬ ಜನಾಂಗ ಶಕ್ತಿಯುತವಾಗಿ ಬೆಳೆದಿದೆ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

‘ಇತ್ತೀಚೆಗೆ ನಡೆದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷಗಾದಿಯ ಚುನಾವಣೆಯಲ್ಲಿ ನಮ್ಮ ಸಮಾಜದವರು ಸಂಘಟನೆಯಿಲ್ಲದೆ ಸೋಲುವಂತಾಯಿತು. ಕುರುಬ ಸಮಾಜದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಉದ್ದೇಶಪೂರ್ವಕವಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬೀಳುವಂತೆ ಮಾಡಲಾಗಿದೆ. ಒಳ ಜಗಳದಿಂದಲೇ ಇದೆಲ್ಲಾ ನಡೆಯುತ್ತಿದೆ. ಸಮುದಾಯದವರು ಇನ್ನಾದರೂ ಸ್ವಾರ್ಥ ಬಿಟ್ಟು ಒಗ್ಗೂಡಬೇಕು. ವಸತಿನಿಲಯದ ಅಭಿವೃದ್ಧಿಗೆ ₹ 1 ಲಕ್ಷ ಹಣಕಾಸು ನೆರವು ನೀಡುತ್ತೇನೆ’ ಎಂದು ಘೋಷಿಸಿದರು.

ಪದಾಧಿಕಾರಿಗಳ ನೇಮಕ: ಸಭೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳು, ಎಲ್ಲಾ ತಾಲ್ಲೂಕುಗಳಿಂದ ಜಿಲ್ಲಾ ಉಪಾಧ್ಯಕ್ಷ ಮತ್ತು ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸಲಾಯಿತು. ಸಂಗೊಳ್ಳಿ ರಾಯಣ್ಣ ಕೋಆಪರೇಟಿವ್ ಸೊಸೈಟಿ ಸ್ಥಾಪನೆ ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಣೆ ಹಾಗೂ ಉಚಿತವಾಗಿ ಶಿಕ್ಷಣ ನೀಡುವ ಬಗ್ಗೆ ಚರ್ಚಿಸಲಾಯಿತು.

ಸಂಘದ ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ವೇಮಣ್ಣ, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ರಾಮಕೃಷ್ಣಪ್ಪ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೆಂಕಟೇಶ್‌ಗೌಡ, ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ತ್ಯಾಗರಾಜ್, ಶಿಕ್ಷಕರ ಸಂಘದ ಗೌರವಾಧ್ಯಕ್ಷ ವೆಂಕಟಶಿವಪ್ಪ ಮಾತನಾಡಿದರು.

ಜಿಲ್ಲೆಯಿಂದ ಸೈನಿಕ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸನಾ ಪತ್ರ ಪಡೆದಿರುವ ಕುರುಬ ಸಮಾಜದ ವೈ.ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು. ಕುರುಬ ಸಮಾಜದ ಮುಖಂಡರಾದ ಭವಾನಿ ಅಪ್ಪಿ, ಕೃಷ್ಣಮೂರ್ತಿ, ಮುನಿಸ್ವಾಮಿ, ಮುನಿಯಪ್ಪ, ಆದಿನಾರಾಯಣ, ರಮೇಶ್, ಮುನಿನಾರಾಯಣಪ್ಪ, ನಗರಸಭೆ ಮಾಜಿ ಸದಸ್ಯ ಮಂಜುನಾಥ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !