ಶನಿವಾರ, ಜುಲೈ 2, 2022
22 °C

ಬಿಜೆಪಿ ಟೀಕಿಸಲು ಕಾಂಗ್ರೆಸ್‌ಗೆ ನೈತಿಕತೆಯಿಲ್ಲ: ಬಿಎಂಟಿಸಿ ಉಪಾಧ್ಯಕ್ಷ ವೆಂಕಟೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅಭಿವೃದ್ಧಿ ಹಾಗೂ ಜನಪರವಾಗಿರುವ ಬಿಜೆಪಿಯನ್ನು ಟೀಕಿಸಲು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿಲ್ಲ. ರಾಜ್ಯದಲ್ಲಿ ಜನರು ಬಿಜೆಪಿ ಪರವಾಗಿದ್ದು, ಪಕ್ಷವು ಮತ್ತೆ ಅಧಿಕಾರಕ್ಕೆ ಬರುತ್ತದೆ’ ಎಂದು ಬಿಎಂಟಿಸಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಪ್ರಕೋಷ್ಠಗಳ ಉಸ್ತುವಾರಿ ಎಂ.ಆರ್.ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಸೋಮವಾರ ನಡೆದ ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಮಾತನಾಡಿ, ‘ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲ್ಲುವುದು ನಿಶ್ಚಿತ. ಪಕ್ಷ ಸಂಘಟನೆಗೆ ಕಾರ್ಯಕರ್ತರನ್ನು ಅಣಿಗೊಳಿಸಲು ರಾಜ್ಯದೆಲ್ಲೆಡೆ ಪ್ರಕೋಷ್ಠಗಳ ಸಮಾವೇಶ ನಡೆಸಲಾಗುತ್ತಿದೆ. ಜಿಲ್ಲೆಯ ಕನಿಷ್ಠ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು’ ಎಂದು ಸೂಚಿಸಿದರು.

‘ಪಕ್ಷವು ತಾಯಿ ಇದ್ದಂತೆ. ವೈಯಕ್ತಿಕ ಲಾಭ ನಷ್ಟದ ಲೆಕ್ಕಾಚಾರ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ. ಪಕ್ಷ ಅಧಿಕಾರಕ್ಕೆ ಬಂದರೆ ಸಾಮಾನ್ಯ ಕಾರ್ಯಕರ್ತರಿಗೂ ಸ್ಥಾನಮಾನ ಸಿಗುತ್ತವೆ. ಮುಖಂಡರ ನಡುವೆ ಭಿನ್ನಾಭಿ‍ಪ್ರಾಯ ಸಹಜ. ಆದರೆ. ಪಕ್ಷದ ಹಿತದೃಷ್ಟಿಯಿಂದ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಪಕ್ಷದ ಪರ ಸದಾಭಿಪ್ರಾಯ ಮೂಡುವಂತೆ ಮಾಡಿ. ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ಪ್ರಕೋಷ್ಠಗಳ ಸದಸ್ಯರ ಜವಾಬ್ದಾರಿ. ದೇಶವನ್ನು ಕಾಂಗ್ರೆಸ್ ಮುಕ್ತ ರಾಷ್ಟ್ರವಾಗಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

‘ದೇಶದ ವಿವಿಧ ರಾಜ್ಯಗಳು ಸೇರಿದಂತೆ ಕೇಂದ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರ ‍ಪರಿಶ್ರಮ ಕಾರಣ. ವಿಶ್ವ ನಾಯಕನ ಪಟ್ಟ ಹಾಗೂ ಅಭಿವೃದ್ಧಿ ವಿಚಾರಗಳಿಂದಲೇ ಜನಾಭಿಪ್ರಾಯ ಓಟುಗಳಾಗಿ ಪರಿವರ್ತನೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜನರ ಮಧ್ಯೆ ಇರಿ: ‘ಪಕ್ಷದಲ್ಲಿನ 24 ಪ್ರಕೋಷ್ಠಗಳ ಕಾರ್ಯಕರ್ತರು ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು. ಯಾವುದೇ ಪ್ರಕೋಷ್ಠದಿಂದ ನಡೆಯುವ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಪಕ್ಷದ ಮತ್ತು ಸರ್ಕಾರದ ವಿಚಾರಗಳನ್ನು ಪ್ರಚಾರ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಡೆಯ ವ್ಯಕ್ತಿಗೆ ತಲುಪಿಸಬೇಕು. ಈ ಕೆಲಸ ಸಮರ್ಪಕವಾಗಿ ನಡೆದರೆ ಮಾತ್ರ ಬಿಜೆಪಿ ಪ್ರತಿ ಚುನಾವಣೆಯಲ್ಲೂ ಗೆಲುವು ಸಾಧಿಸುತ್ತದೆ’ ಎಂದರು.

‘ರಾಜ್ಯದಲ್ಲಿ ವಿಧಾನಸಭಾ ಚುನಾವನೆಗೆ ಇನ್ನೂ 10 ತಿಂಗಳು ಬಾಕಿ ಇದೆ. ಸರ್ಕಾರದ ಸವಲತ್ತು ಪಡೆದ ವ್ಯಕ್ತಿ ಬಿಜೆಪಿಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ. ಋಣ ತೀರಿಸಲು ಬಿಜೆಪಿಗೆ ಒಟು ಹಾಕುತ್ತಾನೆ. ಹೀಗಾಗಿ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು’ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಹೇಳಿದರು.

ಬಿಜೆಪಿ ವಿಭಿನ್ನ: ‘ಬಿಜೆಪಿಯು ಬೇರೆ ಪಕ್ಷಗಳಿಗಿಂತ ವಿಭಿನ್ನವಾಗಿದ್ದು, ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ನೀಡುತ್ತದೆ. ಆ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬೆಳೆಯುವಂತೆ ಮಾಡುತ್ತದೆ. ಬಿಜೆಪಿಯಲ್ಲಿ ಕಾರ್ಯಕರ್ತರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಕಾರ್ಯಕರ್ತರನ್ನು ಬೆಳೆಸಿದರೆ ಮಾತ್ರ ನಾಯಕರು ಉಳಿಯುತ್ತಾರೆ, ಆಗ ಪಕ್ಷವೂ ಉಳಿಯುತ್ತದೆ’ ಎಂದು ಮಾಲೂರಿನ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕರಾದ ವೈ.ಸಂಪಂಗಿ, ಬಿ.ಪಿ.ವೆಂಕಟಮುನಿಯಪ್ಪ, ಪಕ್ಷದ ಜಿಲ್ಲಾ ಪ್ರಭಾರಿ ಕಾಂತರಾಜ್, ವಿವಿಧ ಪ್ರಕೋಷ್ಠಗಳ ರಾಜ್ಯ ಮುಖಂಡರಾದ ವೆಂಕಟೇಶ್‌ಗೌಡ, ಹನುಮಪ್ಪ, ಆರ್.ಪ್ರಭಾಕರ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.