ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ನಡುಬೀದಿಯಲ್ಲಿ ಕಾಂಗ್ರೆಸ್‌ ಬಣಗಳ ಕಿತ್ತಾಟ

ಮತ್ತೆ ಭಿನ್ನಮತ ಸ್ಫೋಟ* ಮುನಿಯಪ್ಪ-ರಮೇಶ್ ಕುಮಾರ್ ಬಣದ ನಡುವೆ ಜಟಾಪಟಿ
Last Updated 5 ಡಿಸೆಂಬರ್ 2022, 20:13 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರು ಮತ್ತೆ ನಡುಬೀದಿಯಲ್ಲಿ ಕಿತ್ತಾಡಿಕೊಂಡಿದ್ದಾರೆ.

ನಗರದ ಕಾಂಗ್ರೆಸ್ ಭವನ ಎದುರಿನ ರಸ್ತೆಯಲ್ಲಿ ಸೋಮವಾರ ಮುನಿಯಪ್ಪ ನೇತೃತ್ವದಲ್ಲಿ ನಡೆದ‌ ಸಭೆಯಲ್ಲಿ ಉಭಯ ಬಣಗಳ ಕಾರ್ಯಕರ್ತರ ನಡುವೆ ವಾಗ್ವಾದ, ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ, ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಇದನ್ನು ಗಮನಿಸಿದ ಪೊಲೀಸರು ಮಧ್ಯ ಪ್ರವೇಶಿಸಿ ನಿಯಂತ್ರಣಕ್ಕೆ ತಂದರು.

‘ಲೋಕಸಭೆ ಚುನಾವಣೆಯಲ್ಲಿನನ್ನನ್ನು ಸೋಲಿಸಿದವರು, ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತಂದು ಗೆಲ್ಲಿಸುವುದಾಗಿ ಹೇಳುತ್ತಿದ್ದಾರೆ. ಹಳೆ ಕಾಂಗ್ರೆಸ್ಸಿಗರನ್ನು ಬಿಟ್ಟು ಇವರೇ (ರಮೇಶ್‌ ಕುಮಾರ್‌ ಬೆಂಬಲಿಗರು) ಏಕಪಕ್ಷೀಯವಾಗಿ ಸಭೆ ನಡೆಸುತ್ತಿದ್ದಾರೆ. ಇವರಿಗೆ ಈ ಉಸಾಬರಿ ಕೊಟ್ಟವರು ಯಾರು? ಅದನ್ನು‌ ಮೊದಲು ಬಿಟ್ಟುಬಿಡಬೇಕು‌. ಒಂದಿಬ್ಬರಿಂದ ಗೊಂದಲ ಸೃಷ್ಟಿಯಾಗಿದೆ' ಎಂದು ಮುನಿಯಪ್ಪ ಸಭೆಯಲ್ಲಿ ಹೇಳುತ್ತಿದಂತೆ ರಮೇಶ್ ಕುಮಾರ್ ಬಣದವರು ಸಿಡಿದೆದ್ದರು.

ನಗರಸಭೆ ಸದಸ್ಯ ಅಂಬರೀಷ್ ನೇತೃತ್ವದಲ್ಲಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕಿದರು. ಇನ್ನು ಕೆಲ ಕಾರ್ಯಕರ್ತರು, ‘ನಿಮ್ಮಿಬ್ಬರ ಬಣ ಜಗಳದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ’ ಎಂದು ಹರಿಹಾಯ್ದರು.

ಕೆಲ ಮುಸ್ಲಿಂ ಕಾರ್ಯಕರ್ತರು, ‘ಸಿದ್ದರಾಮಯ್ಯ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸಬೇಕು’ ಎಂದು ಪಟ್ಟುಹಿಡಿದರು. ಈ ವಿಚಾರ ಮಾತಿನ ಚಕಮಕಿಗೆ ತಿರುಗಿತು. ಎರಡೂ ಬಣದವರು ರಸ್ತೆಗೆ ಬಂದರು. ನಡು ಬೀದಿಯಲ್ಲೇ ಪರಸ್ಪರ ಕೈ ಮಿಲಾಯಿಸಲು ಮುಂದಾದರು.

ರಸ್ತೆಯಲ್ಲಿ ಜಗಳ ಜೋರಾಗುತ್ತಿದ್ದಂತೆ ಅತ್ತ ಸಭಾಂಗಣದಲ್ಲಿ ಮೈಕ್ ಕಿತ್ತುಕೊಂಡ ಮುನಿಯಪ್ಪ, ‘ಈ ರೀತಿ ಗಲಾಟೆ ಮಾಡುವವರು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಂದು ಗೆಲ್ಲಿಸುತ್ತಾರಾ’ ಎಂದು ಪ್ರಶ್ನಿಸಿದರು.

‘ನಾನು ಹಳೆಯದ್ದನ್ನು ಮರೆತಿದ್ದೇನೆ. ಕ್ಷೇತ್ರದಲ್ಲಿ ಸ್ಪರ್ಧಿಸುವುದಾದರೆ ಸಿದ್ದರಾಮಯ್ಯನವರು ಮೊದಲು ಇಲ್ಲಿನ ಗೊಂದಲ ಸರಿ‌ಪಡಿಸಬೇಕು. ಅವರ ಸ್ಪರ್ಧೆಗೆ ನಮ್ಮ ಸ್ವಾಗತವಿದೆ. ಅವರು ಸ್ಪರ್ಧಿಸದಿದ್ದರೆ ಸ್ಥಳೀಯರಿಗೇ ‌ಟಿಕೆಟ್ ಕೊಡಬೇಕು’ ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರು.

ಈ ಸಂದರ್ಭದಲ್ಲಿ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವ ವಿ.ಆರ್‌.ಸುದರ್ಶನ್‌ ಕೂಡ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT