ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಮಾದರಿ ಗುರುಭವನ ನಿರ್ಮಾಣ

ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಭರವಸೆ
Last Updated 17 ನವೆಂಬರ್ 2021, 16:12 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಣ ತೇರು ನಿರಂತರವಾಗಿ ಸಾಗಲು ಶ್ರಮಿಸುವ ಮೂಲಕ ಜಿಲ್ಲೆಯಲ್ಲಿ ರಾಜ್ಯಕ್ಕೆ ಮಾದರಿಯಾದ ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ನಾನೇ ನೇತೃತ್ವ ವಹಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಭರವಸೆ ನೀಡಿದರು.

ಇಲ್ಲಿ ಬುಧವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮುಂದಿನ ವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಗುರುಭವನ ಮತ್ತು ನೌಕರರ ಭವನಗಳ ನಿರ್ಮಾಣ ಸಂಬಂಧ ಚರ್ಚಿಸುತ್ತೇನೆ’ ಎಂದರು.

‘ಗುರುಭವನ ಹಾಗೂ ನೌಕರರ ಭವನಕ್ಕೆ ಜಮೀನು ಮೀಸಲಿಡಲು ಜಿಲ್ಲಾಧಿಕಾರಿ ಒಪ್ಪಿದ್ದಾರೆ. ಸರ್ಕಾರಿ ನೌಕರರ ಸಮಸ್ಯೆಗೆ ಸ್ಪಂದಿಸುವ ಜಿಲ್ಲಾಧಿಕಾರಿ ಇದ್ದಾರೆ. ಅವರಿಗೆ ಗುರುಭವನ ನಿರ್ಮಿಸುವ ಆಶಯವಿದ್ದು, ಈಗಾಗಲೇ ಗುರುಭವನ ಸಮಿತಿಗಳನ್ನು ರಚಿಸಿದ್ದಾರೆ. ಶಾಸಕರ ನಿಧಿ ಹಾಗೂ ಜಿಲ್ಲೆಯ ಕೈಗಾರಿಕೆಗಳ ಸಿಎಸ್‍ಆರ್ ನಿಧಿ ಪಡೆಯಲು ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದರು.

‘ಶಿಕ್ಷಣ ಪ್ರೇಮಿ, ಭ್ರಷ್ಟಾಚಾರರಹಿತ ಪ್ರಾಮಾಣಿಕ ಅಧಿಕಾರಿಯಾದ ಡಿಡಿಪಿಐ ರೇವಣ ಸಿದ್ದಪ್ಪ ಹಾಗೂ ರಾಜ್ಯದಲ್ಲೇ ಉತ್ತಮ ಬಿಇಒ ಎಂದು ಪ್ರಶಸ್ತಿ ಗಳಿಸಿರುವ ವೆಂಕಟರಾಮರೆಡ್ಡಿ ಅವರನ್ನು ಜಿಲ್ಲೆಗೆ ಬರುವಂತೆ ಮಾಡಿದ್ದೇನೆ. ಅವರಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ನೀತಿಸಂಹಿತೆ ಅಡ್ಡಿ: ‘ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ವಿಧಾನ ಪರಿಷತ್ ಚುನಾವಣೆ ನೀತಿಸಂಹಿತೆ ಅಡ್ಡಿಯಾಗಿದೆ. ಚುನಾವಣೆ ನಂತರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಸಹಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡುವ ಕುರಿತು 200 ಮಂದಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

‘ವೃತ್ತಿ ಶಿಕ್ಷಕರ ವೇತನ ತಾರತಮ್ಯದ ಸಂಬಂಧ ಮುಂದಿನ ವಾರ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಆರೋಗ್ಯ ಕಾರ್ಡ್‌, ಕಾಲ್ಪನಿಕ ವೇತನ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಮುಂದಾಳತ್ವ ವಹಿಸಿ: ‘ಗುರುಭವನ ಹಾಗೂ ಸರ್ಕಾರಿ ನೌಕರರ ಭವನ ನಿರ್ಮಾಣ ಕಾರ್ಯಕ್ಕೆ ತಾವೇ ಮುಂದಾಳತ್ವ ವಹಿಸಬೇಕು. ತಮ್ಮ ಶಾಸಕರ ನಿಧಿಯ ಜತೆಗೆ ಖಾಸಗಿ ಕಂಪನಿಗಳಿಂದ ಸಿಎಸ್‍ಆರ್ ನಿಧಿ ಕೊಡಿಸಲು ಸಭೆ ನಡೆಸಬೇಕು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ಅವರು ನಾರಾಯಣಸ್ವಾಮಿಗೆ ಮನವಿ ಮಾಡಿದರು.

‘ಮುಂದಿನ 50 ವರ್ಷಗಳ ಭವಿಷ್ಯದ ದೃಷ್ಟಿಯಿಂದ ಸುಂದರ ಮತ್ತು ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ ಮನವಿ ಮಾಡಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಶ್ರೀನಿವಾಸಲು, ಕಾರ್ಯಕಾರಿ ಸಮಿತಿ ಸದಸ್ಯೆ ಬಿ.ಎ.ಕವಿತಾ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್, ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT