ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮೃತ ರೈತರ ಕುಟುಂಬಕ್ಕೆ ಪರಿಹಾರ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

ಅಫೆಕ್ಸ್‌ ಬ್ಯಾಂಕ್ ಸಭೆಯಲ್ಲಿ ನಿರ್ಧಾರ
Last Updated 19 ಜೂನ್ 2021, 14:07 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ರೈತರು ಡಿಸಿಸಿ ಬ್ಯಾಂಕ್ ಅಥವಾ ಬ್ಯಾಂಕ್ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದಿದ್ದರೆ ಅವರ ಕುಟುಂಬಗಳಿಗೆ ಪರಿಹಾರ ನೀಡಲು ರಾಜ್ಯ ಅಫೆಕ್ಸ್‌ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಅಫೆಕ್ಸ್‌ ಬ್ಯಾಂಕ್‌ ನಿರ್ದೇಶಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ಅವಳಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ರೈತರ ಮಾಹಿತಿ ಸಂಗ್ರಹಿಸುವ ಸಂಬಂಧ ಇಲ್ಲಿ ಶನಿವಾರ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಅಫೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ರೈತರ ಕುಟುಂಬಕ್ಕೆ ನೆರವು ನೀಡಲು ತೀರ್ಮಾನಿಸಲಾಗಿದೆ. ಸಾಲ ಪಡೆದು ಮೃತರಾಗಿರುವ ರೈತರ ಮಾಹಿತಿ ಸಂಗ್ರಹಿಸಿ ಜುಲೈ 1ರೊಳಗೆ ಬ್ಯಾಂಕ್‌ನ ಕೇಂದ್ರ ಕಚೇರಿಗೆ ಸಲ್ಲಿಸಬೇಕು’ ಎಂದು ಸೂಚಿಸಿದರು.

‘2020ರ ಏ.1ರಿಂದ 2021ರ ಜೂನ್‌ 30ರ ಅವಧಿಯಲ್ಲಿ ಬ್ಯಾಂಕ್‌ನಿಂದ ಬೆಳೆ ಸಾಲ ಪಡೆದಿದ್ದು, ಕೋವಿಡ್‌ನಿಂದ ಮೃತಪಟ್ಟ ರೈತರ ಕುಟುಂಬಕ್ಕೆ ಪರಿಹಾರ ಒದಗಿಸಲಾಗುತ್ತದೆ. ಡಿಸಿಸಿ ಬ್ಯಾಂಕ್‌ನಿಂದ ಅಥವಾ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ಸೊಸೈಟಿಗಳಿಂದ ನಿಗದಿತ ಅವಧಿಯಲ್ಲಿ ಮತ್ತು ಕೃಷಿ ಭೂಮಿ ಪಹಣಿ ಅಡಮಾನವಿಟ್ಟು ಬೆಳೆ ಸಾಲ ಪಡೆದಿರುವ ರೈತರು ಕೋವಿಡ್‌ನಿಂದ ಮೃತಪಟ್ಟಿದ್ದರೆ ಮಾತ್ರ ಈ ಪರಿಹಾರದ ಪ್ರಯೋಜನ ಸಿಗಲಿದೆ’ ಎಂದು ವಿವರಿಸಿದರು.

‘ಮೃತ ರೈತರ ಕುಟುಂಬದಿಂದ ಪಡಿತರ ಚೀಟಿ, ಕೋವಿಡ್‌ನಿಂದ ಮೃತಪಟ್ಟ ಸಂಬಂಧ ದೃಢೀಕೃತ ಪ್ರಮಾಣಪತ್ರ, ಆಧಾರ್‌ ಕಾರ್ಡ್‌, ಸಾಲದ ದಾಖಲೆಪತ್ರಗಳನ್ನು ಆಯಾ ಪ್ಯಾಕ್ಸ್‌ಗಳ ಕಾರ್ಯದರ್ಶಿಗಳು ಸಂಗ್ರಹಿಸಿ ಕೇಂದ್ರ ಕಚೇರಿಗೆ ಕಳುಹಿಸಬೇಕು’ ಎಂದು ಸೂಚನೆ ನೀಡಿದರು.

ಸಾಲ ಮರುಪಾವತಿಸಿ: ‘ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣಕ್ಕೆ 2 ತಿಂಗಳ ಕಾಲ ಸಾಲ ಮರುಪಾವತಿ ಸ್ಥಗಿತಗೊಂಡಿತ್ತು. ಬಡ್ಡಿರಹಿತ ಸಾಲ ಪಡೆದಿರುವ ರೈತರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಸಾಲದ ಕಂತು ಮರುಪಾವತಿಸುವ ಮೂಲಕ ಬಡ್ಡಿಯ ಹೊರೆ ಬೀಳದಂತೆ ಎಚ್ಚರ ವಹಿಸಿ’ ಎಂದು ಕಿವಿಮಾತು ಹೇಳಿದರು.

‘ರೈತರು, ಮಹಿಳೆಯರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕ್‌ನ ನಂಬಿಕೆ ಉಳಿಸಿಕೊಳ್ಳಿ. ಸಾಲ ಮರುಪಾವತಿಸದೆ ಅವಧಿ ಮೀರಿದರೆ ಬಡ್ಡಿಯ ಹೊರೆ ಹೆಚ್ಚುತ್ತದೆ. ಬ್ಯಾಂಕ್ ರೈತರು, ಮಹಿಳೆಯರ ಹಿತರಕ್ಷಣೆಗೆ ಬದ್ಧವಾಗಿದೆ. ಬ್ಯಾಂಕ್‌ ಉಳಿಸಿ ಬೆಳೆಸುವುದು ರೈತರು ಹಾಗೂ ಮಹಿಳೆಯರ ಜವಾಬ್ದಾರಿ’ ಎಂದರು.

ಸ್ವಾಗತಾರ್ಹ: ‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಫೆಕ್ಸ್ ಬ್ಯಾಂಕ್ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಮೃತ ರೈತರ ಕುಟುಂಬಗಳಿಗೆ ನೆರವಾಗುವ ಮೂಲಕ ಅನ್ನದಾತರ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಸೋಮಣ್ಣ ಮತ್ತು ಎಂ.ಎಲ್‌.ಅನಿಲ್‌ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್‌ ಸಹಾಯಕ ಪ್ರಧಾನ ವ್ಯವಸ್ಥಾಪಕ ಖಲೀಮ್‌ ಉಲ್ಲಾ, ಅಧಿಕಾರಿಗಳಾದ ತಿಮ್ಮಯ್ಯ, ಶುಭಾ, ಮಮತಾ, ಬಾಲಾಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT