ಸೋಮವಾರ, ಸೆಪ್ಟೆಂಬರ್ 20, 2021
26 °C
ಕೇರಳದಿಂದ ಬಂದ ಮರುದಿನವೇ ನರ್ಸಿಂಗ್‌ ವಿದ್ಯಾರ್ಥಿನಿಯರಿಗೆ ಕೋವಿಡ್‌ ದೃಢ

ನೆಗೆಟಿವ್‌ ವರದಿ ಸಾಚಾತನ: ತನಿಖೆ ಆರಂಭ

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಕೇರಳದಿಂದ ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿನಿಯರು ತರುವ ಕೋವಿಡ್ ನೆಗೆಟಿವ್‌ ವರದಿ ಸಾಚಾತನ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಕೇರಳದಿಂದ ಕೋವಿಡ್‌ ನೆಗೆಟಿವ್ ವರದಿಯೊಂದಿಗೆ ಬಂದಿದ್ದ ವಿದ್ಯಾರ್ಥಿನಿಯರನ್ನು ಮರುದಿನವೇ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವ ಪ್ರಕರಣಗಳು
ಹೆಚ್ಚುತ್ತಲೇ ಇವೆ. 

ಹಾಗಾಗಿ ಕೇರಳದಲ್ಲಿ ನೀಡುವ ಕೋವಿಡ್ ನೆಗೆಟಿವ್ ವರದಿಯ ಸಾಚಾತನದ ಬಗ್ಗೆ ಅನುಮಾನ ಮೂಡಿದೆ. ಕಾಲೇಜು ಸಿಬ್ಬಂದಿ ಕೂಡ ನೆಗೆಟಿವ್ ವರದಿ ಇದೆ ಎಂಬ ಕಾರಣದಿಂದ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಬಿಟ್ಟುಕೊಂಡಿದ್ದಾರೆ. ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ.

ನಗರದ ಆಂಡರ್‌ಸನ್‌ಪೇಟೆಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಇರುವ ಬಹುತೇಕ ಎಲ್ಲರೂ ಕೇರಳ ಮೂಲದವರಾಗಿದ್ದಾರೆ. ಇಲ್ಲಿ 265 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಮೊದಲನೇ ವರ್ಷದ ನರ್ಸಿಂಗ್ ಕೋರ್ಸ್‌ಗೆ ದಾಖಲಾದ ವಿದ್ಯಾರ್ಥಿನಿಯರನ್ನು ಕೇರಳದಿಂದ ಕಾಲೇಜು ಬಸ್‌ನಲ್ಲಿ ಕರೆತರಲಾಗಿತ್ತು. ವಿದ್ಯಾರ್ಥಿಗಳು ಬರುವಾಗ ನೆಗೆಟಿವ್ ವರದಿ ತಂದಿದ್ದರು.

ವಸತಿ ನಿಲಯದಲ್ಲಿ ತಂಗಿದ್ದ ಅವರಿಂದ ಮೊದಲೇ ವಾಸವಿದ್ದ ಎರಡನೇ ವರ್ಷದ ವಿದ್ಯಾರ್ಥಿನಿಯರಿಗೂ ಸೋಂಕು ಹರಡಿರುವ ಶಂಕೆ ಇದೆ. ಆದರೆ ಬಂದ ಎರಡೇ ದಿನಕ್ಕೆ 65 ಮಂದಿಗೆ ಸೋಂಕು ಹರಡಿರುವುದನ್ನು ಕಂಡ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕೋವಿಡ್ ನೆಗೆಟಿವ್ ವರದಿ ಸಾಚಾತನ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. 

ಬಹುತೇಕ ವಿದ್ಯಾರ್ಥಿನಿಯರು ಕೇರಳದ ಖಾಸಗಿ ಲ್ಯಾಬ್‌ನಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪ್ರಾಥಮಿಕ ಹಂತದ ತನಿಖೆ ಮಾಡಲು ಶುರು ಮಾಡಿದ್ದ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ವರದಿಯ ಮೂಲವನ್ನು ಹುಡುಕುವುದೇ ಪ್ರಯಾಸಕರವಾಗಿದೆ ಎಂದು ಆರೋಗ್ಯ ಇಲಾಖೆಯ
ಮೂಲಗಳು ತಿಳಿಸಿವೆ.

ಕೋವಿಡ್ ವಾರ್ ರೂಂ ವೆಬ್‌ಸೈಟಿನಲ್ಲಿ ಪರೀಕ್ಷೆ ಮಾಡಿಸಿರುವ ಮಾಹಿತಿ ಸಿಕ್ಕಿಲ್ಲ ಎಂದರೆ, ಅದು ನಕಲಿ ವರದಿ ಎಂದು ತೀರ್ಮಾನ ಮಾಡಬೇಕಾಗುತ್ತದೆ. ಶೇ 25ರಷ್ಟು ವರದಿ ನಕಲಿ ಇರಬಹುದು ಎಂದು ಶಂಕಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಪರಿಶೀಲನೆಗೆ ಜಿಲ್ಲಾಡಳಿತ ಸೂಚನೆ

ಈ ಮಧ್ಯೆ ಜಿಲ್ಲಾಡಳಿತ ವಿದ್ಯಾರ್ಥಿನಿಯರು ಕೇರಳದಿಂದ ತಂದ ನೆಗೆಟಿವ್ ವರದಿಯನ್ನು ಪರಿಶೀಲಿಸುವಂತೆ ಸೂಚಿಸಿದೆ. ಮಂಗಳವಾರ ಕಾಲೇಜಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ವರದಿಯ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಬಾರ್ ಕೋಡ್ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಕೇರಳದಲ್ಲಿ ವ್ಯಾಪಕವಾಗಿ ಕೋವಿಡ್ ಹರಡುತ್ತಿರುವುದು ತಿಳಿದಿದ್ದರೂ, ಕಾಲೇಜಿನ ಆಡಳಿತ ಮಂಡಳಿ ಬಸ್ ಕಳಿಸಿ ವಿದ್ಯಾರ್ಥಿಗಳನ್ನು ಕರೆಸಿಕೊಂಡಿರುವುದು ಅಧಿಕಾರಿಗಳಲ್ಲಿ ಅಸಮಾಧಾನ ಮೂಡಿಸಿದೆ.

’ಕೇರಳದಿಂದ ಚೆಕ್‌ಪೋಸ್ಟ್‌  ದಾಟಿಕೊಂಡು ಬಂದಿರುವ ವಿದ್ಯಾರ್ಥಿಗಳನ್ನು ಕಾಲೇಜಿಗೆ ಬರದಂತೆ ತಡೆಯಲು ನಮ್ಮಲ್ಲಿ ಯಾವುದೇ ಕಾನೂನಿನ ಅಸ್ತ್ರವಿಲ್ಲ. ಗಡಿಯಲ್ಲಿಯೇ ಅವರನ್ನು ತಡೆಯಬೇಕಾಗಿತ್ತು‘ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಕೋವಿಡ್ ಸೋಂಕು ತಗುಲಿದ ಬಗ್ಗೆ ಬುಧವಾರದೊಳಗೆ ಸಮಗ್ರ ವರದಿ ನೀಡುವಂತೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಜಿಲ್ಲಾ ಆರೋಗ್ಯಾಧಿಕಾರಿ ನೋಟಿಸ್‌ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.