ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಎಂಸಿ ಸಭೆ: ಮಕ್ಕಳ ಆರೋಗ್ಯದ ಬಗ್ಗೆ ಆತಂಕ ಬೇಡ

Last Updated 13 ಜೂನ್ 2020, 16:07 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಅಂತರ ಕಾಯ್ದುಕೊಂಡು ಶಾಲೆ ಆರಂಭಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಪೋಷಕರು ಸಹಕಾರ ನೀಡಬೇಕು’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌ ಮನವಿ ಮಾಡಿದರು.

ಶಾಲೆಯಲ್ಲಿ ಶನಿವಾರ ನಡೆದ ಎಸ್‌ಡಿಎಂಸಿ ಸಭೆಯಲ್ಲಿ ಮಾತನಾಡಿ, ‘ಸರ್ಕಾರವು ಶಾಲೆ ಆರಂಭಕ್ಕೆ ಮಾರ್ಗಸೂಚಿ ನೀಡಿದೆ. ಎಂದಿನಂತೆ ಶಾಲೆ ನಡೆಸುವುದು, ಪಾಳಿ ಪದ್ಧತಿ, ದಿನದಿನಬಿಟ್ಟು ಶಾಲೆ ನಡೆಸುವ ಅಂಶಗಳು ಮಾರ್ಗಸೂಚಿಯಲ್ಲಿವೆ’ ಎಂದು ವಿವರಿಸಿದರು.

‘ಶಾಲೆಯಲ್ಲಿ ಹೆಚ್ಚಿನ ಕೊಠಡಿಗಳು ಇರುವುದರಿಂದ ಅಂತರ ಕಾಯ್ದುಕೊಳ್ಳಲು ಕಷ್ಟವಾಗುವುದಿಲ್ಲ. ಆದ್ದರಿಂದ ಎಂದಿನಂತೆ ಬೆಳಿಗ್ಗೆ 10.20ರಿಂದ ಸಂಜೆ 4.20ರವರೆಗೆ ಶಾಲೆ ನಡೆಸಲು ಅಡ್ಡಿಯಿಲ್ಲ. ಪೋಷಕರಿಗೆ ಮಕ್ಕಳ ಆರೋಗ್ಯದ ವಿಚಾರದಲ್ಲಿ ಆತಂಕ ಬೇಡ’ ಎಂದು ಕಿವಿಮಾತು ಹೇಳಿದರು.

‘ಮಕ್ಕಳು ಮನೆಯಿಂದಲೇ ಕುಡಿಯುವ ನೀರು ಮತ್ತು ಊಟ ತರಬೇಕು. ತರಗತಿ ಕೊಠಡಿಯಲ್ಲಿ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುತ್ತೇವೆ. ಪೋಷಕರು ಸಹ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮಕ್ಕಳು ಮನೆಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ ಶಾಲೆಗೆ ಬರಬೇಕು’ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮುನಿಯಪ್ಪ ಸಲಹೆ ನೀಡಿದರು.

ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಶಾಲೆ ತೆರೆಯಲು ಅಡ್ಡಿಯಿಲ್ಲ. ಆದರೆ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಮುಖ್ಯ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಆನ್‌ಲೈನ್‌ ತರಗತಿ: ‘ಈಗಾಗಲೇ ಶಾಲೆಯ 9ನೇ ತರಗತಿ ಮತ್ತು ಎಸ್ಸೆಸ್ಸೆಲ್ಸಿ ತರಗತಿಗೆ ಹೋಗಲಿರುವ ಮಕ್ಕಳಿಗೆ ಮಣಿಪಾಲ್ ಪ್ರತಿಷ್ಠಾನದವರು ಆನ್‌ಲೈನ್‌ ತರಗತಿ ಆರಂಭಿಸಿದ್ದಾರೆ. ಪೋಷಕರು ಮಕ್ಕಳಿಗೆ ಸಾಧ್ಯವಾದಷ್ಟು ಮೊಬೈಲ್ ಒದಗಿಸಿ ಕೊಡಿ’ ಎಂದು ಪ್ರದೀಪ್‌ಕುಮಾರ್‌ ತಿಳಿಸಿದರು.

ಆನ್‌ಲೈನ್‌ ತರಗತಿಯೇ ಅಂತಿಮವಲ್ಲ. ಶಾಲೆ ಆರಂಭಗೊಂಡ ಮೇಲೆ ಶಿಕ್ಷಕರು ಪಠ್ಯಕ್ರಮ ಪೂರ್ಣಗೊಳಿಸುತ್ತಾರೆ. ಆದರೆ, ಮಕ್ಕಳು ಮನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲಿಗೆ ಮುಂದಿನ ತರಗತಿಯ ಪಾಠಗಳನ್ನು ಆನ್‌ಲೈನ್‌ನಲ್ಲಿ ಗಮನಿಸಿದರೆ ಒಳೆಯದು’ ಎಂದು ಹೇಳಿದರು.

ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಭವಾನಿ, ಸುಗುಣಾ, ಪಿ.ಲೀಲಾ, ಫರೀದಾ, ಚಂದ್ರಶೇಖರ್, ವಸಂತಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT