ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿ: ರಾಜಣ್ಣ

Last Updated 15 ಜೂನ್ 2021, 14:58 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೊರೊನಾ ಸೋಂಕು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಶೀಘ್ರದಲ್ಲೇ ಶಾಲೆಗಳು ಆರಂಭವಾಗುವ ವಿಶ್ವಾಸವಿದೆ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ ಅಭಿಪ್ರಾಯಪಟ್ಟರು.

ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಮಂಗಳವಾರ ಆಹಾರ ಧಾನ್ಯ ವಿತರಿಸಿ ಮಾತನಾಡಿ, ‘ಕೊರೊನಾ ಸೋಂಕಿನ ಭಯದಿಂದ ಶಾಲೆಗಳು ಮುಚ್ಚಿದ ಕಾರಣ ಮಕ್ಕಳು ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದಾರೆ. ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಮರುಸೃಷ್ಟಿಸುವ ಅಗತ್ಯವಿದೆ’ ಎಂದು ತಿಳಿಸಿದರು.

‘ಕೋವಿಡ್ ಮಹಾಮಾರಿ ಜನರಿಗೆ ಸಂಕಷ್ಟ ತಂದೊಡ್ಡಿದೆ. ಜನರು ಆತ್ಮಸ್ಥೈರ್ಯರಿಂದ ಕೋವಿಡ್‌ ವಿರುದ್ಧ ಹೋರಾಟ ನಡೆಸಿ ಗೆಲುವು ಸಾಧಿಸಬೇಕು. ಸದ್ಯ ಸೋಂಕು ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಮಕ್ಕಳು ಮತ್ತೆ ಶಾಲೆಗೆ ಬರುವ ವಾತಾವರಣ ನಿರ್ಮಾಣವಾಗಲಿದೆ’ ಎಂದು ಗ್ರಾ.ಪಂ ಸದಸ್ಯ ಎ.ಎಸ್.ನಂಜುಂಡೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

‘18 ವರ್ಷ ದಾಟಿದ ಪ್ರತಿಯೊಬ್ಬರಿಗೂ ಸರ್ಕಾರದಿಂದ ಉಚಿತವಾಗಿ ಕೋವಿಡ್‌ ಲಸಿಕೆ ಹಾಕಲಾಗುತ್ತಿದೆ. ಮಕ್ಕಳಿಗೂ ಲಸಿಕೆ ನೀಡುವಂತಾದರೆ ಶಾಲೆಗಳನ್ನು ನಿರಾಳವಾಗಿ ನಡೆಸಬಹುದು. ಜತೆಗೆ ಪೋಷಕರ ಆತಂಕ ನಿವಾರಣೆಯಾಗಲಿದ್ದು, ಕೋವಿಡ್‌ ಮುಕ್ತ ಸಮಾಜ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಆಹಾರ ಧಾನ್ಯ ಬಂದಿದ್ದು, 8ನೇ ತರಗತಿ ಮಕ್ಕಳಿಗೆ ತಲಾ 10 ಕೆ.ಜಿ 350 ಗ್ರಾಂ ಅಕ್ಕಿ, 9 ಮತ್ತು 10ನೇ ತರಗತಿ ಮಕ್ಕಳಿಗೆ ತಲಾ 12 ಕೆ.ಜಿ 450 ಗ್ರಾಂ ಅಕ್ಕಿ ಹಾಗೂ ಎಲ್ಲಾ ಮಕ್ಕಳಿಗೂ ತಲಾ ಒಂದು ಕೆಜಿ ಅಡುಗೆ ಎಣ್ಣೆ ವಿತರಿಸಲಾಗುತ್ತಿದೆ’ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಚ್ಚಿದಾನಂದಮೂರ್ತಿ ವಿವರಿಸಿದರು.

ಗ್ರಾ.ಪಂ ಸದಸ್ಯರಾದ ಅಪ್ಪಯ್ಯಣ್ಣ, ನಾರಾಯಣಸ್ವಾಮಿ, ಲಲಿತಮ್ಮ, ಸೋಮಶೇಖರ್, ಶಿಕ್ಷಕರಾದ ಭವಾನಿ, ಶ್ವೇತಾ, ಸುಗುಣಾ, ಲೀಲಾ, ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು, ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT