ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದ ಬೆಳೆ ನಷ್ಟ: ಜಿಲ್ಲಾಧಿಕಾರಿ ಮಂಜುನಾಥ್‌ ಪರಿಹಾರ ಭರವಸೆ

ಮಾವು ಹಾನಿಯಾಗಿದೆ
Last Updated 20 ಏಪ್ರಿಲ್ 2019, 14:31 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾದ ಕಾರಣ ಬೆಳೆ ನಷ್ಟವಾಗಿದ್ದು, ಪರಿಹಾರ ಕಲ್ಪಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಲೋಕಸಭಾ ಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಇರಿಸಿರುವ ಇಲ್ಲಿನ ಸರ್ಕಾರಿ ಪ್ರಥಮ ಕಾಲೇಜಿಗೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಳೆಯಿಂದ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾವು ಬೆಳೆಗೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಬಂಗಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗಿದ್ದು, ಮನೆಗಳು ಕುಸಿದಿವೆ. ಅಲ್ಲದೇ, ಮನೆಗಳಿಗೆ ಮಳೆ ನೀರು ನುಗ್ಗಿದೆ. ಮತ್ತೊಂದು ಕಡೆ ಕೋಳಿ ಫಾರಂಗೆ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳಿಂದ ಮಳೆ ಹಾನಿಯ ವರದಿ ಪಡೆದು ಜಿಲ್ಲಾಡಳಿತದಿಂದ ಪರಿಹಾರ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದು ಇವಿಎಂಗಳು ಭದ್ರತಾ ಕೊಠಡಿಯಲ್ಲಿ ಭದ್ರವಾಗಿವೆ. ಸ್ಟ್ರಾಂಗ್‌ ರೂಂನ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ನಾನು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯು ಪ್ರತಿನಿತ್ಯ ಭದ್ರತಾ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.

‘ಮೇ 23ರಂದು ಮತ ಎಣಿಕೆ ನಡೆಯುವವರೆಗೂ ಎವಿಎಂ ಕಾಪಾಡಿಕೊಳ್ಳಬೇಕಿದೆ. ಕೇಂದ್ರದ ಅರೆಸೇನಾ ಪಡೆ ಮತ್ತು ಸ್ಥಳೀಯ 120 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಸ್ಟ್ರಾಂಗ್‌ ರೂಂನ ಭದ್ರತೆಗೆ ನಿಯೋಜಿಸಲಾಗಿದೆ. ಸಿಬ್ಬಂದಿಗೆ ಹೊರಗಿನಿಂದ ಊಟ, ತಿಂಡಿ ವ್ಯವಸ್ಥೆ ಮಾಡಿಲ್ಲ. ಸಿಬ್ಬಂದಿಗೆ ಇಲ್ಲಿಯೇ ಅಡುಗೆ ಸಿದ್ಧಪಡಿಸಿಕೊಳ್ಳಲು ಗ್ಯಾಸ್‌ ಸಿಲಿಂಡರ್, ಕುಡಿಯುವ ನೀರು ಹಾಗೂ ಆಹಾರ ಪದಾರ್ಧ ಕಲ್ಪಿಸಲಾಗಿದೆ. ಜತೆಗೆ ವಿಶ್ರಾಂತಿಗೂ ಸೌಕರ್ಯ ಕಲ್ಪಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಕ್ಯಾಮೆರಾ ಅಳವಡಿಕೆ: ‘ಭದ್ರತಾ ಕೇಂದ್ರದ ಒಳಗೆ ಮತ್ತು ಹೊರಗೆ 62 ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಕ್ಯಾಮೆರಾಗಳು ದಿನ 24 ತಾಸೂ ಕಾರ್ಯ ನಿರ್ವಹಿಸುತ್ತವೆ. ಸಿಬ್ಬಂದಿ 3 ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ಕಡೆಯ ಏಜೆಂಟ್‌ಗಳು ಕೇಂದ್ರದಲ್ಲಿ ಇರುವುದಕ್ಕ ಅವಕಾಶವಿದೆ. ಸಾರ್ವಜನಿಕರು ಸಹ ಸಿ.ಸಿ ದೃಶ್ಯಾವಳಿ ನೋಡಬಹುದು’ ಎಂದರು.

‘ಯುವ ಮತದಾರರ ಮತದಾನ ಸೇರಿದಂತೆ ಬೂತ್‌ವಾರು ಪ್ರಮಾಣ ವಿವರವನ್ನು ಮತ ಎಣಿಕೆ ಬಳಿಕವಷ್ಟೇ ನೀಡಲಾಗುವುದು. ಮಳೆಗಾಲ ಆರಂಭವಾಗಿರುವುದರಿಂದ ಮಳೆ ನೀರು ಸೋರಿಕೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಮಳೆ ಬಂದರೂ ನೀರು ಸರಾಗವಾಗಿ ಹರಿದು ಹೋಗಲು ಪೈಪ್‌ಲೈನ್‌ ಅಳವಡಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT