ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಗಾಂಜಾ, ಡ್ರಗ್ಸ್‌ ಮಾಫಿಯಾಕ್ಕೆ ಕಡಿವಾಣ

Published 8 ನವೆಂಬರ್ 2023, 5:29 IST
Last Updated 8 ನವೆಂಬರ್ 2023, 5:29 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ 17 ವರ್ಷದ ಬಾಲಕನ ಹತ್ಯೆ ಪ್ರಕರಣ ಬೆನ್ನಲ್ಲೇ ಜಿಲ್ಲಾ ಪೊಲೀಸರು ಅಕ್ರಮ ಚಟುವಟಿಕೆಗಳು ಹಾಗೂ ಡ್ರಗ್ಸ್‌, ಗಾಂಜಾ ಮಾಫಿಯಾಕ್ಕೆ ಕಡಿವಾಣ ಹಾಕಲು ವಿಶೇಷ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಜಿಲ್ಲಾ ವರಿಷ್ಠಾಧಿಕಾರಿ ಎಂ.ನಾರಾಯಣ ನೇತೃತ್ವದಲ್ಲಿ ಪೊಲೀಸರು ಶಾಲಾ ಕಾಲೇಜು ಮಕ್ಕಳಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ನಗರದ ಗಲ್‌ಪೇಟೆ ಪೊಲೀಸರು ಮಂಗಳವಾರ ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗೂ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಿದರು.

‘ನನ್ನ ಜವಾಬ್ದಾರಿಯನ್ನು ಕಾನೂನಿನ ಪ್ರಕಾರ ನಿಭಾಯಿಸುತ್ತಿದ್ದೇನೆ. ಕರ್ತವ್ಯ ಲೋಪವೆಸಗಿದ 10 ಜನ ಪೊಲೀಸ್‌ ಸಿಬ್ಬಂದಿಯನ್ನು ಈಗಾಗಲೇ ಅಮಾನತುಗೊಳಿಸಿದ್ದೇವೆ. ಪೊಲೀಸ್‌ ಬೀಟ್‌ ಹೆಚ್ಚಿದ್ದೇನೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಉಳಿದ ಇಲಾಖೆಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕಿದೆ. ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು. ಅಪರಾಧ ಪ್ರಕರಣ ತಡೆಯಲು ಸಂಘಟಿತ ಪ್ರಯತ್ನ ನಡೆಸಬೇಕು’ ಎಂದು ಎಂ.ನಾರಾಯಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಯುವಕರನ್ನು ಡ್ರಗ್ಸ್‌ ಹಾಗೂ ಮಾದಕ ವ್ಯಸನದಿಂದ ಪಾರು ಮಾಡಬೇಕೆಂಬ ಕೂಗು ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಲವರು ಅಭಿಯಾನ ಕೈಗೊಂಡಿದ್ದರೆ, ಇನ್ನು ಕೆಲವರು ಜಾಗೃತಿ ಮೂಡಿಸಲು ಆಗ್ರಹಿಸುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮೇಲೆ ನಿಗಾ ಇಡಲು ಆಡಳಿತ ಮಂಡಳಿಗೆ ಜಿಲ್ಲಾಡಳಿತ ಸೂಚನೆ ಕೂಡ ನೀಡಿದೆ.

‘ಕೊಲೆ, ಅನೈತಿಕ ಚಟುವಟಿಕೆಗಳಿಗೆ ಜಿಲ್ಲೆಯ ಯುವ ಜನತೆ ಮಾದಕ ವ್ಯಸನಿಗಳಾಗುತ್ತಿರುವುದು ಒಂದೂ ಕಾರಣ’ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆ ಮುಖಂಡರು, ನಾಗರಿಕರು ಹೇಳುತ್ತಿದ್ದಾರೆ.

‘ಸೇವ್‌ ಯೂತ್ಸ್‌, ಸೇವ್‌ ಕೋಲಾರ’ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್‌ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೈಗೊಂಡಿದ್ದಾರೆ.

ಇನ್ನು ಬೆಳಿಗ್ಗೆಯೇ ಮದ್ಯದಂಗಡಿಗಳು ಬಾಗಿಲು ತೆರೆಯುತ್ತಿರುವುದು, ಪೆಟ್ಟಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಕೂಗು ಎದ್ದಿದೆ. ಈ ಸಂಬಂಧ ಪೊಲೀಸ್‌ ಇಲಾಖೆಯೇ ದಾಳಿ ನಡೆಸುತ್ತಿದೆ. ವೈದ್ಯರ ಚೀಟಿ ಇಲ್ಲದೆ ಔಷಧ ನೀಡುವ, ಮತ್ತು ಭರಿಸುವ ವಸ್ತುಗಳನ್ನು ಮಾರಾಟ ಮಾಡುವ ಮೆಡಿಕಲ್‌ ಸ್ಟೋರ್‌ಗಳ ಮೇಲೆಯೂ ದಾಳಿ ನಡೆಸುತ್ತಿದ್ದಾರೆ. ಆದರೆ, ಅಬಕಾರಿ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆ ಮಾತ್ರ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

158 ವ್ಯಸನಿಗಳ ಮೇಲೆ ಪ್ರಕರಣ

ಈಗಾಗಲೇ 158 ಗಾಂಜಾ ವ್ಯಸನಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. 28 ಗಾಂಜಾ ಪೆಡ್ಲರ್‌ ಬಂಧಿಸಿ 100 ಕೆ.ಜಿಗೂ ಅಧಿಕ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪೆಟ್ಟಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದವರ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯುತ್ತಿದ್ದೇವೆ. ಪೊಲೀಸ್‌ ಬೀಟ್‌ ಹೆಚ್ಚಿಸಿದ್ದು ಅನುಮಾನಾಸ್ಪದವಾಗಿ ಓಡಾಡುವ 100 ಮಂದಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಲಾಗಿದೆ. ನಾವೂ ಶಾಲಾ ಕಾಲೇಜುಗಳಿಗೆ ತೆರಳಿ ಅರಿವು ಮೂಡಿಸುತ್ತಿದ್ದೇವೆ. ಬಾಲಕನ ಕೊಲೆ ಪ್ರಕರಣದಲ್ಲಿ ಇನ್ನೂ ಬಂಧನವಾಗಿಲ್ಲ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದು ಶೋಧ ಕಾರ್ಯ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಕತ್ತಿ ಹಿಡಿದು ಷೋ ನೀಡಿರುವ ಕಾನೂನು ಬಾಹಿರವಾಗಿ ನಡೆದುಕೊಂಡಿರುವ 28 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.

ಚೆಕ್‌ ಪೋಸ್ಟ್‌ನಲ್ಲಿ ಹೆಚ್ಚಿನ ನಿಗಾ

ಡ್ರಗ್ಸ್‌ ಮಾಫಿಯಾಕ್ಕೆ ಕಡಿವಾಣ ಹಾಕಲು ಇಬ್ಬರು ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಡಿವೈಎಸ್ಪಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್‌ ಬೀಟ್‌ ಹೆಚ್ಚಿಸಬೇಕು ಆಂಧ್ರಪ್ರದೇಶ ತಮಿಳುನಾಡಿನಿಂದ ಬರುವ ಗಾಂಜಾ ಸಾಗಣೆ ಮೇಲೆ ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್‌ ಪೋಸ್ಟ್‌ನಲ್ಲಿ ಹೆಚ್ಚಿನ ನಿಗಾ ಇಡಲು ಹೇಳಿದ್ದೇನೆ. ಜಿಲ್ಲೆಯ ಪೊಲೀಸರು ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್‌ ಗಾಂಜಾ ವಶಕ್ಕೆ ಪಡೆದಿದ್ದಾರೆ. ಕಟ್ಟುನಿಟ್ಟಿನ ಕ್ರಮ ವಹಿಸಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ನಿರ್ದೇಶನ ನೀಡಿದ್ದೇನೆ. ವೈದ್ಯರ ಚೀಟಿ ಇಲ್ಲದೆ ಮಕ್ಕಳಿಗೆ ಔಷಧ ನೀಡಬಾರೆಂದು ಈಗಾಗಲೇ ಮೆಡಿಕಲ್‌ ಶಾಪ್‌ಗಳಿಗೆ ಸೂಚನೆ ಕೊಟ್ಟಿದ್ದೇನೆ. ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗೂ ಸೂಚನೆ ನೀಡಿದ್ದೇನೆ. ಪೋಷಕರು ಮಕ್ಕಳ ಚಲನವಲನದ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ

ಶಾಲಾ ಕಾಲೇಜು ಆವರಣದಲ್ಲಿ ನೈತಿಕ ಚಟುವಟಿಕೆಗೆ ಕಡಿವಾಣ ಹಾಕಿ ಜಿಲ್ಲೆಯ ಶಾಲಾ ಕಾಲೇಜು ಆವರಣಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಕೆಲವು ಕಿಡಿಗೇಡಿ ಗುಂಪುಗಳು ಶಾಲಾ ಆವರಣಗಳಲ್ಲಿ ಬೀಡಿ-ಸಿಗರೇಟ್ ಗಾಂಜಾ ಜೂಜಾಟ ಮದ್ಯಪಾನ ಮಾಡುವುದು ಇತರೆ ಅನೈತಿಕ ಚಟುವಟಿಕೆಗಳನ್ನು ಮಾಡುವ ತಂಗುದಾಣವನ್ನಾಗಿಸಿಕೊಂಡಿದ್ದಾರೆ ಎಂದು ಎಸ್.ಆರ್.ಮುರಳಿಗೌಡ ಹೇಳಿದರು

ಮೌನವೇಕೆ?

ನಗರಸಭೆ ಸದಸ್ಯ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರ ಮೌನವೇಕೆ? ಯುವಜನರು ಡಾನ್ ಆಗಲು ಕೊಲೆ ದರೋಡೆ ಮತ್ತಿತರ ಸಮಾಜಘಾತಕ ಕೃತ್ಯಗಳಲ್ಲಿ ಭಾಗಿಯಾಗಿ ದಾರಿ ತಪ್ಪುತ್ತಿರುವುದು ವಿಷಾದನೀಯ. ಡ್ರಗ್ಸ್‌ ಮಾಫಿಯಾ ತಡೆಗಟ್ಟಲು ವಿಶೇಷ ತಂಡ ರಚನೆ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದರೂ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರು ಮೌನದಿಂದ ಇರುವುದು ಏಕೆ? ಸಿನಿಮಾ ಕ್ರಿಕೆಟ್ ನಟರಂತೆ ಹೇರ್ ಸ್ಟೈಲ್ ವಸ್ತ್ರ ಬದಲಾವಣೆ ಮಾಡಿಕೊಂಡು ಪುಡಿ ರೌಡಿಗಳಂತೆ ಕಾಲೇಜುಗಳಿಗೆ ಬರುತ್ತಿದ್ದರೂ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳದ ಪೋಷಕರ ಗಮನಕ್ಕೆ ತರದೆ ಇರುವುದೇ ಖಂಡನೀಯ ಎಂದು ರೈತ ಮುಖಂಡ ಕೆ.ನಾರಾಯಣಗೌಡ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT