ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ ಜಿಲ್ಲೆಗೆ ಅಂಟಿದ ಶಾಪ: ಪಕ್ಷೇತರ ಅಭ್ಯರ್ಥಿ ರಮೇಶ್‌ಬಾಬು ಕಿಡಿ

Last Updated 4 ಏಪ್ರಿಲ್ 2019, 13:45 IST
ಅಕ್ಷರ ಗಾತ್ರ

ಕೋಲಾರ: ‘ಸಂಸದ ಕೆ.ಎಚ್‌.ಮುನಿಯಪ್ಪ ಜಿಲ್ಲೆಗೆ ಅಂಟಿರುವ ಶಾಪ. ಈ ಶಾಪ ವಿಮೋಚನೆಯಾಗಲು ಮತದಾರರು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಬೇಕು’ ಎಂದು ಪಕ್ಷೇತರ ಅಭ್ಯರ್ಥಿ ವಿ.ಎಂ.ರಮೇಶ್‌ಬಾಬು ಮನವಿ ಮಾಡಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಗುರುವಾರ ಕೋಲಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ, ‘ಕಾಂಗ್ರೆಸ್‌ ಹಾಗೂ ಬಿಜೆಪಿಯ ಸ್ಥಳೀಯ ನಾಯಕರ ಪಿತೂರಿಯಿಂದ ನನಗೆ ಬಿಜೆಪಿ ಟಿಕೆಟ್ ತಪ್ಪಿದೆ. ಜನರಿಗೆ ತೊಂದರೆ ಕೊಡುವ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜಕೀಯ ವಿರೋಧಿಗಳು ಈ ಕುತಂತ್ರ ಮಾಡಿದ್ದಾರೆ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬರ ಪರಿಸ್ಥಿತಿ ಎದುರಾಗಿದ್ದು, ಜನ ರೋಸಿ ಹೋಗಿದ್ದಾರೆ. ನೀರಿನ ಸಮಸ್ಯೆ ಕಾರಣಕ್ಕೆ ಕೃಷಿ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ. ಹೈನೋದ್ಯಮವು ಬಿಕ್ಕಟ್ಟು ಎದುರಿಸುತ್ತಿದೆ. ಆದರೆ, ಮುನಿಯಪ್ಪ ಅವರನ್ನು ಒಳಗೊಂಡಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಜನರ ಸಂಕಷ್ಟದ ಅರಿವಿಲ್ಲ’ ಎಂದು ಕಿಡಿಕಾರಿದರು.

‘ಮೇವಿನ ಕೊರತೆ ನಡುವೆಯೂ ರೈತರು ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಲಭ್ಯ ಅಲ್ಪ ಸ್ವಲ್ಪ ನೀರಿನಲ್ಲಿ ಕೃಷಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸಿಕೊಡುವಲ್ಲಿ ಮುನಿಯಪ್ಪ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

ಪಾಠ ಕಲಿಸಬೇಕು: ‘ಬರದಿಂದ ತತ್ತರಿಸಿರುವ ಜಿಲ್ಲೆಯ ಹಿತ ಕಾಯಲು ರಾಜ್ಯ ಸರ್ಕಾರ ಕೆ.ಸಿ ವ್ಯಾಲಿ ಯೋಜನೆ ಜಾರಿಗೊಳಿಸಿತು. ಆದರೆ, ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರು ಕೆಲ ವ್ಯಕ್ತಿಗಳನ್ನು ಎತ್ತಿಕಟ್ಟಿ ಸುಪ್ರೀಂ ಕೋರ್ಟ್‌ನಿಂದ ಕೆ.ಸಿ ವ್ಯಾಲಿ ಯೋಜನೆಗೆ ತಡೆಯಾಜ್ಞೆ ತಂದಿದ್ದಾರೆ. ಆ ವ್ಯಕ್ತಿ ಯಾರೆಂದು ಎಲ್ಲರಿಗೂ ಗೊತ್ತಿದೆ. ಜನ ಆ ವ್ಯಕ್ತಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಪರೋಕ್ಷವಾಗಿ ಮುನಿಯಪ್ಪ ವಿರುದ್ಧ ಹರಿಹಾಯ್ದರು.

‘ಕ್ಷೇತ್ರದ ಜನ ರಾಜಕೀಯ ಬದಲಾವಣೆ ಭಯಸಿದ್ದಾರೆ. ಬಿಜೆಪಿ ಅಭ್ಯರ್ಥಿಯ ಪೂರ್ವಾಪರದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಮಚ್ಚು ಮುನಿಸ್ವಾಮಿ, ರೌಡಿ ಶೇಟರ್ ಎಂಬ ಸುದ್ದಿ ಹರಿದಾಡುತ್ತಿದೆ. ಆ ವ್ಯಕ್ತಿ ಇಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ನನಗೆ ಬಿಜೆಪಿಯ ಟಿಕೆಟ್‌ ನೀಡಿದ್ದರೆ ಖಂಡಿತ ಗೆಲುವು ಸಾಧಿಸುತ್ತಿದ್ದೆ. ನನ್ನ ಚುನಾವಣಾ ಚಿಹ್ನೆ ಸಿಲಿಂಡರ್. ಮತದಾರರು ಈ ಗುರುತಿಗೆ ಮತ ಹಾಕಿ ಗೆಲ್ಲಿಸಬೇಕು. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ರಮೇಶ್‌ಬಾಬುರ ಬೆಂಬಲಿಗರಾದ ಗಣೇಶ್, ಶ್ರೀನಿವಾಸ್, ವೆಂಕಟರವಣಪ್ಪ, ಚೌಡರೆಡ್ಡಿ, ಗಂಗಾಧರ, ಮಂಜುನಾಥ್, ರಮೇಶ್‌ಕುಮಾರ್‌, ಮುನಿವೆಂಕಟಪ್ಪ, ರಾಮಾಂಜಿನಪ್ಪ, ಪ್ರದೀಪ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT