ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನೋದ್ಯಮ ರೈತರ ಆರ್ಥಿಕತೆಗೆ ಆಸರೆ- ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್

Last Updated 21 ಆಗಸ್ಟ್ 2021, 13:20 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಸಂಕಷ್ಟ ಹಾಗೂ ಬರಗಾಲದಲ್ಲೂ ಹೈನೋದ್ಯಮವು ಜಿಲ್ಲೆಯ ರೈತರ ಆರ್ಥಿಕತೆಗೆ ಆಸರೆಯಾಗಿದೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಳ್ಳಿಪುರ ಗ್ರಾಮದಲ್ಲಿ ಶನಿವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ‘ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾಲಿನ ಸಂಘಗಳಿವೆ. ತಾಲ್ಲೂಕಿನಲ್ಲಿ ಹೆಚ್ಚು ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಿ ಶುದ್ಧ ಮತ್ತು ಗುಣಮಟ್ಟದ ಹಾಲು ಶೇಖರಣೆಗೆ ಒತ್ತು ನೀಡಲಾಗುತ್ತದೆ’ ಎಂದರು.

‘ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ 182 ಸಂಘಗಳು ಸ್ವಂತ ಕಟ್ಟಡ ಹೊಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಿಸುತ್ತೇವೆ. ಕೋಚಿಮುಲ್‌ನಿಂದ ₹ 3 ಲಕ್ಷ, ಕೆಎಂಎಫ್‌ನಿಂದ ₹ 4.50 ಲಕ್ಷ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ₹ 1 ಲಕ್ಷ ಅನುದಾ ಪಡೆದು ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಕೋವಿಡ್‌ ಕಾರಣಕ್ಕೆ ಒಕ್ಕೂಟ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದರಿಂದ ಹಾಲು ಖರೀದಿ ದರ ಕಡಿಮೆ ಮಾಡಲಾಗಿದೆ. ಮುಂದೆ ಒಕ್ಕೂಟದ ಪರಿಸ್ಥಿತಿ ಸುಧಾರಿಸಿದಾಗ ಹಾಲು ಖರೀದಿ ದರ ಹೆಚ್ಚಿಸುತ್ತೇವೆ. ಹಾಲು ಉತ್ಪಾದಕರು ಒಕ್ಕೂಟದಿಂದ ಸಿಗುವ ರಾಸು ವಿಮೆ, ತುರ್ತು ಚಿಕಿತ್ಸಾ ಸೌಲಭ್ಯ, ಪಶು ಆಹಾರ, ಮೇವಿನ ಬೀಜ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಹಿತರಕ್ಷಣೆಗೆ ಬದ್ಧ: ‘ಕೋಚಿಮುಲ್ ರೈತರ ಹಿತರಕ್ಷಣೆಗೆ ಬದ್ಧವಾಗಿದೆ. ಹಸು ವಿಮೆ ಮೂಲಕ ಹೈನುಗಾರರನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ಸಂಕಷ್ಟದಲ್ಲಿರುವವರಿಗೆ ಒಕ್ಕೂಟ ನೆರವಾಗಲಿದೆ. ತಾಲ್ಲೂಕನ್ನು ಕ್ಯಾನ್‌ರಹಿತ ಹಾಲು ಸಂಗ್ರಹ ತಾಲ್ಲೂಕಾಗಿ ಮಾಡುತ್ತೇವೆ. ಕೋಚಿಮುಲ್ ಜಿಲ್ಲೆಯ ರೈತರ ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ’ ಎಂದು ವಿವರಿಸಿದರು.

ಕೋಚಿಮುಲ್‌ ಶಿಬಿರ ವ್ಯವಸ್ಥಾಪಕ ಡಾ.ಎ.ಸಿ,ಶ್ರೀನಿವಾಸಗೌಡ, ಉಪ ವ್ಯವಸ್ಥಾಪಕ ಶ್ರೀಧರಮೂರ್ತಿ, ಸಂಘದ ವಿಸ್ತರಣಾಧಿಕಾರಿ ಎಸ್.ರಾಮಾಂಜಿನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶಪ್ಪ, ಸಂಘದ ಅಧ್ಯಕ್ಷೆ ಸೌಭಾಗ್ಯಮ್ಮ, ಕಾರ್ಯದರ್ಶಿ ಬಸವರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT