ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 3 ಸೋಂಕಿತರ ಸಾವು

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಮರಣ ಮೃದಂಗ: 7ಕ್ಕೇರಿದ ಸಾವಿನ ಸಂಖ್ಯೆ
Last Updated 15 ಜುಲೈ 2020, 17:41 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 3 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಜನ ಭಯಭೀತರಾಗಿದ್ದಾರೆ.

ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೋವಿಡ್‌ ವಾರ್ಡ್‌ನಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಸೋಂಕಿತರು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ಸೋಂಕಿತ ವೃದ್ಧ ಹಾಗೂ ಶ್ರೀನಿವಾಸಪುರ ಪಟ್ಟಣದ ಸೋಂಕಿತ ವ್ಯಕ್ತಿ, ಮಾಲೂರು ತಾಲ್ಲೂಕಿನ ನೆಲ್ಲಹಳ್ಳಿ ಗ್ರಾಮದ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ 7ಕ್ಕೆ ಏರಿದೆ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸ್ಫೋಟವಾಗಿದ್ದು, ಹೊಸದಾಗಿ 38 ಮಂದಿಗೆ ಸೋಂಕು ತಗುಲಿದೆ. ಸಕ್ರಿಯ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿ ದಾಟಿದ್ದು, ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 14 ಮಂದಿಗೆ ಸೋಂಕು ಹರಡಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 12 ಮಂದಿಗೆ ಮತ್ತು ಹೊರ ಜಿಲ್ಲೆಗೆ ಹೋಗಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. 37 ವರ್ಷದ ಪುರುಷರೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇವರಿಗೆ ಸೋಂಕು ಹೇಗೆ ತಗುಲಿತು ಎಂಬ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ಮುಂದುವರಿಸಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ 11 ಮಂದಿಗೆ ಸೋಂಕು ಇರುವುದು ಗೊತ್ತಾಗಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 9 ಮಂದಿಗೆ ಮತ್ತು ಸೋಂಕಿತ ವ್ಯಕ್ತಿಯ ಸಂಖ್ಯೆ 19,799ರ ಸಂಪರ್ಕದಿಂದ ಇಬ್ಬರು ಪುರುಷರಿಗೆ ಸೋಂಕು ಬಂದಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 4 ಮಂದಿಗೆ, ಸೋಂಕಿತ ವ್ಯಕ್ತಿಯ ಸಂಖ್ಯೆ 19,794ರ ಸಂಪರ್ಕದಿಂದ ಮಹಿಳೆಗೆ ಮತ್ತು ಸೋಂಕಿತ ವ್ಯಕ್ತಿ ಸಂಖ್ಯೆ 21,661ರ ಸಂಪರ್ಕದಿಂದ ಪುರುಷರೊಬ್ಬರಿಗೆ ಸೋಂಕು ಹರಡಿದೆ.ಮುಳಬಾಗಿಲು ತಾಲ್ಲೂಕಿನಲ್ಲಿ ಒಟ್ಟಾರೆ ಮಂದಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ವಿಷಮ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಮಾಲೂರು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 48 ವರ್ಷದ ಪುರುಷರೊಬ್ಬರಿಗೆ ಸೋಂಕು ಬಂದಿರುವುದು ಖಚಿತವಾಗಿದೆ.

ಸೋಂಕಿತ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೇ, ಸುರಕ್ಷತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT