ಗುರುವಾರ , ಮೇ 6, 2021
23 °C
ಜನರಿಕ್‌ ಔಷಧ ಮಳಿಗೆ ಆರಂಭಿಸಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಸೂಚನೆ‌

ನಿರ್ಲಕ್ಷ್ಯ ತೋರಿದರೆ ಸಾಲ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬಡವರಿಗೆ ಆರೋಗ್ಯ ಸೇವೆ ಒದಗಿಸುವ ಪುಣ್ಯದ ಕೆಲಸವಾದ ಜನರಿಕ್ ಔಷಧ ಮಳಿಗೆ ಆರಂಭಿಸಲು ನಿರ್ಲಕ್ಷ್ಯ ತೋರುವ ಸೊಸೈಟಿಗಳಿಗೆ ಸಾಲ ಸೌಲಭ್ಯ ಕಡಿತಗೊಳಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಎಚ್ಚರಿಕೆ ನೀಡಿದರು.

ಜಿಲ್ಲೆಯ ಸೊಸೈಟಿಗಳಲ್ಲಿ ಜನರಿಕ್ ಔಷಧ ಮಳಿಗೆಗಳ ಆರಂಭ ಸಂಬಂಧ ಇಲ್ಲಿ ಗುರುವಾರ ನಡೆದ ಬ್ಯಾಂಕ್‌ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌ನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಕೊರೊನಾ ಸೋಂಕು ಜನರನ್ನು ಸಂಕಷ್ಟಕ್ಕೆ ದೂಡಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಸಾಲ ನೀಡುವುದರ ಜತೆಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅವಕಾಶ ಸಿಕ್ಕಿದ’ ಎಂದರು.

‘ಗ್ರಾಮೀಣ ಜನರಿಗೆ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸಿ ಅವರ ಜೀವ ಕಾಪಾಡುವ ಪುಣ್ಯದ ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರದಿರಿ. ಸೊಸೈಟಿಗಳ ಮೂಲಕ ರೈತರು, ಮಹಿಳೆಯರಿಗೆ ಸಾಲ ನೀಡಿ ಆರ್ಥಿಕ ಶಕ್ತಿ ತುಂಬುತ್ತಿದ್ದೇವೆ, ಇದೀಗ ಬಡವರ ಆರೋಗ್ಯ ರಕ್ಷಣೆಗೆ ನೆರವಾಗುವ ಸೌಭಾಗ್ಯ ಸೊಸೈಟಿಗಳಿಗೆ ಸಿಕ್ಕಿದೆ’ ಎಂದು ಅಭಿಪ್ರಾಯಪಟ್ಟರು.

ಬಡ್ಡಿ ಲಾಭ ಹಂಚಿಕೆ: ‘ಈ ಹಿಂದೆ ದಿವಾಳಿಯಾಗಿದ್ದ ಸೊಸೈಟಿಗಳು ಈಗ ಸದೃಢವಾಗಿವೆ. ಡಿಸಿಸಿ ಬ್ಯಾಂಕ್ ಸೊಸೈಟಿಗಳಿಗೆ ಎಲ್ಲಾ ರೀತಿಯ ನೆರವು ಒದಗಿಸಿದೆ. ಕೆಸಿಸಿ ಹಾಗೂ ಸ್ವಸಹಾಯ ಗುಂಪುಗಳಿಗೆ ನೀಡಿರುವ ಸಾಲದ ಬಡ್ಡಿ ಲಾಭದಲ್ಲಿ ಈಗಾಗಲೇ ಸುಮಾರು ₹ 14,24 ಕೋಟಿಯನ್ನು ಸೊಸೈಟಿಗಳಿಗೆ ಹಂಚಿಕೆ ಮಾಡಲಾಗಿದೆ’ ಎಂದು ವಿವರಿಸಿದರು.

‘ಲಾಭದ ಹಣದಲ್ಲೇ ಜನರಿಕ್ ಮಳಿಗೆ ಆರಂಭಿಸಲು ಅಗತ್ಯ ಮೂಲಸೌಕರ್ಯ ಪಡೆದುಕೊಳ್ಳಿ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲೇ ಜನರಿಕ್ ಔಷಧ ಮಳಿಗೆ ಆರಂಭಿಸಲು ಒತ್ತು ನೀಡಿ. ಇದಕ್ಕೆ ಅನುಮತಿ ಹಾಗೂ ಜಾಗ ಪಡೆದುಕೊಳ್ಳಿ. ಸರ್ಕಾರದ ಅನುಮತಿ ಸುಲಭವಾಗಿ ಸಿಗುತ್ತದೆ’ ಎಂದು ತಿಳಿಸಿದರು.

‘ಜನರಿಕ್ ಮಳಿಗೆ ಆರಂಭಕ್ಕೆ ರಾಜ್ಯ ಸಹಕಾರ ಮಹಾಮಂಡಳದ ನೆರವಿನ ಜತೆಗೆ ಡಿಸಿಸಿ ಬ್ಯಾಂಕ್ ಮತ್ತು ಅಫೆಕ್ಸ್ ಬ್ಯಾಂಕಿನಿಂದಲೂ ನೆರವು ಒದಗಿಸಲಾಗುತ್ತದೆ. ಸೊಸೈಟಿಗಳಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಇದು ಉತ್ತಮ ಯೋಜನೆ. ಬಡವರ ಸೇವೆಯ ಜತೆಗೆ ಹೆಚ್ಚಿನ ಲಾಭವೂ ಸಿಗಲಿದೆ’ ಎಂದು ಸಲಹೆ ನೀಡಿದರು.

‘ರಾಜ್ಯದೆಲ್ಲೆಡೆ ಜನರಿಕ್ ಮಳಿಗೆಗಳನ್ನು ಆರಂಭಿಸಿ ಬಡವರಿಗೆ ನೆರವಾಗಲು ರಾಜ್ಯ ಸಹಕಾರ ಮಹಾಮಂಡಳ ಮುಂದೆ ಬಂದಿದೆ. ಶಾಸಕ ಶ್ರೀನಿವಾಸಗೌಡರು ಅಲ್ಲಿ ನಿರ್ದೇಶಕರಾಗಿರುವುದರಿಂದ ಜಿಲ್ಲೆಯ ಸೊಸೈಟಿಗಳ ಮೂಲಕ ಹೆಚ್ಚಿನ ಜನರಿಕ್ ಮಳಿಗೆ ಆರಂಭಿಸುವ ಸದುದ್ದೇಶ ಹೊಂದಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಸಾಲ ವಸೂಲಿ ಮಾಡಿ: ‘ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ ಸೊಸೈಟಿಗಳು ಶೀಘ್ರವೇ ಗಣಕೀಕರಣ ವ್ಯವಸ್ಥೆಯಲ್ಲಿ ಲೆಕ್ಕಪರಿಶೋಧನೆ ಪೂರ್ಣಗೊಳಿಸಬೇಕು. ಮರು ಪಾವತಿಯಾಗದ ಎಲ್ಲಾ ರೀತಿಯ ಸಾಲವನ್ನು ನಿಗದಿತ ಕಾಲಮಿತಿಯೊಳಗೆ ವಸೂಲಿ ಮಾಡಿ’ ಎಂದು ಸಿಬ್ಬಂದಿಗೆ ಸೂಚಿಸಿದರು.

‘ಗೃಹ ಸಾಲದ ಕಂತು ಬಾಕಿ ಉಳಿಸಿಕೊಂಡಿರುವ ಸಾಲಗಾರರಿಗೆ ಈಗಾಗಲೇ ಬ್ಯಾಂಕ್‌ನ ಕೇಂದ್ರ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಸಾಲ ಮರುಪಾವತಿಸದಿದ್ದರೆ ತಿಂಗಳೊಳಗೆ ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆಸಿ’ ಎಂದು ಹೇಳಿದರು.

ಬ್ಯಾಂಕ್‌ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ಬೈರೇಗೌಡ, ನಾಗೇಶ್, ಹುಸೇನ್ ದೊಡ್ಡಮನಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.