ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ ಹುದ್ದೆ ತೊರೆದ ಲೆಹ್ಮನ್‌

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಡರೆನ್‌ ಲೆಹ್ಮನ್‌, ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಕೋಚ್‌ ಪಾತ್ರವೂ ಇದೆ ಎಂಬ ಮಾತುಗಳು ಕೇಳಿಬಂದಿತ್ತು. ಹೀಗಿದ್ದರೂ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಲೆಹ್ಮನ್‌ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಕೋಚ್‌ ಹುದ್ದೆಯಲ್ಲಿ ಮುಂದುವರಿಸಿತ್ತು.

‘ಶುಕ್ರವಾರದಿಂದ ನಡೆಯುವ ದಕ್ಷಿಣ ಆಫ್ರಿಕಾ ಎದುರಿನ ನಾಲ್ಕನೇ ಟೆಸ್ಟ್‌ ಪಂದ್ಯ ನನ್ನ ಪಾಲಿಗೆ ಕೊನೆಯದ್ದು. ಕ್ರಿಕೆಟ್ ಆಸ್ಟ್ರೇಲಿಯಾ ನನಗೆ ವಹಿಸಿದ್ದ ಜವಾಬ್ದಾರಿಯನ್ನು ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಈಗ ಹುದ್ದೆ ತ್ಯಜಿಸುವ ಕಾಲ ಸಮೀಪಿಸಿದೆ. ಇದು ನೋವಿನ ನಿರ್ಧಾರ’ ಎಂದು ಲೆಹ್ಮನ್‌ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.

‘ದಕ್ಷಿಣ ಆಫ್ರಿಕಾ ವಿರುದ್ಧದ ಘಟನೆಯಿಂದ ತಂಡದ ಎಲ್ಲರಿಗೂ ನೋವಾಗಿದೆ. ಇದಕ್ಕಾಗಿ ಆಸ್ಟ್ರೇಲಿಯಾದ ಜನರ ಕ್ಷಮೆ ಕೇಳುತ್ತೇನೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ಮಿತ್‌, ವಾರ್ನರ್‌ ಮತ್ತು ಬ್ಯಾಂಕ್ರಾಫ್ಟ್‌ ಅವರಿಗೆ ಕಠಿಣ ಶಿಕ್ಷೆಯಾಗಿದೆ. ಶಿಕ್ಷೆ ಅನುಭವಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಅವರಿಂದ ತಪ್ಪಾಗಿದೆ ಹಾಗಂತ ಕೆಟ್ಟವರೆಂದು ದೂರಬೇಡಿ’ ಎಂದಿದ್ದಾರೆ.

‘ಚೆಂಡು ವಿರೂಪ ಪ್ರಕರಣದ ನಂತರ ನನ್ನ ಕುಟುಂಬದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅವನ್ನೆಲ್ಲಾ ತಾಳ್ಮೆಯಿಂದಲೇ ಎದುರಿಸಿದ್ದೇನೆ. ಬುಧವಾರ ಕೋಚ್‌ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದೆ. ಸ್ಮಿತ್‌ ಮತ್ತು ಬ್ಯಾಂಕ್ರಾಫ್ಟ್‌ ಮಾಧ್ಯಮದ ಎದುರು ಕಣ್ಣೀರಿಡುತ್ತಿದ್ದ ದೃಶ್ಯ ನೋಡಿ ಮನ ಕಲುಕಿತು. ಹೀಗಾಗಿ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ತಿಳಿಸಿದರು.

ಲೆಹ್ಮನ್‌ ಅವರನ್ನು 2013ರಿಂದ 2019ರ ಆ್ಯಷಸ್‌ ಸರಣಿವರೆಗೂ ಕೋಚ್‌ ಆಗಿ ನೇಮಿಸಲಾಗಿತ್ತು. ಈಗ ಅವರು ಅವಧಿಗಿಂತಲೂ ಮೊದಲೇ  ಹುದ್ದೆ ತೊರೆದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ತಂಡ 30 ಟೆಸ್ಟ್‌ ಪಂದ್ಯಗಳನ್ನು ಗೆದ್ದಿದ್ದು 19 ರಲ್ಲಿ ಸೋತಿದೆ. ಎಂಟು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದೆ.

‘ಲೆಹ್ಮನ್‌ ಅತ್ಯುತ್ತಮ ಕೋಚ್‌. ಅವರ ಮಾರ್ಗದರ್ಶನದಲ್ಲಿ ತಂಡ ಹಲವು ಪ್ರಶಸ್ತಿಗಳನ್ನು ಗೆದ್ದಿದೆ. ಅವರ ರಾಜೀನಾಮೆ ನಿರ್ಧಾರವನ್ನು ನಾವು ಗೌರವಿಸುತ್ತೇವೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೇಮ್ಸ್‌ ಸದರ್ಲೆಂಡ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT