ಗುರುವಾರ , ಮೇ 6, 2021
24 °C

ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯವನ್ನು ಕಾಡುತ್ತಿರುವ ಕೋವಿಡ್‌ ಸಂಕಷ್ಟದಿಂದ ಜನರನ್ನು ರಕ್ಷಿಸಲು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಸರ್ಕಾರದ ಸುಪರ್ದಿಗೆ ಪಡೆದು ಜನರ ಜೀವ ರಕ್ಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಶಾಸಕ ವೈ.ಎ.ನಾರಾಯಣಸ್ವಾಮಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಕೋವಿಡ್ ಸಂಕಷ್ಟ ರಾಜ್ಯಕ್ಕೆ ಮಾತ್ರ ಬಂದಿಲ್ಲ. ಇಡೀ ವಿಶ್ವವೇ ಹೆಣಗಾಡುತ್ತಿದೆ. ಕೋವಿಡ್‌ 2ನೇ ಅಲೆಯ ತೀವ್ರತೆ ತಡೆಯಲು ತೆಗೆದುಕೊಂಡಿರುವ ಕ್ರಮಗಳು ಸೋಂಕಿನ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜ್ಯದ ಆರೋಗ್ಯ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕಿತರಿಗೆ ಆಕ್ಸಿಜನ್, ಹಾಸಿಗೆ, ಚಿಕಿತ್ಸೆಯಲ್ಲೂ ಕೊರತೆ ಕಾಣುತ್ತಿದೆ. ಜನಸಾಮಾನ್ಯರು ಆಸ್ಪತ್ರೆಗೆ ದಾಖಲಾಗಲು ಅವಕಾಶ ಸಿಗದೆ ಬೀದಿಯಲ್ಲಿ ಬಿದ್ದು ಸಾಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಸರ್ಕಾರದ ಕಾರ್ಯಕ್ಷಮತೆಯ ಮೇಲೆ ಜನರ ವಿಶ್ವಾಸಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಮ್ಮ ಹತ್ತಿರದ ಸಂಬಂಧಿಯೊಬ್ಬರಿಗೆ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಹಾಸಿಗೆ ಒದಗಿಸಲು ಆರೋಗ್ಯ ಸಚಿವ ಸುಧಾಕರ್, ಬಿಬಿಎಂಪಿ ಆಯುಕ್ತರು, ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದೆ. ಅವರು ಮಧ್ಯೆ ಪ್ರವೇಶಿಸಿದರೂ ಹಾಸಿಗೆ ಸಿಗದಂತಾಗಿ ಅಸಹಾಯಕರಾಗಿ ಕೈಚೆಲ್ಲಬೇಕಾಯಿತು. ಇನ್ನು ಸಾಮಾನ್ಯ ಜನರ ಗತಿಯೇನು? ಎಂದು ಪ್ರಶ್ನೆ ಮಾಡಿದ್ದಾರೆ.

ಪರಿಸ್ಥಿತಿ ಕೈಮೀರುವ ಮುನ್ನ ಸರ್ಕಾರ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವುದು ಅನಿವಾರ್ಯವಾಗಿದೆ. ಜೀವ ಸುರಕ್ಷಿತವಿದ್ದಾಗ ಮಾತ್ರ ಜೀವನ ಎಂಬುದನ್ನು ಅರಿತು ರಾಜ್ಯದ ಜನರ ಸುರಕ್ಷತೆ, ಜೀವ ಉಳಿಸುವ ದೃಷ್ಟಿಯಿಂದ ತುರ್ತಾಗಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕು ಎಂದು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.