ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಮಗಲ್ ತಾಲ್ಲೂಕಾಗಿ ಘೋಷಿಸಲು ಒತ್ತಾಯ

ಕಂದಾಯ ಅದಾಲತ್‌ನಲ್ಲಿ ಜಿಲ್ಲಾಧಿಕಾರಿಗೆ ಮುಖಂಡರ ಮನವಿ
Last Updated 9 ಫೆಬ್ರುವರಿ 2021, 16:36 IST
ಅಕ್ಷರ ಗಾತ್ರ

ಕೋಲಾರ: ಭವಿಷ್ಯದ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ವೇಮಗಲ್‍ ಗ್ರಾಮವನ್ನು ಕಂದಾಯ ತಾಲ್ಲೂಕಾಗಿ ಘೋಷಿಸಬೇಕೆಂದು ವೇಮಗಲ್‌ ಭಾಗದ ಮುಖಂಡರು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ವೇಮಗಲ್‌ನಲ್ಲಿ ನಡೆದ ಕಂದಾಯ ಅದಾಲತ್‌ನಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾದ ಮುಖಂಡರು, ಕ್ಯಾಲನೂರು ಗ್ರಾಮವನ್ನು ಪ್ರತ್ಯೇಕ ಕಂದಾಯ ಹೋಬಳಿಯಾಗಿ ರಚಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದರು.

‘ವೇಮಗಲ್ ಹೋಬಳಿಯು 65 ಗ್ರಾಮಗಳಿಂದ ಕೂಡಿದ್ದು, ಅತಿ ದೊಡ್ಡ ಕಂದಾಯ ಹೋಬಳಿಯಾಗಿದೆ ಹೀಗಾಗಿ ಕ್ಯಾಲನೂರನ್ನು ಪ್ರತ್ಯೇಕ ಕಂದಾಯ ಹೋಬಳಿಯಾಗಿ ರಚಿಸುವ ಅಗತ್ಯವಿದೆ. ಈಗಾಗಲೇ ಪಟ್ಟಣ ಪಂಚಾಯಿತಿ ಎಂದು ಘೋಷಣೆಯಾಗಿರುವ ವೇಮಗಲ್ ಅನ್ನು ಕಂದಾಯ ತಾಲ್ಲೂಕಾಗಿ ಘೋಷಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು’ ಎಂದು ಕೋರಿದರು.

‘ಕೋಲಾರ ತಾಲ್ಲೂಕು 7 ಹೋಬಳಿ ಒಳಗೊಂಡಿದ್ದು, 3 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಂಚಿ ಹೋಗಿದೆ. ವೇಮಗಲ್, ಕುರಗಲ್, ನರಸಾಪುರ ಮತ್ತು ಬೆಳ್ಳೂರು ಭಾಗದಲ್ಲಿ ಕೈಗಾರಿಕಾ ಪ್ರದೇಶಗಳು ಆರಂಭಗೊಂಡಿವೆ. ಕೈಗಾರಿಕೆಗಳ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ಕೋಲಾರ ತಾಲ್ಲೂಕು ಮತ್ತು ಜಿಲ್ಲೆಯ ಅಭಿವೃದ್ಧಿಗೆ ಬಳಕೆ ಮಾಡಬೇಕು’ ಎಂದು ಹೇಳಿದರು.

ಕಂದಾಯ ಗ್ರಾಮ: ‘ವೇಮಗಲ್ ಹೋಬಳಿ ವ್ಯಾಪ್ತಿಯ ಕುರುಬರಹಳ್ಳಿ, ಸುಜ್ಜನಹಳ್ಳಿ, ವಿಶ್ವನಗರ, ಸುಲದೇನಹಳ್ಳಿ ಜನವಸತಿ ಪ್ರದೇಶಗಳಿದ್ದು, ಇವುಗಳ ಬಗ್ಗೆ ಸಮಗ್ರ ವರದಿ ಪಡೆದು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಉಪ ತಹಶೀಲ್ದಾರ್ ಕಚೇರಿ, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರ ಸಮರ್ಪಕ ಕಾರ್ಯ ನಿರ್ವಹಣೆಗೆ ಕಟ್ಟಡ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ವೇಮಗಲ್ ಹೋಬಳಿಯ ಪುರಾತನ ಸೀತಿ ಬೈರವೇಶ್ವರಸ್ವಾಮಿ ದೇವಾಲಯವನ್ನು ಭಕ್ತಾದಿಗಳ ಒತ್ತಾಯದಂತೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸುಪರ್ದಿಗೆ ವಹಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಮುಜರಾಯಿ ಇಲಾಖೆ ಸುಪರ್ದಿನಲ್ಲಿರುವ ವೇಮಗಲ್‌ನ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯವನ್ನು ಬ್ರಾಹ್ಮಣ ಸಮುದಾಯಕ್ಕೆ ಹಸ್ತಾಂತರಿಸಬೇಕು’ ಎಂದು ಕೋರಿದರು.

ಸಭೆ ನಡೆಸಿ: ‘ಪರಿಶಿಷ್ಟರಿಗೆ ಸರ್ಕಾರ ಮಂಜೂರು ಮಾಡಿರುವ ಜಮೀನನ್ನು 15 ವರ್ಷ ಪರಭಾರೆ ಮಾಡದಂತೆ ಕಠಿಣ ಕ್ರಮ ವಹಿಸಬೇಕು. ಮದ್ದೇರಿ ಗ್ರಾ.ಪಂ ವ್ಯಾಪ್ತಿಯ ಹಲವು ಗ್ರಾಮಗಳು ಹಿಂದುಳಿದಿದ್ದು, ಆ ಗ್ರಾಮಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಜಿ.ಪಂ ಸಿಇಒ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ವಿ.ಆರ್‌.ಸುದರ್ಶನ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT