ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಅಧಿಕಾರಿಗಳಿಗೆ ಸಿಇಒ ತೀವ್ರ ತರಾಟೆ

ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ವಿಳಂಬ
Last Updated 19 ಜುಲೈ 2019, 20:03 IST
ಅಕ್ಷರ ಗಾತ್ರ

ಕೋಲಾರ: ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವಲ್ಲಿ ವಿಳಂಬ ಮಾಡಿರುವ ಬ್ಯಾಂಕ್ ಅಧಿಕಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತೀವ್ರ ತರಾಟೆಗೆ ತೆಗೆದುಕೊಂಡರು.

ಇಲ್ಲಿ ಶುಕ್ರವಾರ ನಡೆದ ವಿವಿಧ ಬ್ಯಾಂಕ್ ಹಾಗೂ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್‌ ಅಧಿಕಾರಿಗಳು ಮಾಡುವ ತಪ್ಪಿಗೆ ನಾವೇಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಎದುರು ತಲೆ ತಗ್ಗಿಸಬೇಕು, ಬ್ಯಾಂಕ್‌ ಅಧಿಕಾರಿಗಳಿಗೆ ಕೆಲಸ ಮಾಡಲು ಆಗದಿದ್ದರೆ ಹೇಳಿ, ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) 3,568 ವಿದ್ಯಾರ್ಥಿಗಳ ಹಾಗೂ ಕೆನರಾ ಬ್ಯಾಂಕ್ 1,249 ಮಂದಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡದೆ ಬಾಕಿ ಉಳಿಸಿಕೊಂಡಿವೆ. ಇದಕ್ಕೆ ಸಮಸ್ಯೆ ಏನೆಂದು ತಿಳಿಸಿ. ಸಿಬ್ಬಂದಿ ಕೊರತೆ ಇದ್ದರೆ ಹೇಳಿ, ನಮ್ಮ ಸಿಬ್ಬಂದಿಯನ್ನು ಕಳುಹಿಸುತ್ತೇವೆ’ ಎಂದರು.

‘ನಿಮ್ಮ ತಪ್ಪಿನಿಂದ ವಿಡಿಯೊ ಸಂವಾದದಲ್ಲಿ ಹಾಗೂ ಸಭೆಗಳಲ್ಲಿ ನಾನು ಉತ್ತರ ಕೊಡುವುದಕ್ಕೆ ಆಗುತ್ತಿಲ್ಲ. ನಿಮ್ಮಂತೆ ಬಚ್ಚಿಕೊಳ್ಳೋದು ನಮಗೆ ಬರುವುದಿಲ್ಲ. ಬಡವರಿಗೆ ಸೇವೆ ಸಲ್ಲಿಸುವ ಮನೋಭಾವದಿಂದ ಕೆಲಸ ಮಾಡುತ್ತಿದ್ದೇನೆ. ಸಮಾಜದಲ್ಲಿ ಪ್ರತಿಷ್ಠಿತ ಬ್ಯಾಂಕ್‌ಗಳಾಗಿರುವ ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್‌ಗಳ ವೈಫಲ್ಯವೂ ಇದೆ’ ಎಂದು ಆಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ವಿವಿಧ ಯೋಜನೆಗಳಡಿ ಮಕ್ಕಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡುತ್ತದೆ. ಅದನ್ನು ನೇರವಾಗಿ ಮಕ್ಕಳ ಬ್ಯಾಂಕ್ ಖಾತೆಗೆ ಹಾಕಲಾಗುವುದು. ಅರ್ಜಿ ಹಾಕಿರುವ ಮಕ್ಕಳ ಆಧಾರ್ ಸಂಖ್ಯೆ ಖಾತೆಗೆ ಜೋಡಣೆ ಆಗದಿರುವುದರಿಂದ ಸಾಕಷ್ಟು ಮಂದಿಗೆ ವಿದ್ಯಾರ್ಥಿವೇತನ ಸಿಕ್ಕಿಲ್ಲ. ನಿರ್ಲಕ್ಷ್ಯ ಮುಂದುವರಿದರೆ ಬ್ಯಾಂಕ್‌ಗಳೇ ಹೊಣೆ’ ಎಂದು ಸಿಡಿಮಿಡಿಗೊಂಡರು.

ತತ್ಸಾರ ತೋರುತ್ತಿದ್ದಾರೆ: ‘ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಬ್ಯಾಂಕ್‌ ಅಧಿಕಾರಿಗಳು ತತ್ಸಾರ ತೋರುತ್ತಿದ್ದಾರೆ. ಅಧಿಕಾರಿಗಳು ಸಭೆಗಳಿಗೆ ಬರುವುದಿಲ್ಲ ಮತ್ತು ಮಾಹಿತಿ ಕೇಳಿದರೆ ಕೊಡುವುದಿಲ್ಲ. ಬ್ಯಾಂಕ್‌ಗೆ ಠೇವಣಿ ಬರುವುದಿದ್ದರೆ ಊರಿಗಿಂತ ಮುಂಚೆ ಓಡಿ ಬರುತ್ತೀರಿ, ನಿಮಗೆ ಕೆಲಸ ಮಾಡಲು ಆಗಿಲ್ಲವೆಂದು ಹೇಳಿದರೆ ಅಂಚೆ ಕಚೇರಿಯಲ್ಲಿ ಮಾಡಿಸಿಕೊಳ್ಳುತ್ತೇವೆ’ ಎಂದು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು, ‘ಕೆಲ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಗೆ ಬೆರಳಚ್ಚು ಬರುತ್ತಿಲ್ಲ, ಕೆಲ ತಾಂತ್ರಿಕ ಕಾರಣಕ್ಕೆ ವಿಳಂಬವಾಗುತ್ತಿದೆ. ಕೆಲ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಇಲ್ಲದಿದ್ದರೂ ಆಧಾರ್‌ ಸಂಖ್ಯೆ ಕೊಡುತ್ತಿದ್ದಾರೆ. ಹೀಗಾಗಿ ಆಧಾರ್ ಸಂಖ್ಯೆಗೂ ಖಾತೆಗೂ ಜೋಡಣೆ ಆಗುತ್ತಿಲ್ಲ’ ಎಂದು ವಿವರಿಸಿದರು.

ಆಗ ಮಧ್ಯಪ್ರವೇಶಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಾಜಿ, ‘ಬ್ಯಾಂಕ್ ಖಾತೆಯಿಲ್ಲದ ಮಕ್ಕಳಿಗೆ ಖಾತೆ ಮಾಡಿಸುವಂತೆ ಶಿಕ್ಷಕರ ಮೂಲಕ ಪೋಷಕರಿಗೆ ತಿಳಿಸಲಾಗಿದೆ. ಯಾವುದೇ ವಿದ್ಯಾರ್ಥಿ ಸುಮ್ಮನೆ ಆಧಾರ್ ಸಂಖ್ಯೆ ಕೊಡುತ್ತಿಲ್ಲ. ಬ್ಯಾಂಕ್‌ ಅಧಿಕಾರಿಗಳು ಕೆಲಸ ಮಾಡದೆ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಉತ್ತರ ಕೊಡಬೇಕು: ‘ನಾನು ತುಂಬಾ ಸಹನೆಯಿಂದ ಹೇಳಿದ್ದೇನೆ. ಆದರೂ ಬ್ಯಾಂಕ್‌ ಅಧಿಕಾರಿಗಳು ಕೆಲಸ ಮಾಡದಿದ್ದರೆ ಸಹಿಸುವುದಿಲ್ಲ. ಜುಲೈ 26ರೊಳಗೆ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬ್ಯಾಂಕ್‌ ಅಧಿಕಾರಿಗಳೇ ಉತ್ತರ ಕೊಡಬೇಕು’ ಎಂದು ಸಿಇಒ ತಾಕೀತು ಮಾಡಿದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹೊಸಮಟ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT