ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ-, ಮನೆಗೆ ಸಂವಿಧಾನ ಆಶಯ ತಲುಪಿಸಿ- ನಾಗಮೋಹನದಾಸ್‌

ಜನಾಗ್ರಹ ಜಾಥಾಕ್ಕೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಚಾಲನೆ
Last Updated 18 ಆಗಸ್ಟ್ 2022, 6:22 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ತಲೆದೋರಿರುವ ಬಿಕ್ಕಟ್ಟು ಪರಿಹರಿಸಲು ಹಾಗೂ ಪ್ರತಿಯೊಬ್ಬರ ರಕ್ಷಣೆ ನಿಟ್ಟಿನಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕಿಂತ ಮುಖ್ಯವಾಗಿ ತುರ್ತಾಗಿ ಮನೆಮನೆಗೆ ಸಂವಿಧಾನದ ಆಶಯಗಳನ್ನು ತಲುಪಿಸುವ ಕೆಲಸ ಮಾಡಬೇಕಾಗಿದೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನ ದಾಸ್ಪ್ರತಿಪಾದಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಾಮರಸ್ಯಕ್ಕಾಗಿ ಜಿಲ್ಲಾ ಜನಪರ ವೇದಿಕೆಯಿಂದ 75 ದಿನಗಳ ಜನಾಗ್ರಹ ಜಾಥಾ ಉದ್ಘಾಟಿಸಿ ಮಾತ‌ನಾಡಿದರು.

‘ದೇಶ ಬಿಕ್ಕಟ್ಟಿಗೆ ಸಿಲುಕಿದೆ. ರೈತರು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ನೈತಿಕವಾಗಿ ದಿವಾಳಿಯಾಗಿದ್ದಾರೆ. ಕುಂಭಕರ್ಣ ನಿದ್ರೆಯಲ್ಲಿ ತೊಡಗಿರುವ ಅವರನ್ನು ಎಚ್ಚರಿಸಬೇಕಿದೆ. ಗ್ರಾಮಾಂತರ ಪ್ರದೇಶದ ಅನಕ್ಷರಸ್ಥರಿಗೆ, ಮುಗ್ದ ರೈತರು, ಬಡವರು, ಕೂಲಿಕಾರರು, ಯುವಜನತೆಗೆ ಹಾಡು, ಜಾಥಾ, ಹರಿಕಥೆ, ನಾಟಕ ಮೂಲಕ ಸಂವಿಧಾನದ ಆಶಯಗಳ ಕುರಿತು ಅರಿವು ಮೂಡಿಸಬೇಕಿದೆ’ ಎಂದರು.

‘ದೇಶದ ಸಂವಿಧಾನ ರಕ್ಷಣೆಗೆ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿರಬೇಕು. ನಮ್ಮ ಮುಂದೆ ಸಮಸ್ಯೆಗಳು, ಸವಾಲುಗಳು ಇವೆ. ಒಂದಿಷ್ಟು ಜನರಿಗೆ ಅಕ್ಷರ ಜ್ಞಾನ ಇಲ್ಲ, ಉದ್ಯೋಗ ಇಲ್ಲ. ಕೃಷಿ, ಕೈಗಾರಿಕಾ ಬಿಕ್ಕಟ್ಟುಗಳಿವೆ. ಎಲ್ಲರಿಗೂ ಆರೋಗ್ಯದ ಸವಲತ್ತು ಸಿಗುತ್ತಿಲ್ಲ, ಮನೆ ಇಲ್ಲ. ಜೊತೆಗೆ ಭ್ರಷ್ಟಾಚಾರ, ಭಯೋತ್ಪಾದನೆ, ಮೂಲಭೂತವಾದ, ಕೋಮವಾದ, ವ್ಯಾಪಾರೀಕರಣ, ಅತಿಯಾದ ದಿವಾಳಿತನದ ಸವಾಲುಗಳಿವೆ. ನಾವು ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ. ಆದರೆ, ಕೆಲ ಮೂರ್ಖರು ಈ ಎಲ್ಲಾ ಸಮಸ್ಯೆಗಳಿಗೆ ಸಂವಿಧಾನವೇ ಕಾರಣ ಎನ್ನುತ್ತಿದ್ದಾರೆ. ಅದು ತಪ್ಪು ತಿಳವಳಿಕೆ. ಜನಪ್ರತಿನಿಧಿಗಳು ಸಂವಿಧಾನದ ಆಶಯಗಳನ್ನು ಸರಿಯಾಗಿ ಅನುಷ್ಠಾನಗೊಳಿಸದೆ ಇರುವುದು ಸಮಸ್ಯೆಗೆ ಕಾರಣ’ ಎಂದು ವಿವರಿಸಿದರು.

‘ದೇಶದ ಸ್ವಾತಂತ್ರ್ಯ ಹೋರಾಟ ಬರೀ ರಾಜಕೀಯ ಹೋರಾಟವಾಗಿರಲಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹೋರಾಟವಾಗಿತ್ತು. ಹಲವಾರು ಮಂದಿ ಶಿಕ್ಷಣ, ಕೆಲಸ, ಉದ್ಯೋಗ, ಕುಟುಂಬ ಬಿಟ್ಟು ಹೋರಾಟಕ್ಕಿಳಿದರು. ರೈತರು, ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡು ತ್ಯಾಗ ಬಲಿದಾನ ಮಾಡಿದರು’ ಎಂದು
ಸ್ಮರಿಸಿದರು.

‘ದಲಿತರು, ಮಹಿಳೆಯರು, ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಯಾಗಿ ನಡೆಸಿಕೊಳ್ಳಲಾಗಿತ್ತು, ದೌರ್ಜನ್ಯ, ದಬ್ಬಾಳಿಕೆಗೆ ಒಳಪಡಿಸಲಾಗಿತ್ತು. ಆದರೆ, ಸಂವಿಧಾನ ಅವರಿಗೆ ವಿಶೇಷ ಸ್ಥಾನಮಾನ, ಅವಕಾಶ ನೀಡಿತು’ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ, ‘ಸ್ವಾತಂತ್ರ್ಯದ ಆಶಯದಂತೆ ದ್ವೇಷ, ಅಸಹಿಷ್ಣುತೆ ಇಲ್ಲದದೇಶ ಕಟ್ಟುವುದೇ ನಮ್ಮ ಉದ್ದೇಶವಾಗಿದೆ. ಶ್ರೀಮಂತರ ಭಾರತ ಮತ್ತು ಬಡವರ ಭಾರತವನ್ನು ಒಗ್ಗೂಡಿಸಿ ಒಂದೇ ಎಂಬ ಭಾವನೆ ಮೂಡಿಸುವ ಮೂಲಕ ಸಾಮಾನ್ಯ ಪ್ರಜ್ಞೆ ತರಬೇಕಾಗಿದೆ’ ಎಂದರು.

ವೇದಿಕೆ ತಾಲ್ಲೂಕು ಅಧ್ಯಕ್ಷ ಸಿಎಂಆರ್ ಶ್ರೀನಾಥ್, ‘ಜನಪರ ವೇದಿಕೆಯ ಜನಾಗ್ರಹದ 21 ಹಕ್ಕೊತ್ತಾಯಗಳನ್ನು ಯಶಸ್ವಿಯಾಗಿ ಮಂಡಿಸಬೇಕು. ಜಿಲ್ಲೆಯ ಜನ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವಂತಾಗಬೇಕು. ಪಕ್ಷತೀತವಾಗಿ, ಜಾತ್ಯತೀತವಾಗಿ ಎಲ್ಲರೂ ಕೈ ಜೋಡಿಸಿ ಜಾಥಾಯಶಸ್ವಿಗೊಳಿಸಬೇಕು’ ಎಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಜನಪರ ವೇದಿಕೆ ಜಿಲ್ಲಾ ಗೌರವ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ‘ಜಿಲ್ಲೆಯ ಅಭಿವೃದ್ಧಿ ಮುಖ್ಯವಾಗಿದೆ. ರಾಜಕಾರಣ ಬದಿಗೊತ್ತಿ ಜನ ಬದುಕು ಕಟ್ಟಿಕೊಳ್ಳವಂತೆ ಮಾಡಬೇಕು. ನಾವು‌ ಎಷ್ಟೇ ಒತ್ತಡ ತಂದರೂ ಎಪಿಎಂಸಿ ಮಾರುಕಟ್ಟೆ ಜಾಗ ಬದಲಾವಣೆ ಮಾಡಲು ಆಗಲಿಲ್ಲ. ಮುಂದಿನ ಪೀಳಿಗೆಗಾಗಿ 21 ಹಕ್ಕುಗಳನ್ನು ಜಾರಿ ಮಾಡಿಸಬೇಕಾಗಿದೆ’ ಎಂದರು.

ಶೇ 4 ಕಿಡಿಗೇಡಿಗಳಿಂದ ಹಾಳು: ‘ಶೇ 95ರಷ್ಟು ಹಿಂದೂಗಳು, ಮುಸ್ಲಿಮರು ಪರಸ್ಪರ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಆದರೆ, ಕೇವಲ ಶೇ 3ರಿಂದ 4 ರಷ್ಟು ಕಿಡಿಗೇಡಿಗಳು ಶಾಂತಿ, ಸೌಹಾರ್ದ ಹಾಳು ಮಾಡುತ್ತಿದ್ದಾರೆ. ಯಾವ ದೇಶದಲ್ಲಿಅಶಾಂತಿ, ಕೋಮುಗಲಭೆ ಇರುತ್ತೋ ಅಲ್ಲಿ ಅಭಿವೃದ್ಧಿ, ಪ್ರಗತಿ ಇರಲ್ಲ’ ಎಂದು ನಾಗಮೋಹನದಾಸ್‌ ಅಭಿಪ್ರಾಯಪಟ್ಟರು.

‘ಹಿಂದೂ–ಮುಸಲ್ಮಾನರು, ದಲಿತರು–ಸವರ್ಣೀಯರು, ‌ಕನ್ನಡಿಗರು–ತೆಲುಗರು ಎಂಬ ವ್ಯಾಜ್ಯ ಬೇಕೇ? ದೇಶದಲ್ಲಿ ಎಲ್ಲರಿಗೂ ಒಟ್ಟಿಗೆ ಬಾಳಬೇಕು. ಇದು ಸಂವಿಧಾನದ ಆಶಯ ಕೂಡ. ಸ್ವಾತಂತ್ರ್ಯಕ್ಕಾಗಿ ಹಿಂದೂಗಳ ರಕ್ತ ಮಾತ್ರವಲ್ಲ; ಮುಸಲ್ಮಾನರು, ಕ್ರೈಸ್ತರು, ಸಿಖ್ಖರ ರಕ್ತವೂ ಹರಿದಿದೆ. ಆದರೆ, ಪ್ರಾಂತ, ಜಾತಿ, ಧರ್ಮದ ನಡುವೆ ಅಪನಂಬಿಕೆ, ದ್ವೇಷ ಹುಟ್ಟಿಸಲಾಗುತ್ತಿದೆ. ಮೆದುಳಿಗೆ ವಿಷ ಬೀಜ ಬಿತ್ತನೆ ಮಾಡಲಾಗುತ್ತಿದೆ. ದೇಶದಲ್ಲಿ ಅಸಹಿಷ್ಣುತೆ‌ ಇದೆ. ಒಬ್ಬರ ಆಹಾರ ಇನ್ನೊಬ್ಬರಿಗೆ ಇಷ್ಟವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಕೆ.ಎಸ್.ಗಣೇಶ್, ತಾಲ್ಲೂಕು ಗೌರವ ಅಧ್ಯಕ್ಷ ಸಲಾವುದ್ದೀನ್ ಬಾಬು, ಮುಖಂಡರಾದ ವಿ.ಗೀತಾ, ಟಿ.ಎಂ.ವೆಂಕಟೇಶ್, ಪಿ.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT