ಶನಿವಾರ, ಫೆಬ್ರವರಿ 4, 2023
21 °C
ಕಾಡಾನೆ ಹಾವಳಿ ಹೆಚ್ಚಳ: ರೈತ ಸಂಘದ ಪ್ರತಿನಿಧಿಗಳಿಂದ ಪ್ರತಿಭಟನೆ

ಕೋಲಾರ | ಕಾಡಾನೆ ದಾಳಿಯಿಂದ ನಷ್ಟ : ಎಕರೆಗೆ ₹ 2 ಲಕ್ಷ ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಗಡಿಭಾಗದ ಕಾಡಾನೆಗಳ ಹಾವಳಿಗೆ ಶಾಶ್ವತ ಕಂಡುಕೊಳ್ಳುವ ಯೋಜನೆ ಜಾರಿ ಮಾಡಿ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ ₹ 2 ಲಕ್ಷ ಪರಿಹಾರ ನೀಡಬೇಕೆಂದು ರೈತ ಸಂಘದ ಪ್ರತಿನಿಧಿಗಳು ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ‘ಹತ್ತಾರು ವರ್ಷಗಳಿಂದ ಗಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಮತ್ತು ಜಿಲ್ಲೆಯಾದ್ಯಂತ ಜಿಂಕೆ, ನವಿಲು, ಕಾಡಂದಿಗಳ
ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 3 ತಿಂಗಳ ಬೆಳೆ ಒಂದೇ ದಿನದಲ್ಲಿ ನಾಶವಾಗುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ವಿಫಲವಾಗಿರುವುದು ವಿಪರ್ಯಾಸ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲಸಕ್ಕೆ ಬಾರದ ಯೋಜನೆಗಳನ್ನು ರೂಪಿಸುವ ಬದಲು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿರುವ ಅರಣ್ಯ ಭೂಮಿಯಲ್ಲಿ ವನ್ಯಧಾಮ ನಿರ್ಮಿಸುವ ಮೂಲಕ ಪ್ರವಾಸಿ ತಾಣವನ್ನಾಗಿ
ಮಾಡಬೇಕು. ಇದರಿಂದ ಸರ್ಕಾರಕ್ಕೆ ಆದಾಯವೂ ಬರುತ್ತದೆ. ಕಾಡು ಪ್ರಾಣಿಗಳಿಂದ ಬೆಳೆ ಹಾಗೂ ಪ್ರಾಣ ಹಾನಿಯೂ ತಪ್ಪುತ್ತದೆ. ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ’ ಎಂದು ಸಲಹೆ
ನೀಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಈ ಹಿಂದೆ 1 ಎಕರೆ ವ್ಯವಸಾಯ ಮಾಡಬೇಕಾದರೆ ₹ 10 ಸಾವಿರ ಖರ್ಚು ಬರುತ್ತಿತ್ತು. ಆದರೆ, ಹದಗೆಟ್ಟಿರುವ ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ವ್ಯವಸಾಯ ಮಾಡಬೇಕಾದರೆ ಪ್ರತಿ ಎಕರೆಗೆ ₹ 2 ರಿಂದ 3 ಲಕ್ಷ ಖರ್ಚು ಬರುತ್ತದೆ. ಆದರೆ, ಕಾಡಾನೆಗಳಿಂದ ಬೆಳೆ ನಷ್ಟವಾದರೆ ಅರಣ್ಯ ಇಲಾಖೆ ಬಿಕ್ಷುಕರ ರೀತಿಯಲ್ಲಿ ಪರಿಹಾರ ನೀಡುತ್ತಿದೆ. ಕನಿಷ್ಠ ₹ 2 ಲಕ್ಷ ಪರಿಹಾರ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಬೇಕು’ ಎಂದು ಒತ್ತಾಯಿಸಿದರು.

‘ವಾರದೊಳಗೆ ಗಡಿಭಾಗ ಹಾಗೂ ಜಿಲ್ಲೆಯಾದ್ಯಂತ ಕಾಡು ಪ್ರಾಣಿಗಳಿಂದ ನಷ್ಟ ಅನುಭವಿಸಿರುವ ರೈತರ ಸಮಸ್ಯೆಗೆ ಸ್ಪಂದಿಸಲು ಸಭೆ ಕರೆಯಬೇಕು. ಕರಪತ್ರದ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸಿ ನಷ್ಟ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಮನವಿ ಮಾಡಿದರು.

ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್, ಮಂಜುಳಮ್ಮ, ಶೇಷಾದ್ರಿ, ಮಂಗಸಂದ್ರ ತಿಮ್ಮಣ್ಣ, ಚಂದ್ರಪ್ಪ, ಗಿರೀಶ್, ರಾಮಸಾಗರ ವೇಣು, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ಕಾಮಸಮುದ್ರ ಮುನಿಕೃಷ್ಣ, ವಿಶ್ವ, ಮುನಿರಾಜು, ಪಾರುಕ್‍ಪಾಷ, ಬಂಗಾರಿ ಮಂಜು, ವಿಜಯ್‍ಪಾಲ್, ಕದಿರಿನತ್ತ ಅಪ್ಪೋಜಿರಾವ್, ಚುಕ್ಕನಹಳ್ಳಿ ರಾಮೇಗೌಡ, ಚಂಗೇಗೌಡ, ನಟರಾಜ್, ರಾಜಣ್ಣ, ಜನಾರ್ಧನ್, ವಿಶ್ವನಾಥ್, ಕುಮಾರ್, ಜಗದೀಶ್, ವೆಂಕಟರವಣಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು