ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸನಗೌಡ ಪಾಟೀಲ ಯತ್ನಾಳ್‌ ಶಾಸಕ ಸ್ಥಾನ ರದ್ದುಗೊಳಿಸಲು ಒತ್ತಾಯ

ರೈತ ಸಂಘದಿಂದ ತಾಲ್ಲೂಕು ಕಚೇರಿ ಎದುರು ಧರಣಿ
Last Updated 28 ಫೆಬ್ರುವರಿ 2020, 10:55 IST
ಅಕ್ಷರ ಗಾತ್ರ

ಕೋಲಾರ: ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್ ಎಂದು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಪೂರ್ಣ ಪ್ರಮಾಣದಲ್ಲಿ ಸರ್ಕಾರ ನಡೆಸಲು ವಿಫಲವಾಗಿರುವ ಬಿಜೆಪಿ ಶಾಸಕರು ಹೀಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವ ಯತ್ನಾಳ್ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ನಾಡಿನ ಸಾಕ್ಷಿಪ್ರಜ್ಞೆ 104 ವರ್ಷದ ಹೋರಾಟಗಾರ, ಗಾಂಧಿವಾದಿ ಎಚ್‌.ಎಸ್‌.ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್ ಮತ್ತು ನಕಲಿ ಹೋರಾಟಗಾರ ಎಂದು ಟೀಕಿಸುವ ಮೂಲಕ ಅವರನ್ನು ಅವಮಾನಿಸಿದ್ದಾರೆ. ಈ ಅವಮಾನ ದೊರೆಸ್ವಾಮಿ ಅವರಿಗೆ ಮಾತ್ರವಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ, ಲಕ್ಷಾಂತರ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ರಾಜ್ಯದಾದ್ಯಂತ ಜನರು ಹಸಿವು, ಬಡತನ, ನಿರುದ್ಯೋಗದಿಂದ ಬಳಲುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ. ರೈತರ ಆತ್ಮಹತ್ಯೆಗಳು ನಿರಂತರವಾಗಿ ಮುಂದುವರೆದಿವೆ. ಈ ಸಮಸ್ಯೆಗಳನ್ನು ಮರೆಮಾಚಲು ಇಂತಹ ಹೇಳಿಕೆಗಳನ್ನು ಕೊಡುತ್ತಾ, ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ದೂರಿದರು.

‘ಸ್ವಾತಂತ್ರ್ಯ ಚಳವಳಿಯಲ್ಲಿ ದೊರೆಸ್ವಾಮಿಯವರ ಪಾತ್ರವೇನು ಎಂಬುವುದಕ್ಕೆ ಅಧಿಕೃತ ದಾಖಲೆಗಳು ಲಭ್ಯವಿವೆ. ಅವರು ಕೇವಲ ಬ್ರಿಟೀಷರನ್ನು ಭಾರತದಿಂದ ಓಡಿಸುವುದಕ್ಕಷ್ಟೆ ಸೀಮಿತವಾಗದೆ, ಒಂದು ಸುಂದರ, ಸಮಾನ, ಸಹಬಾಳ್ವೆಯ ಭಾರತವನ್ನು ಕಟ್ಟುವ ಕನಸನ್ನಿಟ್ಟುಕೊಂಡು ನಿರಂತರವಾಗಿ ಶ್ರಮಿಸುತ್ತಾ ಬಂದ ಅಪರೂಪದ ಗಾಂಧಿವಾದಿ’ ಎಂದು ಅಭಿಪ್ರಾಯಪಟ್ಟರು.

‘ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನೂ ಸಮರ್ಥಿಸಿಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ಎಲ್ಲ ಶಾಸಕರು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮತ್ತು ಸ್ವಜನ ಪಕ್ಷಪಾತ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುತ್ತಾರೆ. ಸ್ವಾತಂತ್ರ್ಯ ಹೋರಾಟಗರರನ್ನು ಅವಮಾನಿಸಿದ ಹಾಗೂ ಸಂವಿಧಾನ ಆಶಯಗಳನ್ನು ಉಲ್ಲಂಘಿಸಿದ ಇವರ ಹೇಳಿಕೆ ದೇಶದ್ರೋಹಕ್ಕೆ ಸಮಾನವಾಗಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

ಧರಣಿಯ ನಂತರ ತಾಲ್ಲೂಕು ಕಚೇರಿ ಶಿರಸ್ತೆದಾರ್ ಕೊಂಡಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ತಿಮ್ಮಣ್ಣ, ಚಲ, ಸುಧಾಕರ್, ಜಗದೀಶ್, ವೆಂಕಟೇಶ್, ಮಂಜುನಾಥ್, ಶಿವ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT