ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಚ್‌ಒ ವಿಜಯ್‌ಕುಮಾರ್‌ ಅಮಾನತು

ಆದಾಯ ಮಿತಿಗಿಂತ ಹೆಚ್ಚು ಆಸ್ತಿ ಸಂಪಾದನೆ: ಎಸಿಬಿ ತನಿಖೆಯಲ್ಲಿ ಸಾಬೀತು
Last Updated 15 ಮೇ 2021, 15:39 IST
ಅಕ್ಷರ ಗಾತ್ರ

ಕೋಲಾರ: ಆದಾಯ ಮಿತಿಗಿಂತಲೂ ಹೆಚ್ಚಿನ ಆಸ್ತಿ ಸಂಪಾದಿಸಿದ ಆರೋಪ ಎದುರಿಸುತ್ತಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ.ಎಸ್‌.ಎನ್‌.ವಿಜಯ್‌ಕುಮಾರ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ವಿಜಯ್‌ಕುಮಾರ್‌ ಅವರಿಗೆ ಸೇರಿದ ಮನೆಗಳು, ನರ್ಸಿಂಗ್‌ ಹೋಂ ಹಾಗೂ ಕಚೇರಿ ಮೇಲೆ ಫೆ.2ರಂದು ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದರು.
ವಿಜಯ್‌ಕುಮಾರ್‌ ಅವರು ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಸಂಪಾದಿಸಿದ ಸಂಬಂಧ ಎಸಿಬಿಗೆ ದೂರು ಸಲ್ಲಿಕೆಯಾಗಿತ್ತು.

ಈ ದೂರು ಆಧರಿಸಿ ಎಸಿಬಿ ಅಧಿಕಾರಿಗಳು ಮುಳಬಾಗಿಲು ನಗರದಲ್ಲಿನ ವಿಜಯ್‌ಕುಮಾರ್‌ರ ಮನೆ, ನರ್ಸಿಂಗ್‌ ಹೋಂ, ಜಿಲ್ಲಾ ಕೇಂದ್ರದಲ್ಲಿನ ಕಚೇರಿ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿರುವ ಮನೆ, ಬೆಂಗಳೂರಿನ ರಾಜಾಜಿನಗರ ಹಾಗೂ ಜಕ್ಕೂರು ಬಳಿಯ ಫ್ಲಾಟ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು.

ಎಸಿಬಿ ಅಧಿಕಾರಿಗಳು ವಿಸ್ತೃತ ತನಿಖೆ ನಡೆಸಿದಾಗ ವಿಜಯ್‌ಕುಮಾರ್‌ ಆದಾಯಕ್ಕಿಂತ ಶೇ 343ರಷ್ಟು ಹೆಚ್ಚು ಆಸ್ತಿ ಸಂಪಾದಿಸಿರುವುದು ಸಾಬೀತಾಗಿತ್ತು. ಹೀಗಾಗಿ ಎಸಿಬಿ ಅಧಿಕಾರಿಗಳು ವಿಜಯ್‌ಕುಮಾರ್‌ರನ್ನು ಸೇವೆಯಿಂದ ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಎಸ್ಪಿ ಪತ್ರ: ದಾಳಿ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದ ಎಸಿಬಿ ಎಸ್ಪಿ, ವಿಜಯ್‌ಕುಮಾರ್‌ ಅವರು ಡಿಎಚ್‍ಒ ಹುದ್ದೆಯಲ್ಲೇ ಮುಂದುವರಿದರೆ ಪ್ರಕರಣದ ಸಾಕ್ಷ್ಯಾಧಾರ ನಾಶಪಡಿಸುವ ಅಥವಾ ತಿರುಚುವ ಸಾಧ್ಯತೆಯಿದೆ. ಹೀಗಾಗಿ ಆರೋಪಿತ ಅಧಿಕಾರಿಯನ್ನು ಅಮಾನತುಗೊಳಿಸಿ ಲೀನ್ ಬದಲಾವಣೆ ಮಾಡಬೇಕು ಮತ್ತು ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಬೇಕೆಂದು ಶಿಫಾರಸು ಮಾಡಿದ್ದರು.

ಎಸಿಬಿ ಅಧಿಕಾರಿಗಳ ಶಿಫಾರಸು ಆಧರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಎಂ.ಕುಮಾರಸ್ವಾಮಿ ಅವರು ವಿಜಯ್‌ಕುಮಾರ್‌ರನ್ನು ಅಮಾನತು ಮಾಡಿ ಆದೇಶ ಹೊರಡಿಸಿ ಇಲಾಖಾ ತನಿಖೆ ಬಾಕಿ ಇರಿಸಿದ್ದಾರೆ. ಜತೆಗೆ ಅವರ ಲೀನ್‌ ಅನ್ನು ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯಾಧಿಕಾರಿ ಹುದ್ದೆಗೆ ನೀಡಲಾಗಿದೆ.

ಶೇ 343ಕ್ಕೂ ಹೆಚ್ಚು ಆಸ್ತಿ: ವಿಜಯ್‌ಕುಮಾರ್‌ ಅವರು ಮುಳಬಾಗಿಲು, ಕೋಲಾರ ಮತ್ತು ಬೆಂಗಳೂರಿನಲ್ಲಿ ತಲಾ ಒಂದು ಮನೆ, ಬೆಂಗಳೂರಿನ ವಿವಿಧೆಡೆ 3 ಫ್ಲಾಟ್‌, ಕೋಲಾರ ಮತ್ತು ಬೆಂಗಳೂರಿನಲ್ಲಿ 3 ನಿವೇಶನ, ಮುಳಬಾಗಿಲಿನಲ್ಲಿ ನರ್ಸಿಂಗ್‌ ಹೋಂ ಹೊಂದಿರುವುದು ಎಸಿಬಿ ದಾಳಿಯಿಂದ ಬಯಲಾಗಿತ್ತು.

ಅಲ್ಲದೇ, ಬೆಂಗಳೂರಿನ ಯಲಹಂಕದ ಥಣಿಸಂದ್ರ ಬಳಿ 13 ಗುಂಟೆ ಕೃಷಿ ಜಮೀನು, ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಸಮೀಪ 1 ಎಕರೆ ಕೃಷಿ ಜಮೀನು ಖರೀದಿಸಿರುವುದು ಎಸಿಬಿ ತನಿಖೆಯಿಂದ ಗೊತ್ತಾಗಿತ್ತು. ದಾಳಿ ವೇಳೆ ವಿಜಯ್‌ಕುಮಾರ್‌ರ ಮನೆಯಲ್ಲಿ ₹ 10 ಲಕ್ಷ ನಗದು ಮತ್ತು ಸುಮಾರು 300 ಗ್ರಾಂ ಚಿನ್ನಾಭರಣ, 2 ಕಾರು ಪತ್ತೆಯಾಗಿದ್ದವು.

ವಿಜಯ್‌ಕುಮಾರ್‌, ಪತ್ನಿ ಮತ್ತು ಇಬ್ಬರು ಮಕ್ಕಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 6 ಖಾತೆ ತೆರೆದಿರುವುದು, ಹಲವು ಬ್ಯಾಂಕ್‌ಗಳಲ್ಲಿ ಸೀಕ್ರೇಟ್‌್ ಲಾಕರ್‌ ಹೊಂದಿರುವುದು ಹಾಗೂ ಬ್ಯಾಂಕ್‌ ಖಾತೆಗಳಲ್ಲಿ ₹ 51.21 ಲಕ್ಷ ಠೇವಣಿ ಇಟ್ಟಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.

ವಿಜಯ್‌ಕುಮಾರ್‌ ಸುಮಾರು ₹ 6.69 ಕೋಟಿ ಮೌಲ್ಯದ ಆಸ್ತಿ, ವಾರ್ಷಿಕ ₹ 1.26 ಕೋಟಿ ಖರ್ಚು ಹಾಗೂ ₹ 1.79 ಕೋಟಿ ಆದಾಯ ಹೊಂದಿದ್ದಾರೆ. ಅವರು ತಮ್ಮ ಆದಾಯಕ್ಕಿಂತ ಸುಮಾರು ₹ 6.15 ಕೋಟಿಯಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT