ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಕೊರತೆ

ಸಮರ್ಪಕ ಚಿಕಿತ್ಸೆ ದೊರೆಯದೆ ರೋಗಿಗಳ ನರಕಯಾತನೆ
Published 10 ಜುಲೈ 2023, 6:26 IST
Last Updated 10 ಜುಲೈ 2023, 6:26 IST
ಅಕ್ಷರ ಗಾತ್ರ

ವಿ ರಾಜಗೊಪಾಲ್

ಮಾಲೂರು: ಕಟ್ಟಡ ಮತ್ತು ಉಪಕರಣಗಳ ಕೊರತೆಯಿಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳು
ಸಮರ್ಪಕ ಚಿಕಿತ್ಸೆ ದೊರೆಯದೇ ನರಕ ಯಾತನೆ ಅನುಭವಿಸುವಂತಾಗಿದೆ.

ಇರುವುದು ಮೂರೇ ಡಯಾಲಿಸಿಸ್ ಯಂತ್ರಗಳು. ಅದರಲ್ಲಿ ಒಂದು ಕೆಟ್ಟು ನಿಂತಿದೆ. ಇರುವ ಎರಡು ಯಂತ್ರದಲ್ಲಿ 17 ರೋಗಿಗಳಿಗೆ ಪಾಳಿಯ ರೂಪದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಉಳಿದಂತೆ 20 ಮಂದಿ ಡಯಾಲಿಸಿಸ್ ರೋಗಿಗಳು ಚಿಕಿತ್ಸೆಗೆ ಕಾಯುತ್ತಿದ್ದಾರೆ.

ಮಾಲೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಸಂತ್ ನೇತೃತ್ವದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದೆ. ಪ್ರತಿ ದಿನ ಹೊರರೋಗಿಗಳ ಸಂಖ್ಯೆ ಸುಮಾರು ಒಂದು ಸಾವಿರದಿಂದ 1,300 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಯಾಲಿಸಿಸ್ ಚಿಕಿತ್ಸೆ ವ್ಯವಸ್ಥೆಯನ್ನು ಇಕೆ ಸಂಜೀವಿನಿ ಟ್ರಸ್ಟ್ ಅವರು ಗುತ್ತಿಗೆ ಪಡೆದಿದ್ದು, ಟ್ರಸ್ಟ್ ನಿರ್ಲಕ್ಷ್ಯದಿಂದ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ.

1956 ರಲ್ಲಿ ಪಟ್ಟಣದ ಉದ್ಯಮಿ ಸೀತಾರಮಯ್ಯ ಅವರು ಉಚಿತವಾಗಿ ನಿರ್ಮಾಣ ಮಾಡಿಕೊಟ್ಟದ್ದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮೈಸೂರು ಸರ್ಕಾರದ ಅಂದಿನ ಸಚಿವ ಟಿ.ಚನ್ನಯ್ಯ ಅವರು ಚಾಲನೆ ನೀಡಿದ್ದರು. ಆನಂತರ ಪಟ್ಟಣದ ಜನಸಂಖ್ಯೆ ಏರಿಕೆಯಾಗಿದೆ. ಜನಸಂಖ್ಯೆಗೆ ತಕ್ಕಂತೆ ಚಿಕಿತ್ಸೆ ದೊರೆಯುತ್ತಿಲ್ಲ.

ಆಸ್ಪತ್ರೆ ಕಟ್ಟಡ ಕೊರತೆ: ಪಟ್ಟಣದ 100 ಹಾಸಿಗೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಇರುವುದರಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ 346 ಗ್ರಾಮಗಳಿಂದ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುತ್ತಾರೆ. ಹೋಬಳಿ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರೋಗಿಗಳು ದಾಖಲಾಗುತ್ತಾರೆ.

ಚಿಕಿತ್ಸೆ ನೀಡಲು ಸಮರ್ಪಕ ವೈದ್ಯರ ತಂಡ ಇದ್ದರೂ ಕಟ್ಟಡ ವ್ಯವಸ್ಥೆ ಇಲ್ಲದೆ ಇರುವುದರಿಂದ ತೊಂದರೆಯಾಗಿದೆ. ಸರ್ಕಾರದಿಂದ ನಿರ್ಮಾಣವಾಗಿರುವ ಕಟ್ಟಡ ಬಹುತೇಕ ಶಿಥಿಲಾವಸ್ಥೆಯಲ್ಲಿದೆ. ಓಪಿಡಿ ವಿಭಾಗ ಹಳೆ ಕಟ್ಟಡದಲ್ಲಿದ್ದು ತುಂಬ ಕಿರಿದಾಗಿದೆ. ಹೊಸದಾಗಿ ನೇಮಕವಾಗಿರುವ ಕಡ್ಡಾಯ ಗ್ರಾಮೀಣ ಸೇವೆಯ ಸ್ನಾತಕೋತ್ತರ ಪದವಿ ವೈದ್ಯರಿಗೆ ಮತ್ತು ಹಾಲಿ ಇರುವ ತಜ್ಞ ವೈದ್ಯರಿಗೆ ರೋಗಿಗಳನ್ನು ತಪಾಸಣೆ ಮಾಡಲು ಸ್ಥಳಾವಕಾಶದ ಕೊರತೆ ಎದುರಾಗಿದೆ.

ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್‌, ಎನ್‌ಆರ್‌ಸಿ ವಾರ್ಡ್‌, ಸಮರ್ಪಕ ಓಪಿಡಿ ಬ್ಲಾಕ್ ಇಲ್ಲದೇ ತೊಂದರೆಯಾಗಿದೆ. ಔಷಧಿಗಳ ಉಗ್ರಾಣ ತುಂಬ ಕಿರಿದಾಗಿದ್ದು  ಔಷಧಿ ವಿತರಣಾ ವಿಭಾಗದ (ಫಾರ್ಮಸಿ) ಅಗತ್ಯವಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಹಲವಾರು ಕೈಗಾರಿಕಾ ಪ್ರಾಂಗಣ ಸ್ಥಾಪನೆಯಾಗಿರುವುದರಿಂದ ಕಾರ್ಮಿಕರ ಸಂಖ್ಯೆ, ವಾಹನ ದಟ್ಟಣೆ ಏರಿಕೆಯಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಟ್ರಾಮ್ ಕೇರ್ ಸೆಂಟರ್‌ ನಿರ್ಮಿಸುವ ಅವಶ್ಯಕತೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಹೆರಿಗೆ ಆಗುತ್ತಿದ್ದು, ಹೆರಿಗೆ ಕೊಠಡಿ ಕಿರಿದಾಗಿದೆ. ಸರ್ಕಾರದಿಂದ ಐಸಿಯು ಉನ್ನತೀಕರಣಕ್ಕಾಗಿ ಲಕ್ಷಾಂತರ ಬೆಲೆಯ ಉಪಕರಣಗಳು ಸರಬರಾಜಾಗುತ್ತಿವೆ. ಅವುಗಳನ್ನು ಅಳವಡಿಸಲು ಕೊಠಡಿಗಳ ಕೊರತೆ ಉಂಟಾಗಿದೆ.

ತಂತ್ರಜ್ಞರ ಕೊರತೆ: ಡಯಾಲಿಸಿಸ್ ಚಿಕಿತ್ಸೆ ನೀಡಲು ನುರಿತ ವೈದ್ಯರಿಲ್ಲ. ತಂತ್ರಜ್ಞರನ್ನು ನೇಮಿಸಿಲ್ಲ. ಆಸ್ಪತ್ರೆಯ ಇಬ್ಬರು ನರ್ಸ್‌ಗಳು ಹಾಗೂ ಒಬ್ಬ ಖಾಸಗಿ ತಂತ್ರಜ್ಞರನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಹವಾನಿಯಂತ್ರಣ ಅಳವಡಿಸಿದ್ದರೂ ಕಾರ್ಯ ನಿರ್ವಹಿಸದೆ ಕೆಟ್ಟು ಬಹಳ ದಿನಗಳು ಕಳೆದಿದೆ. ಡಯಾಲಿಸಿಸ್ ಕೊಠಡಿಯಲ್ಲಿ ಶೌಚಾಲಯ ಇಲ್ಲದೇ ದೂರದ ಕೊಠಡಿಯಲ್ಲಿರುವ ಶೌಚಾಲಯವೇ ಗತಿಯಾಗಿದೆ.

ಮಾಲೂರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಿರಿದಾದ ಡಯಾಲಿಸಿಸ್ ಚಿಕಿತ್ಸಾ ಕೊಠಡಿ
ಮಾಲೂರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಿರಿದಾದ ಡಯಾಲಿಸಿಸ್ ಚಿಕಿತ್ಸಾ ಕೊಠಡಿ
ಮಾಲೂರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಿರಿದಾದ ಡಯಾಲಿಸಿಸ್ ಚಿಕಿತ್ಸಾ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ಮಾಲೂರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಿರಿದಾದ ಡಯಾಲಿಸಿಸ್ ಚಿಕಿತ್ಸಾ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ಮಾಲೂರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಿರಿದಾದ ಕೊಠಡಿ
ಮಾಲೂರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಿರಿದಾದ ಕೊಠಡಿ
ಗೀತಾ
ಗೀತಾ
ಡಯಾಲಿಸಸ್ ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದ ಹವ ನಿಯಾಂತ್ರಣ ಉಪಕರಣಗಳು
ಡಯಾಲಿಸಸ್ ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದ ಹವ ನಿಯಾಂತ್ರಣ ಉಪಕರಣಗಳು
ಸಂಪತ್ 
ಸಂಪತ್ 
ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಕಟ್ಟಡದ ಕೊರತೆಯಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಕೂಡಲೇ ಗಮನವಹಿಸಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕು.
ಸಂಪತ್ ಕಾರಂಜಿ ಬಡಾವಣೆ ನಿವಾಸಿ
17 ಮಂದಿಗೆ ಮಾತ್ರ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ. 20 ರೋಗಿಗಳು ಕಾಯುತ್ತಿದ್ದಾರೆ. ಯಂತ್ರಗಳ ಕೊರತೆಯಿಂದ ಎಲ್ಲ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ
ಗೀತಾ ಶುಶ್ರೂಷಕಿ
ಡಯಾಲಿಸಿಸ್ ರೋಗಿಗಳಿಗೆ ಸಮರ್ಪಕವಾದ ಕಟ್ಟಡ ಸೌಕರ್ಯ ಇಲ್ಲ. ರೋಗಿಗಳು ಚಿಕಿತ್ಸೆ ಪಡೆಯುವ ಕೊಠಡಿಯಲ್ಲಿ ಹವಾನಿಯಂತ್ರಣ ಹೆಸರಿಗೆ ಮಾತ್ರ ಇದೆ. ದೂರದಲ್ಲಿರುವ ಶೌಚಾಲಯ ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿದೆ. ಸಮರ್ಪಕ ಚಿಕಿತ್ಸೆ ದೊರೆಯದೆ ನನ್ನ ದೇಹದ ತೂಕ ಹೆಚ್ಚಾಗಿದೆ.
ಕದೀರಪ್ಪ ಮಾಲೂರು ನಿವಾಸಿ

ಮೇಲಾಧಿಕಾರಿಗಳಿಗೆ ಮನವಿ ಸರ್ಕಾರಿ ಆಸ್ಪತ್ರೆಯ ಕಟ್ಟಡ ಶಿಥಿಲವಾಗಿದ್ದು ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆಯಾಗಿದೆ. ಸರ್ಕಾರದಿಂದ ರಾಷ್ಟ್ರಿಯ ಆರೋಗ್ಯ ಅಭಿಯಾನದಡಿ ಹೊಸ ಹೊಸ ಯೋಜನೆಗಳು ಪರಿಚಯಿಸುತ್ತಿದೆ. ಇವುಗಳ ಅನುಷ್ಠಾನಕ್ಕೆ ಸ್ಥಳಾವಕಾಶ ಕೊರತೆ ಇದೆ. ಅರಿವಳಿಕೆ ವೈದ್ಯರು ವರ್ಗಾವಣೆಯಾಗಿದ್ದು ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಸಂದರ್ಭಗಳಲ್ಲಿ ತೊಂದರೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದಲ್ಲಿ ಬೆಂಕಿ ನಿಯಂತ್ರಿಸುವ ವ್ಯವಸ್ಥೆ ಇಲ್ಲ. ಡಯಾಲಿಸಿಸ್ ಚಿಕಿತ್ಸೆಯನ್ನು ಇಕೆ ಸಂಜೀವಿನಿ ಟ್ರಸ್ಟ್ ಅವರಿಗೆ ವಹಿಸಲಾಗಿದೆ. ಆಸ್ಪತ್ರೆಯಲ್ಲಿ ಡಯಾಲಿಸಸ್ ಚಿಕಿತ್ಸೆಯ 3 ಯಂತ್ರ ಇದ್ದು ಒಂದು ಮಾರಿಕಾಂಬ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗಿದೆ. ಇದರಲ್ಲಿ ಎರಡು ಯಂತ್ರಗಳು ಕೆಟ್ಟಿವೆ. ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಇನ್ನೂ ಐದಾರು ಯಂತ್ರಗಳನ್ನು ಅಳವಡಿಸುವಂತೆ ಆರೋಗ್ಯ ಇಲಾಖೆ ಮೇಲಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡಲಾಗಿದೆ. ಡಾ.ವಸಂತ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT