ಭಾನುವಾರ, ಅಕ್ಟೋಬರ್ 20, 2019
27 °C
ವರಿಷ್ಠರಿಗೆ ವರದಿ ಸಲ್ಲಿಸಿದ ಸತ್ಯಶೋಧನಾ ಸಮಿತಿ

ಕಾಂಗ್ರೆಸ್‌ ಸೋಲಿನ ಪರಾಮರ್ಶೆ: ಭಿನ್ನಾಭಿಪ್ರಾಯ– ದ್ವೇಷದಿಂದ ಪರಾಭವ

Published:
Updated:

ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಕ್ಷೇತ್ರದ ವ್ಯಾಪ್ತಿಯ ಪಕ್ಷದ ಮುಖಂಡರ ನಡುವಿನ ಭಿನ್ನಾಭಿಪ್ರಾಯ, ಸಮನ್ವಯ ಕೊರತೆ, ದ್ವೇಷ ಹಾಗೂ ಮುನಿಯಪ್ಪರ ಕುಟುಂಬ ರಾಜಕಾರಣ ಕಾರಣವೆಂದು ಸತ್ಯಶೋಧನಾ ಸಮಿತಿಯು ವರಿಷ್ಠರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಕಾಂಗ್ರೆಸ್‌ ಸತ್ಯಶೋಧನಾ ಸಮಿತಿ ಸದಸ್ಯರಾದ ಮಾಜಿ ಸಂಸದ ಆರ್‌.ಧ್ರುವನಾರಾಯಣ್‌, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರ ತಂಡವು ಆಗಸ್ಟ್‌ನಲ್ಲಿ ಜಿಲ್ಲೆಗೆ ಭೇಟಿ ಕೊಟ್ಟು ಲೋಕಸಭಾ ಚುನಾವಣೆ ಸೋಲಿನ ಸಂಬಂಧ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿತ್ತು.

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಆಧರಿಸಿ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಿರುವ ಸಮಿತಿಯು, ‘ಮುಖಂಡರ ಆರೋಪ ಪ್ರತ್ಯಾರೋಪದಿಂದ ಪಕ್ಷದ ಅಭ್ಯರ್ಥಿ ಸೋತಿದ್ದಾರೆ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ಸ್ಥಳೀಯ ಮುಖಂಡರ ಸಭೆ ಕರೆದು ಅನ್ಯೋನ್ಯ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಸಲಹೆ ನೀಡಿದೆ.

‘ಮುಖಂಡರ ಭಿನ್ನಾಭಿಪ್ರಾಯದಿಂದ ಕಾರ್ಯಕರ್ತರಲ್ಲಿ ಬಣಗಳು ಸೃಷ್ಟಿಯಾಗಿ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್ ಅವರು ಶೀಘ್ರವೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರ ಸಭೆ ನಡೆಸಿ ಭಿನ್ನಮತಕ್ಕೆ ಕಡಿವಾಣ ಹಾಕಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ’ ಎಂದು ಮೂಲಗಳು ಹೇಳಿವೆ.

ಸತ್ಯಶೋಧನಾ ಸಮಿತಿಗೆ ದೂರ ನೀಡಿದ್ದ ಕೆ.ಎಸ್‌.ಮುನಿಯಪ್ಪ, ‘ಸುಲಭವಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರದಲ್ಲಿ ನಾನು ಸೋತಿದ್ದೇನೆ. ಶಾಸಕರಾದ ಕೆ.ಆರ್‌.ರಮೇಶ್‌ಕುಮಾರ್‌, ವಿ.ಮುನಿಯಪ್ಪ, ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮ್ಮದ್‌, ಮಾಜಿ ಶಾಸಕ ಕೊತ್ತೂರು ಮಂಜುನಾಥ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಅನಿಲ್‌ಕುಮಾರ್‌ ಕುತಂತ್ರ ಮಾಡಿ ನನ್ನನ್ನು ಸೋಲಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದರು.

ಭ್ರಷ್ಟಾಚಾರದ ಆರೋಪ: ‘2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ನನಗೆ ಸಹಕಾರ ನೀಡಲಿಲ್ಲ. ಅವರ ವಿರುದ್ಧ ವ್ಯಾಪಕ ಭ್ರಷ್ಟಾಚಾರ, ಹಗರಣದ ಆರೋಪವಿದೆ. ಈ ಬಗ್ಗೆ ಸಾರ್ವಜನಿಕವಾಗಿ ತೀವ್ರ ಚರ್ಚೆಯಾಗಿತ್ತು. ಹೀಗಾಗಿ ಕೋಲಾರ ಕ್ಷೇತ್ರದಲ್ಲಿ ಖರ್ಗೆಯವರಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೆವು. ಆದರೆ, ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡದ ಹೈಕಮಾಂಡ್‌ ಮುನಿಯಪ್ಪ ಅವರಿಗೆ ಟಿಕೆಟ್‌ ಕೊಟ್ಟಿತ್ತು’ ಎಂದು ರಮೇಶ್‌ಕುಮಾರ್‌ ಸತ್ಯಶೋಧನಾ ಸಮಿತಿ ಸದಸ್ಯರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

‘ವಿಧಾನಸಭಾಧ್ಯಕ್ಷನಾಗಿದ್ದ ಕಾರಣ ಚುನಾವಣಾ ಪ್ರಚಾರಕ್ಕೆ ಹೋಗಲಿಲ್ಲ. ಕೆ.ಎಚ್‌.ಮುನಿಯಪ್ಪ ನಾಮಪತ್ರ ಸಲ್ಲಿಸುವಾಗ ಸೌಜನ್ಯಕ್ಕೂ ಕೇಳಲಿಲ್ಲ. ಶ್ರೀನಿವಾಸಪುರ ಕ್ಷೇತ್ರದ ಮಾಜಿ ಶಾಸಕ ಜೆಡಿಎಸ್‌ನ ವೆಂಕಟಶಿವಾರೆಡ್ಡಿ ಅವರಿಗೆ ಆದ್ಯತೆ ನೀಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿ ಮುನಿಯಪ್ಪರ ಹಿನ್ನಡೆಗೆ ಕಾರಣವಾಯಿತು. ಅಲ್ಲದೇ, ಕ್ಷೇತ್ರದಲ್ಲಿ ಮುನಿಯಪ್ಪರ ವಿರೋಧಿ ಅಲೆ ಪ್ರಬಲವಾಗಿದ್ದರಿಂದ ಅವರು ಸೋತಿದ್ದಾರೆ ಎಂದು ರಮೇಶ್‌ಕುಮಾರ್‌ ಸಮಿತಿ ಮುಂದೆ ಹೇಳಿದ್ದಾರೆ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪತ್ರ ಬರೆದಿದ್ದೆ: 2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಚ್‌.ಮುನಿಯಪ್ಪ ತನ್ನ ಪರ ಪ್ರಚಾರ ಮಾಡಲಿಲ್ಲ, ಅವರ ಹಿಂಬಾಲಕರು ಎದುರಾಳಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ಕೆಪಿಸಿಸಿ ಮತ್ತು ಎಐಸಿಸಿಗೆ ಪತ್ರ ಬರೆದಿದ್ದಾಗಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸಮಿತಿ ಸದಸ್ಯರ ಮುಂದೆ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಮೈತ್ರಿ ಪಾಲುದಾರ ಪಕ್ಷವಾದ ಜೆಡಿಎಸ್‌ನ ಶಾಸಕ ಶ್ರೀನಿವಾಸಗೌಡ, ಮಾಜಿ ಶಾಸಕ ಮಂಜುನಾಥ್‌ಗೌಡ ಅವರು ಕೆ.ಎಚ್.ಮುನಿಯಪ್ಪರ ಜತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಬೆಂಬಲಿಸಿದರು. ಮುಳಬಾಗಿಲಿನಲ್ಲಿ ಕೊತ್ತೂರು ಮಂಜುನಾಥ್ ಅವರು ಮುನಿಯಪ್ಪರ ಮೇಲಿನ ಸಿಟ್ಟಿನಿಂದ ಬಿಜೆಪಿ ಪರ ಕೆಲಸ ಮಾಡಿದರು ಎಂದು ಮುಖಂಡರು ಸಮಿತಿಗೆ ಸದಸ್ಯರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Post Comments (+)