ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಟೊಮೆಟೊಗೆ ಚುಕ್ಕಿ ರೋಗ, ರೈತರು ಕಂಗಾಲು

ವಾತಾವರಣದಲ್ಲಿ ತೇವಾಂಶ ಹೆಚ್ಚಳ: ಟೊಮೆಟೊ ಬೆಳೆಗೆ ರೋಗಬಾಧೆ
Last Updated 20 ಅಕ್ಟೋಬರ್ 2020, 11:23 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಚುಕ್ಕಿ ರೋಗ ತಗುಲಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಸದ್ಯ ಜಿಲ್ಲೆಯ ಸುಮಾರು 16 ಸಾವಿರ ಹೆಕ್ಟೇರ್‌ ಭೂಪ್ರದೇಶದಲ್ಲಿ ಟೊಮೆಟೊ ಬೆಳೆ ಇದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ವರ್ಷಕ್ಕೆ ₹ 200 ಕೋಟಿಗೂ ಹೆಚ್ಚು ಟೊಮೆಟೊ ವಹಿವಾಟು ನಡೆಯತ್ತದೆ. ಜಿಲ್ಲೆಯಿಂದ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಕ್ಕೆ ಪ್ರತಿನಿತ್ಯ ಟೊಮೆಟೊ ರಫ್ತಾಗುತ್ತದೆ.

ಜಿಲ್ಲೆಯಲ್ಲಿ ಏಳೆಂಟು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಇದರಿಂದ ವಾತಾವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚಿದ್ದು, ಟೊಮೆಟೊ ಬೆಳೆಯಲ್ಲಿ ಚುಕ್ಕಿ ರೋಗ ಕಾಣಿಸಿಕೊಂಡಿದೆ.

ಬಹುತೇಕ ತಾಲ್ಲೂಕುಗಳಲ್ಲಿ ಟೊಮೆಟೊ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಚುಕ್ಕಿ ರೋಗಬಾಧಿತ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ. ಕಾಯಿಗಳ ಮೇಲೆ ಕಪ್ಪು ಚುಕ್ಕಿಗಳಾಗಿದ್ದು, ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿವೆ.

ಚುಕ್ಕಿ ರೋಗಕ್ಕೆ ಕಾರಣವಾಗಿರುವ ಶಿಲೀಂಧ್ರಗಳು ಗಿಡದ ಎಲೆಗಳನ್ನು ತಿನ್ನುತ್ತಿದ್ದು, ಕಾಂಡದ ಭಾಗ ಕೊಳೆತು ಗಿಡಗಳು ಸೊರಗುತ್ತಿವೆ. ಲಾಕ್‌ಡೌನ್‌ ವೇಳೆ ಸರಕು ಸಾಗಣೆ ಸೇವೆ ಸ್ಥಗಿತಗೊಂಡು ಮತ್ತು ಬೆಲೆ ಕುಸಿತವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದ ಟೊಮೆಟೊ ಬೆಳೆಗಾರರಿಗೆ ಇದೀಗ ಚುಕ್ಕಿ ರೋಗ ದೊಡ್ಡ ಪೆಟ್ಟು ಕೊಟ್ಟಿದೆ.

ಹತೋಟಿಗೆ ಬರುತ್ತಿಲ್ಲ: ರೈತರು ಬೆಳೆಗೆ ವಿವಿಧ ಬಗೆಯ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ಮೂರ್ನಾಲ್ಕು ದಿನ ಕಳೆಯುವಷ್ಟರಲ್ಲಿ ಪುನಃ ರೋಗ ಕಾಣಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ಜಮೀನುಗಳ ಟೊಮೆಟೊ ಬೆಳೆಗೂ ರೋಗ ಹಬ್ಬುತ್ತಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಮೋಡ ಮುಸುಕಿದ ವಾತಾವರಣ ಹಾಗೂ ಜಡಿ ಮಳೆ ಮುಂದುವರಿದರೆ ಚುಕ್ಕಿ ರೋಗ ಮತ್ತಷ್ಟು ಉಲ್ಬಣಗೊಂಡು ಟೊಮೆಟೊ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT