ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದಿಂದ ಸಗಣಿ ಚಳವಳಿ

ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ: ಸಭೆಯಲ್ಲಿ ನಿರ್ಣಯ
Last Updated 26 ಫೆಬ್ರುವರಿ 2021, 2:47 IST
ಅಕ್ಷರ ಗಾತ್ರ

ಬಂಗಾರಪೇಟೆ: ‘ಕಾಡು ಪ್ರಾಣಿಗಳ ಹಾವಳಿಯಿಂದ ರೈತರ ಪ್ರಾಣ ಮತ್ತು ಬೆಳೆ ರಕ್ಷಣೆ ಮಾಡುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ಮಾ.3ರಂದು ಸಗಣಿ ಚಳವಳಿ ಮಾಡಲು ರೈತಸಂಘದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಜಿಲ್ಲಾ ಘಟಕ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ತಿಳಿಸಿದರು.

‘ಕಾಡಾನೆ ಹಾವಳಿಯಿಂದ ತತ್ತರಿಸಿರುವ ಹಳ್ಳಿಗಳಿಗೆ ಭೇಟಿ ನೀಡಿದ ಬಳಿಕ ಸಭೆಯಲ್ಲಿ ಚರ್ಚಿಸಲಾಯಿತು. ಕೋವಿಡ್‌ನಿಂದ ಚೇತರಿಸಿಕೊಂಡ ರೈತರು ಖಾಸಗಿ ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಅದು ಸಮೃದ್ಧವಾಗಿ ಬೆಳೆದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಸಮಯದಲ್ಲಿ ಕಾಡಾನೆಗಳು ರಾತ್ರೋರಾತ್ರಿ ಹಾಳು ಮಾಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬೆಳೆ ರಕ್ಷಣೆಗೆಂದು ತೋಟಗಳಿಗೆ ಹೋಗುವ ರೈತರನ್ನು ಆನೆಗಳು ತುಳಿದು ಸಾಯಿಸುತ್ತಿವೆ. ಇದರಿಂದ ಗಡಿ ಭಾಗದ ಜನರು ಭಯಭೀತರಾಗಿದ್ದಾರೆ. ಕುಟುಂಬದ ಮುಖ್ಯಸ್ಥರನ್ನು ಕಳೆದು
ಕೊಂಡು ಕಣ್ಣೀರಾಕುತ್ತಿದ್ದರೂ ಅರಣ್ಯ ಇಲಾಖೆ, ಜನಪ್ರತಿನಿಧಿಗಳಿಗೆ ಕನಿಷ್ಠ ಕಾಳಜಿ ಇಲ್ಲವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಇನ್ನೂ ಎಷ್ಟು ರೈತರ ಪ್ರಾಣ ಬೇಕು? ಬಡವರ ಪ್ರಾಣಕ್ಕೆ ಬೆಲೆ ಇಲ್ಲವೇ?, ರಾತ್ರಿ ಹಗಲು ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಭಯದಿಂದ ಬದುಕುವ ರೈತರಿಗೆ ರಕ್ಷಣೆ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಮೂರು ದಿನದ ಒಳಗೆ ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಹಾಗೂ ಗಡಿಭಾಗದಲ್ಲಿ ಆನೆ ಹಾವಳಿಯಿಂದಾಗಿರುವ ಅನಾಹುತ ಕುರಿತು ಮಾಹಿತಿ ಪಡೆಯಲು ವಿಶೇಷ ತಂಡ ರಚನೆ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಮಹಿಳಾಧ್ಯಕ್ಷ ಎ.ನಳಿನಿಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ರಾಘವೇಂದ್ರ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಾಂದ್ಪಾಷ, ಈಕಂಬಳ್ಳಿ ಮಂಜುನಾಥ್, ಚಲಪತಿ, ನಾವಾಜ್ಪಾಷ, ಜಮೀರ್ಪಾಷ, ಗುಲ್ಲಟ್ಟಿ ಗೋವಿಂದಪ್ಪ, ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಲಕ್ಷ್ಮಮ್ಮ, ರಾಮಕ್ಕ, ತಿಮ್ಮಕ್ಕ, ಮೊಹ್ಮದ್ ಶೋಹಿಬ್, ಗೌಸ್, ನಾಯಕರಹಳ್ಳಿ ಮಂಜುನಾಥ್, ವಟ್ರಕುಂಟೆ ಆಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT