ನೀತಿಸಂಹಿತೆ: ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣು: ಜಿಲ್ಲಾಧಿಕಾರಿ ಮಂಜುನಾಥ್‌

ಸೋಮವಾರ, ಮಾರ್ಚ್ 25, 2019
28 °C

ನೀತಿಸಂಹಿತೆ: ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣು: ಜಿಲ್ಲಾಧಿಕಾರಿ ಮಂಜುನಾಥ್‌

Published:
Updated:
Prajavani

ಅಂಕಿ ಅಂಶ.....
* 16,12,227 ಮತದಾರರು ಜಿಲ್ಲೆಯಲ್ಲಿದ್ದಾರೆ
* 8,09,331 ಪುರುಷ ಮತದಾರರು
* 8,02,896 ಮಹಿಳಾ ಮತದಾರರು
* 2,100 ಮತಗಟ್ಟೆಗಳಿವೆ

ಕೋಲಾರ: ‘ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಕ್ರಮ ಹಾಗೂ ನೀತಿಸಂಹಿತೆ ಉಲ್ಲಂಘನೆ ಸಂಬಂಧ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನೀತಿಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ’ ಎಂದರು.

‘ಕೇಂದ್ರ ಚುನಾವಣಾ ಆಯೋಗವು ಮಾ.19ರಂದು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಮಾರ್ಚ್‌ 26 ಕಡೆಯ ದಿನ. ಮಾರ್ಚ್‌ 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮಾರ್ಚ್‌ 29 ಕೊನೆಯ ದಿನ. ಏ.18ರಂದು ಮತದಾನ ನಡೆಯುತ್ತದೆ. ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಮೇ 27ಕ್ಕೆ ನೀತಿಸಂಹಿತೆ ಅಂತ್ಯಗೊಳ್ಳುತ್ತದೆ’ ಎಂದು ಹೇಳಿದರು.

‘ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 16,12,227 ಮತದಾರರಿದ್ದು, ಈ ಪೈಕಿ 8,09,331 ಪುರುಷ ಮತ್ತು 8,02,896 ಮಹಿಳಾ ಮತದಾರರಾಗಿದ್ದಾರೆ. ಜತೆಗೆ 1,076 ಮಂದಿ ಸೇವಾ ಮತದಾರರಿದ್ದಾರೆ’ ಎಂದು ವಿವರಿಸಿದರು.

‘ಒಟ್ಟಾರೆ 2,100 ಮತಗಟ್ಟೆಗಳಿದ್ದು, ಈ ಪೈಕಿ 1,624 ಸಾಮಾನ್ಯ ಹಾಗೂ 476 ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ. 2,310 ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ಮತ ಖಾತ್ರಿ ಉಪಕರಣ (ವಿ.ವಿ ಪ್ಯಾಟ್) ಸಿದ್ಧತೆ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಪರಿಶೀಲನೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ವಾಹನ ತಪಾಸಣೆ: ‘ಜಿಲ್ಲೆಯಲ್ಲಿ 8 ತನಿಖಾ ಠಾಣೆ ತೆರೆಯಲಾಗಿದ್ದು, ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಕಡ್ಡಾಯವಾಗಿ ವಿಡಿಯೋ ಚಿತ್ರೀಕರಿಸಲಾಗುತ್ತದೆ’ ಎಂದರು. 

‘ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ವಿವಿಧ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಜಾಹೀರಾತು, ಸಾಮಾಜಿಕ ಜಾಲತಾಣದ ಮೇಲೂ ಮಾದರಿ ಚುನಾವಣಾ ನೀತಿಸಂಹಿತೆ ತಂಡಗಳು ನಿಗಾ ವಹಿಸುತ್ತವೆ. ಅಭ್ಯರ್ಥಿಗಳು ಚುನಾವಣಾ ಪ್ರಚಾರ ಸಭೆ ನಡೆಸಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಲ್ಲವಾದರೆ ಸಭೆ ಆಯೋಜಕರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.

ಅನುಮತಿ ಪಡೆಯಬೇಕು: ‘ಯಾವುದೇ ರಾಜಕೀಯ ಪಕ್ಷ ಪ್ರಚಾರ ಸಭೆ, ಕಾರ್ಯಕ್ರಮ ನಡೆಸುವ ಮುನ್ನ ಚುನಾವಣಾ ಶಾಖೆಯಿಂದ ಅನುಮತಿ ಪಡೆಯಬೇಕು. ವಿಡಿಯೋ ವಿಚಕ್ಷಣ ದಳವು ಇಡೀ ಸಭೆ ಅಥವಾ ಕಾರ್ಯಕ್ರಮವನ್ನು ವಿಡಿಯೋ ಚಿತ್ರೀಕರಿಸುತ್ತದೆ. ಜಿಲ್ಲಾ ಕೇಂದ್ರದಲ್ಲಿರುವ ವಿಡಿಯೋ ಪರಿಶೀಲನಾ ತಂಡವು ಎಲ್ಲಾ ದೃಶ್ಯಾವಳಿ ತುಣುಕುಗಳನ್ನು ವೀಕ್ಷಿಸಿ ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ವಹಿಸುತ್ತದೆ. ಅಕ್ರಮ ಕಂಡುಬಂದರೆ ದೂರು ದಾಖಲಿಸಲಿದೆ’ ಎಂದರು.

‘ಚುನಾವಣಾ ಪ್ರಕ್ರಿಯೆಗೆ 10,079 ಸಿಬ್ಬಂದಿ ನಿಯೋಜಿಸಲಾಗಿದೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಸಂಬಂಧ ನಿಗಾ ವಹಿಸಲು ತಂಡಗಳ ರಚನೆ, ಸಂಚಾರ ತನಿಖಾ ತಂಡ, ಸ್ಟ್ಯಾಟಿಕ್ ಸರ್ವೆಲೆನ್ಸ್‌, ವಿಡಿಯೋ ಕಣ್ಗಾವಲು ತಂಡ (ವಿಎಸ್‌ಟಿ), ವಿಡಿಯೋ ವೀಕ್ಷಣಾ ತಂಡ (ವಿವಿಟಿ) ರಚಿಸಲಾಗಿದ್ದು, ಮತದಾರರಿಗೆ ಹಣ ಹಂಚಿಕೆ ಸುದ್ದಿ ಬಂದರೆ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಕೋರಿದರು.

ಗೋಪ್ಯವಾಗಿ ಇಡುತ್ತೇವೆ: ‘ಚೆಕ್‌ ಪೋಸ್ಟ್‌ಗಳಲ್ಲಿ ಅಧಿಕಾರಿಗಳು ವಾಹನಗಳನ್ನು ತಪಾಸಣೆ ಮಾಡುವಾಗ ಸಾರ್ವಜನಿಕರು ಸಹಕರಿಸಬೇಕು. ಯಾವುದೇ ಚುನಾವಣಾ ಅಕ್ರಮದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವವರ ಹೆಸರು ಮತ್ತು ವಿವರವನ್ನು ಗೋಪ್ಯವಾಗಿ ಇಡುತ್ತೇವೆ’ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಕೆಜಿಎಫ್ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಸಹಾಯಕ ಚುನಾವಣಾಧಿಕಾರಿ ಮಂಜುಳಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !