ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಅಗತ್ಯ ಸೇವೆ

ಕೊರೊನಾ ಸೋಂಕು ಭೀತಿ: ಜನರ ಓಡಾಟ ತಪ್ಪಿಸಲು ವೇಮಗಲ್‌ ಗ್ರಾ.ಪಂ ದಿಟ್ಟ ಹೆಜ್ಜೆ
Last Updated 27 ಮಾರ್ಚ್ 2020, 16:25 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶವ್ಯಾಪಿ ಜಾರಿಯಾಗಿರುವ ದಿಗ್ಬಂಧನದಿಂದ ಜನಜೀವನಕ್ಕೆ ತೊಂದರೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಾಲ್ಲೂಕಿನ ವೇಮಗಲ್‌ ಗ್ರಾಮ ಪಂಚಾಯಿತಿಯು ದಿಟ್ಟ ಹೆಜ್ಜೆಯಿಟ್ಟಿದೆ.

ಹಾಲು, ತರಕಾರಿ, ಔಷಧ, ಮಾತ್ರೆ, ಕುಡಿಯುವ ನೀರು, ದಿನಸಿ ಪದಾರ್ಥಗಳು ಸೇರಿದಂತೆ ದಿನ ಬಳಕೆಗೆ ಅತ್ಯಗತ್ಯವಾಗಿ ಬೇಕಾದ ಸಾಮಗ್ರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಸೇವೆ ಆರಂಭಿಸಿ ಇಡೀ ಜಿಲ್ಲೆಗೆ ಮಾದರಿಯಾಗಿದೆ.

ಸ್ಥಳೀಯ ವೇಮಗಲ್‌ ಪೊಲೀಸ್‌ ಠಾಣೆಯು ಗ್ರಾ.ಪಂ ಜತೆ ಕೈಜೋಡಿಸಿದ್ದು, ಕೇಂದ್ರ ಸರ್ಕಾರ ಜಾರಿ ಮಾಡಿರುವ ದಿಗ್ಬಂಧನದ ಆದೇಶ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ರಸ್ತೆಗಿಳಿಯುವುದನ್ನು ತಪ್ಪಿಸಲು ಗ್ರಾ.ಪಂ ರೂಪಿಸಿರುವ ಈ ಪರಿಹಾರ ಮಾರ್ಗವು ಸಫಲವಾಗಿದೆ.

ವೇಮಗಲ್‌ ಗ್ರಾ.ಪಂ ವ್ಯಾಪ್ತಿಯಲ್ಲಿ ಚನ್ನಪ್ಪನಹಳ್ಳಿ, ಕುರುಬರಹಳ್ಳಿ, ಸಿಂಗೇಹಳ್ಳಿ, ವೇಮಗಲ್‌ ಹಾಗೂ ಪೆರ್ಜೇನಹಳ್ಳಿ ಗ್ರಾಮಗಳಿವೆ. ಒಟ್ಟಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 2,100 ಮನೆಗಳಿದ್ದು, ಜನಸಂಖ್ಯೆ 10 ಸಾವಿರದ ಗಡಿ ದಾಟಿದೆ. ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಪ್ರತಿಷ್ಠಿತ ಕೈಗಾರಿಕೆಗಳು ಹಾಗೂ ಖಾಸಗಿ ಕಂಪನಿಗಳಿದ್ದು, ಹೊರ ರಾಜ್ಯ ಮತ್ತು ಜಿಲ್ಲೆಗಳ ಕಾರ್ಮಿಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.

ಗ್ರಾಮಗಳಲ್ಲಿನ ಹಾಲು, ತರಕಾರಿ, ಶುದ್ಧ ಕುಡಿಯುವ ನೀರು, ದಿನಸಿ ಮತ್ತು ಔಷಧ ಮಾರಾಟ ಮಳಿಗೆ ಮಾಲೀಕರೊಂದಿಗೆ ಪೊಲೀಸ್‌ ಠಾಣೆ ಹಾಗೂ ಗ್ರಾಮ ಪಂಚಾಯಿತಿಯು ಒಪ್ಪಂದ ಮಾಡಿಕೊಂಡು ಜನರಿಗೆ ಅಗತ್ಯ ವಸ್ತುಗಳ ಸೇವೆ ನೀಡುತ್ತಿವೆ.

ಕರಪತ್ರ ಹಂಚಿಕೆ

ಅಗತ್ಯ ವಸ್ತುಗಳ ಸೇವೆ ನೀಡುವ ಅಂಗಡಿ ಮಾಲೀಕರ ಹೆಸರು ಮತ್ತು ಮೊಬೈಲ್‌ ಸಂಖ್ಯೆಯ ವಿವರ ಒಳಗೊಂಡ ಕರಪತ್ರಗಳನ್ನು ಮುದ್ರಿಸಿ ಗ್ರಾಮಗಳಲ್ಲಿ ಹಂಚಲಾಗಿದೆ. ಅಲ್ಲದೇ, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರಗಳನ್ನು ಅಂಟಿಸಲಾಗಿದೆ. ಜತೆಗೆ ಆಟೊಗಳಲ್ಲಿ ಈ ಬಗ್ಗೆ ಪ್ರತಿ ಗ್ರಾಮದಲ್ಲೂ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಲಾಗಿದೆ.

ಗ್ರಾಮಗಳಲ್ಲಿನ ಜನರು ತಮಗೆ ಅಗತ್ಯವಾದ ವಸ್ತುಗಳ ಸಂಬಂಧ ಅಂಗಡಿ ಮಾಲೀಕರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಮನೆ ಬಾಗಿಲಲ್ಲೇ ಸೇವೆ ಪಡೆಯುತ್ತಿದ್ದಾರೆ. ಇದರಿಂದ ಗ್ರಾ.ಪಂ ವ್ಯಾಪ್ತಿಯ ರಸ್ತೆಗಳಲ್ಲಿ ಜನರ ಅನಗತ್ಯ ಓಡಾಟ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರ ಗುಂಪುಗೂಡುವಿಕೆ ತಪ್ಪಿದೆ.

ಬೆಲೆಗೆ ಕಡಿವಾಣ

ಅಗತ್ಯ ವಸ್ತುಗಳ ಸೇವೆ ಒದಗಿಸುತ್ತಿರುವ ಅಂಗಡಿ ಮಾಲೀಕರಿಗೆ ವಸ್ತುಗಳ ಬೆಲೆ ವಿಚಾರವಾಗಿ ಗ್ರಾ.ಪಂ ಕೆಲ ಷರತ್ತು ವಿಧಿಸಿದೆ. ಮಾರುಕಟ್ಟೆ ದರದಲ್ಲೇ ವಸ್ತುಗಳನ್ನು ಜನರಿಗೆ ತಲುಪಿಸಬೇಕು ಮತ್ತು ವಸ್ತುಗಳ ಸಾಗಣೆ ವೆಚ್ಚಕ್ಕಾಗಿ ಪ್ರತ್ಯೇಕ ಹಣ ಪಡೆಯಬಾರದು. ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಹಣ ಪಡೆದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ಅಂಗಡಿ ಮಾಲೀಕರಿಗೆ ಗ್ರಾ.ಪಂನಿಂದ ಗುರುತಿನ ಚೀಟಿ ನೀಡಲಾಗಿದೆ. ಗ್ರಾಮಸ್ಥರು ದಿನಬಳಕೆ ವಸ್ತುಗಳ ಖರೀದಿಗಾಗಿ ಮನೆಯಿಂದ ಹೊರ ಹೋಗಿ ಪೊಲೀಸರ ಲಾಠಿ ಏಟು ತಿನ್ನುವ ಕಷ್ಟಕ್ಕೆ ಸಿಲುಕದೆ ಕುಳಿತ ಕಡೆಯಿಂದಲೇ ಕರೆ ಮಾಡಿ ಅಗತ್ಯ ಸೇವೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT