ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಟೆಸ್ಟ್‌ ಲ್ಯಾಬ್‌ ಸ್ಥಾಪನೆ

ಪ್ರಯೋಗಾಲಯಕ್ಕೆ ₹ 1 ಕೋಟಿ ನಿಗದಿ: ಶಾಸಕ ಕೆ.ಆರ್. ರಮೇಶ್ ಕುಮಾರ್
Last Updated 4 ಜೂನ್ 2021, 2:13 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದಲ್ಲಿ ದಾನಿಗಳ ನೆರವಿನಿಂದ ₹ 1 ಕೋಟಿ ವೆಚ್ಚದಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗುವುದು. ಇದರಿಂದ 24 ಗಂಟೆಯೊಳಗೆ ಪರೀಕ್ಷಾ ವರದಿ ನೀಡಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಕೋವಿಡ್ ನಿಯಂತ್ರಣ ಕುರಿತು ಚರ್ಚಿಸಲು ಏರ್ಪಡಿಸಿದ್ದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಂದಾಯ, ಆರೋಗ್ಯ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಎಲ್ಲ ನಾಗರಿಕರಿಗೂ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಗುವುದು ಎಂದು ಹೇಳಿದರು.

ಕ್ಷೇತ್ರದ ವ್ಯಾಪ್ತಿಗೆ ಬರುವ ಕೋಲಾರ ತಾಲ್ಲೂಕಿನ ಸುಗಟೂರು ಹಾಗೂ ಹೋಳೂರು ಹೋಬಳಿಯ ಜನರ ಬಳಕೆಗೆ ಒಂದು ವಾರದಲ್ಲಿ ಎರಡು ಆಂಬುಲೆನ್ಸ್ ಒದಗಿಸಲಾಗುವುದು. ಟಾಸ್ಕ್‌ಫೋರ್ಸ್ ಸಿಬ್ಬಂದಿ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ, ಜನರಲ್ಲಿ ಕೊರೊನಾ ಬಗ್ಗೆ ಭಯ ನಿವಾರಣೆ ಮಾಡಬೇಕು. ಸೋಂಕಿತರಿಗೆ ಅಗತ್ಯ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

‘ಕ್ಷೇತ್ರದ ಜನರ ಕ್ಷೇಮಕ್ಕಾಗಿ ನಾನು ಭಿಕ್ಷೆ ಬೇಡಲೂ ಸಿದ್ಧ. ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಶೀಘ್ರವೇ ಜನಸಂಖ್ಯೆಯ ವಿವರ ಸಂಗ್ರಹಿಸಿ ಕೊಡಬೇಕು. ಕೊರೊನಾ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಮೊದಲ ಆದ್ಯತೆ ನೀಡಬೇಕು. ಜೀವ ಉಳಿಸಿಕೊಂಡರೆ ಹೇಗೋ ಜೀವನ ನಡೆಸಬಹುದು. ಇದಕ್ಕೆ ಅಧಿಕಾರಿಗಳು ಸಹಕರಿಸಬೇಕು’ ಎಂದು ಹೇಳಿದರು.

ತಾಲ್ಲೂಕಿನ ಗನಿಬಂಡ ಹಾಗೂ ಚಲ್ದಿಗಾನಹಳ್ಳಿ ಸಮೀಪ ಕೋವಿಡ್ ಕೇಂದ್ರ ತೆರೆಯಲಾಗಿದೆ. ಮನೆಯಲ್ಲಿ ಅನುಕೂಲ ಇಲ್ಲದ ಕೋವಿಡ್ ಸೋಂಕಿತರು ಅಲ್ಲಿಗೆ ಹೋಗಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರಿಗೆ ಅಗತ್ಯವಾದ ಔಷಧಿ ಹಾಗೂ ಅನುಕೂಲ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಕೋವಿಡ್ ರೋಗಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಯಾವುದೇ ಪಕ್ಷಪಾತ ಮಾಡಬಾರದು. ಔಷಧಿ ಮತ್ತಿತರ ಸೌಲಭ್ಯದ ಕೊರತೆ ಕಂಡುಬಂದರೆ ತಿಳಿಸಬೇಕು. ಆದಷ್ಟು ಬೇಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಇಲಾಖೆಗಳೂ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಜನರನ್ನು ಕೋವಿಡ್ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಹೇಳಿದರು.

ತಹಶೀಲ್ದಾರ್‌ಗಳಾದ ಎಸ್.ಎಂ. ಶ್ರೀನಿವಾಸ್, ಶೋಭಿತಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಾದ ಎಸ್. ಆನಂದ್, ರಮೇಶ್ ಬಾಬು, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಂ.ಸಿ. ವಿಜಯ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜಿ.ಎಚ್. ಶ್ರೀನಿವಾಸ್, ಪೊಲೀಸ್ ಇನ್‌ಸ್ಪೆಕ್ಟರ್ ಸಿ. ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಡಿ. ಶೇಖರರೆಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಎಂಎಸ್ಐಎಲ್ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಕೋಚಿಮುಲ್ ನಿರ್ದೇಶಕ ಎನ್. ಹನುಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ಎಂ. ಶ್ರೀನಿವಾಸನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT