ಮಂಗಳವಾರ, ಜನವರಿ 28, 2020
23 °C
ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಂಚಾಲಕ ಬಸವರಾಜ್ ಹೇಳಿಕೆ

ಏಸು ಪ್ರತಿಮೆ ಸ್ಥಾಪನೆ: ಕನಕಪುರ ಚಲೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸರ್ಕಾರಿ ಗೋಮಾಳದಲ್ಲಿ ಕಾನೂನುಬಾಹಿರವಾಗಿ ಏಸು ಪ್ರತಿಮೆ ಸ್ಥಾಪನೆಗೆ ಮುಂದಾಗಿರುವುದು ಹಾಗೂ ಒಕ್ಕಲಿಗರ ಮತಾಂತರಕ್ಕೆ ಪ್ರೇರೇಪಿಸುತ್ತಿರುವುದನ್ನು ಖಂಡಿಸಿ ಜ.13ರಂದು ಕನಕಪುರ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಂಚಾಲಕ ಬಸವರಾಜ್ ಹೇಳಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್‌ ಅವರು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಹಾರೋಬೆಲೆ ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ ನಿಯಮಬಾಹಿರವಾಗಿ ಏಸು ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಅವರ ಧೋರಣೆ ಖಂಡಿಸಿ ನಡೆಸುತ್ತಿರುವ ಕನಕಪುರ ಚಲೋ ಹೋರಾಟದಲ್ಲಿ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು.

‘ಕರ್ನಾಟಕ ಭೂಕಂದಾಯ ಕಾಯ್ದೆ ಅನ್ವಯ ಜಾನುವಾರುಗಳ ಮೇವಿನ ಉದ್ದೇಶಕ್ಕೆ ಗೋಮಾಳದ ಜಮೀನು ಮೀಸಲಿರಿಸಲಾಗಿದೆ. ಆದರೆ, ಆ ಗೋಮಾಳ ಹಾಗೂ ಸುತ್ತಮುತ್ತಲಿನ ಸರ್ಕಾರಿ ಜಾಗವನ್ನು ಕ್ರೈಸ್ತರಿಗೆ ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದೆ. ಈ ಅಕ್ರಮದ ವಿರುದ್ಧ ತುಮಕೂರಿನ ಶನೇಶ್ವರಸ್ವಾಮಿ ದೇವಾಲಯದಿಂದ ಕನಕಪುರ ಚಲೋ ನಡೆಸಲಾಗುತ್ತದೆ’ ಎಂದು ವಿವರಿಸಿದರು.

‘ಹಾರೋಬೆಲೆ ಗ್ರಾಮದ ಬಳಿಯ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುತ್ತೇವೆ ಶಿವಕುಮಾರ್‌ ಹೇಳಿದ್ದಾರೆ. ಆದರೆ, ಅದು ವಾಣಿಜ್ಯ ಉದ್ದೇಶವಾಗುತ್ತದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ’ ಎಂದು ತಿಳಿಸಿದರು.

‘ಕಾನೂನಿನ ಪ್ರಕಾರ ಕೃಷಿಕರಲ್ಲದವರೆಗೆ ಜಮೀನು ಮಂಜೂರು ಮಾಡುವಂತಿಲ್ಲ. ನಿಯಮದ ಪ್ರಕಾರ ಸರ್ಕಾರಿ ಜಮೀನಿನಲ್ಲಿ ಶೇ 10ರಷ್ಟು ಮಾಜಿ ಸೈನಿಕರಿಗೆ, ಶೇ 50ರಷ್ಟು ಪರಿಶಿಷ್ಟರಿಗೆ, ಶೇ 5ರಷ್ಟು ಹಿಂದುಳಿದ ಬುಡಕಟ್ಟು ಜನಾಂಗಕ್ಕೆ ಮೀಸಲಿಡಬೇಕು. ಕ್ರೈಸ್ತರಿಗೆ ಜಮೀನು ಮೀಸಲಿಟ್ಟಿರುವ ಕಾನೂನು ಇಲ್ಲ. ನಿಯಮ ೬ರಡಿ ಭೂರಹಿತರಿಗೆ ಜಮೀನು ವಿತರಿಸುವಾಗ ಆದ್ಯತೆ ನೀಡಿ ಎಂದಿದೆ. ಆದರೆ, ದೇವಾಲಯ, ಚರ್ಚ್, ಮಸೀದಿಗೆ ನೀಡುವಂತೆ ನಿಯಮದಲ್ಲಿ ತಿಳಿಸಿಲ್ಲ’ ಎಂದು ವಿವರಿಸಿದರು.

ಮತಾಂತರದ ಷಡ್ಯಂತ್ರ: ‘ಕನಕಪುರದ ಹಾರೋಬೆಲೆ ಸುತ್ತಮುತ್ತಲನ ಒಕ್ಕಲಿಗರನ್ನು ಮತಾಂತರಗೊಳಿಸುವ ಷಡ್ಯಂತ್ರ ನಡೆದಿದೆ. ಇದಕ್ಕೆ ಆ ಭಾಗದ ಪ್ರಭಾವಿ ವ್ಯಕ್ತಿಗಳು ಕಾರಣರಾಗಿದ್ದಾರೆ’ ಎಂದು ಪರೋಕ್ಷವಾಗಿ ಶಿವಕುಮಾರ್‌ ಮತ್ತು ಅವರ ಸಹೋದರ ಡಿ.ಕೆ.ಸುರೇಶ್‌ ವಿರುದ್ಧ ಆರೋಪ ಮಾಡಿದರು.

‘ಕನಕಪುರ ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ಈ ಹಿಂದೆ ಶೇ 100ರಷ್ಟು ಒಕ್ಕಲಿಗರಿದ್ದರು. ಈಗ ಶೇ 85ರಷ್ಟು ಮಂದಿ ಕ್ರೈಸ್ತರಾಗಿದ್ದಾರೆ. ಹಿಂದೂಗಳಿಗೆ ಹಣದ ಆಮಿಷವೊಡ್ಡಿ ಹಾಗೂ ಪ್ರಾಣ ಬೆದರಿಕೆ ಹಾಕಿ ಮತಾಂತರ ಮಾಡಲಾಗುತ್ತಿದೆ. ಇದನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಘಟಕದ ಸಂಚಾಲಕ ಕಿಶೋರ್, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಆನಂದ್, ತುಮಕೂರು ವಿಭಾಗೀಯ ಸಂಘಟನಾ ಕಾರ್ಯದರ್ಶಿ ಗಿರೀಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು