ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ವೃತ್ತಿಪರ ತರಬೇತಿ ಕೇಂದ್ರ ಸ್ಥಾಪನೆ

ರಾಜ್ಯ ಸರ್ವ ಶಿಕ್ಷಣ ಅಭಿಯಾನದ ಜಂಟಿ ನಿರ್ದೇಶಕ ರತ್ನಯ್ಯ ಹೇಳಿಕೆ
Last Updated 14 ಆಗಸ್ಟ್ 2021, 13:52 IST
ಅಕ್ಷರ ಗಾತ್ರ

ಕೋಲಾರ: ‘ರಾಷ್ಟ್ರೀಯ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳಾಗಿಸುವ ದೃಷ್ಟಿಯಿಂದ 100 ಶಾಲೆಗಳಲ್ಲಿ ವೃತ್ತಿಪರ ತರಬೇತಿ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ’ ಎಂದು ರಾಜ್ಯ ಸರ್ವ ಶಿಕ್ಷಣ ಅಭಿಯಾನದ ಜಂಟಿ ನಿರ್ದೇಶಕ ಕೆ.ರತ್ನಯ್ಯ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಯೋಜನೆಗಳ ಕುರಿತು ಇಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಮಗುವಿನ ಕಲಿಕಾ ಪ್ರಗತಿ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ-2020ರಡಿ ಕಾರ್ಯೋನ್ಮುಖವಾಗುವ ಅಗತ್ಯವಿದೆ. ಕೌಶಲಾಭಿವೃದ್ಧಿ ಅತ್ಯಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಶಾಲೆಗಳ ಭೌತಿಕ ತರಗತಿಗಳನ್ನು ಆರಂಭಿಸುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳು ಸುಂದರಗೊಳ್ಳಬೇಕು. ಸ್ವಚ್ಛತೆಗೆ ಒತ್ತು ನೀಡಿ ಮತ್ತು ಶೌಚಾಲಯ, ಕುಡಿಯುವ ನೀರು ಸೇರಿದಂತೆ ಸೌಲಭ್ಯಗಳು ಸಮರ್ಪಕವಾಗಿರಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಶಾಲೆಗಳಲ್ಲಿ ಅಗತ್ಯವಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಿ. ಶಿಕ್ಷಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಯಾಗಬೇಕು. ಇಲಾಖೆಯ ಕಡತಗಳನ್ನು ನಿಯಮಾನುಸಾರ ವಿಷಯ ನಿರ್ವಾಹಕರು ಮಂಡಿಸಿ ನಿರ್ವಹಣೆ ಮಾಡಬೇಕು’ ಎಂದು ಎಚ್ಚರಿಕೆ ನೀಡಿದರು.

‘ಮಕ್ಕಳ ಕಲಿಕೆಗೆ ಹಿನ್ನಡೆಯಾಗದಂತೆ ಎಚ್ಚರ ವಹಿಸಿ. ಭೌತಿಕ ತರಗತಿಗಳು ಆರಂಭವಾಗುವವರೆಗೂ ಆನ್‌ಲೈನ್ ತರಗತಿ ನಡೆಸಬೇಕು. ವಿದ್ಯಾರ್ಥಿಗಳ ದಾಖಲೆಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿ. ಶಾಲಾ ಆಸ್ತಿ ರಕ್ಷಣೆಗೆ ದಾಖಲೆಪತ್ರ ಸಿದ್ಧಪಡಿಸಿಕೊಂಡು ಕ್ರಮಬದ್ಧವಾಗಿ ನಿರ್ವಹಿಸಿ’ ಎಂದು ತಸಲಹೆ ನೀಡಿದರು.

‘ಸಿಬ್ಬಂದಿ ವರ್ಗಾವಣೆ ಸಂಬಂಧ ಟಿಡಿಎಸ್‌ನಲ್ಲಿ ಮಾಹಿತಿ ಸಮಗ್ರವಾಗಿ ಪರಿಶೀಲಿಸಿ ಸಮಸ್ಯೆ ಇತ್ಯರ್ಥಪಡಿಸಿ. ಮುಳಬಾಗಿಲು ತಾಲ್ಲೂಕಿನ ಮಾಹಿತಿ ಅಪೂರ್ಣವಾಗಿರುವ ಕುರಿತು ಕ್ರಮ ವಹಿಸಿ ಪೂರ್ಣಗೊಳಿಸಿ. ಶಾಲೆ, ಕಚೇರಿಗಳಲ್ಲಿ ಸರ್ಕಾರ, ಸರ್ಕಾರೇತರ ನಗದು ವಹಿಗಳ ನಿರ್ವಹಣೆ ಸಮರ್ಪಕವಾಗಿರಬೇಕು. ಬಡ್ಡಿ ಹಣವನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡುವಂತಿಲ್ಲ. ಸಿವಿಲ್ ಕಾಮಗಾರಿಗಳ ನಿರ್ವಹಣೆಗೆ ಸೂಕ್ತ ಕ್ರಮವಹಿಸಿ’ ಎಂದು ತಾಕೀತು ಮಾಡಿದರು.

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಉತ್ತಮ ಪ್ರಗತಿಯಾಗಿದೆ. ಈ ಬಾರಿಯೂ ಗುಣಮಟ್ಟದಲ್ಲಿ ಉತ್ತಮ ಸಾಧನೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತಾವ ಸಲ್ಲಿಕೆ: ‘ಜಿಲ್ಲೆಯಲ್ಲಿ ಇಲಾಖೆಯ 250 ಮಂದಿ ಅನುಷ್ಠಾನಾಧಿಕಾರಿಗಳಿದ್ದು, ಸ್ಯಾಟ್ಸ್‌ನಲ್ಲಿ ಮಕ್ಕಳ ಮಾಹಿತಿ ದಾಖಲು ಪ್ರಕ್ರಿಯೆ ಶೇ 93ರಷ್ಟಾಗಿದೆ. ಅನುಕಂಪದ ಆಧಾರದ ಮೇಲೆ ಕೆಲಸಗಳನ್ನು ಕೂಡಲೇ ವಿಲೇವಾರಿ ಮಾಡಿದ್ದು, ಜಿಲ್ಲೆಯ 22 ಪ್ರಕರಣಗಳ ಸಂಬಂಧ ಇಲಾಖೆ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ಮಾಹಿತಿ ನೀಡಿದರು.

ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್, ಡಿವೈಪಿಸಿ ಗಂಗರಾಮಯ್ಯ, ಎವೈಪಿಒಗಳಾದ ಮೋಹನ್‌ಬಾಬು, ಸಿದ್ದೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಬಿ.ರಾಮಕೃಷ್ಣಪ್ಪ, ಉಮಾದೇವಿ, ಕೃಷ್ಣಮೂರ್ತಿ, ಕೆಂಪಯ್ಯ, ಚಂದ್ರಶೇಖರ್, ಬಾಲಾಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT