ಕಲಿಕಾಸಕ್ತಿ ವೃದ್ದಿಗೆ ಪಠ್ಯೇತರ ಚಟುವಟಿಕೆ ಪೂರಕ

7
ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ

ಕಲಿಕಾಸಕ್ತಿ ವೃದ್ದಿಗೆ ಪಠ್ಯೇತರ ಚಟುವಟಿಕೆ ಪೂರಕ

Published:
Updated:
Deccan Herald

ಕೋಲಾರ: ‘ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ಶಿಕ್ಷಣ ಇಲಾಖೆಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ‘ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಶಕ್ತಿ ಶಿಕ್ಷಕರಿಗೆ ಮಾತ್ರವಿದೆ. ಇಂತಹ ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸುವ ಮುಖ್ಯ ಜವಾಬ್ದಾರಿ ಹೊಂದಿದ್ದಾರೆ’ ಎಂದರು.

‘ಮಕ್ಕಳಲ್ಲಿ ಕಲಿಕಾಸಕ್ತಿ, ಚಿಂತನಾ ಶಕ್ತಿ ವೃದ್ದಿಸಲು ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ. ಪಠ್ಯದಷ್ಟೆ ಪ್ರಾಮುಖ್ಯತೆಯನ್ನು ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಒಳಗೊಂಡಿರುತ್ತವೆ’ ಎಂದು ಹೇಳಿದರು.

‘ಆಧುನಿಕತೆ ಬೆಳೆದಂತೆ ಮೊಬೈಲ್, ದೂರದರ್ಶನದ ದಾಳಿಯಿಂದ ಗ್ರಾಮೀಣ ಜನಪದ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸ ಶಾಲಾ ಮಕ್ಕಳಿಂದಲೇ ಆಗಬೇಕು. ಮಕ್ಕಳಲ್ಲಿ ಅಡಗಿರುವ ಕಲೆ ಹೊರ ಬರಲು ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳು ಸೋರುತ್ತಿದ್ದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿ ಮಾಡಬೇಕಾದ ಅಗತ್ಯವಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ತಿಳಿಸಿದರು.

‘ಜಿಲ್ಲೆಯಲ್ಲಿ368 ಸರ್ಕಾರಿ ಶಾಲೆಗಳು ದುರಸ್ತಿಯಾಗಬೇಕಾಗಿದೆ. ಇದಕ್ಕೆ ತಾಲ್ಲೂಕು ಪಂಚಾಯಿತಿಯಲ್ಲಿ ₨ 12 ಲಕ್ಷ ಅನುದಾನವಿದ್ದು, ಶಾಸಕರು ತಮ್ಮ ನಿಧಿಯಿಂದ ಹೆಚ್ಚಿನ ನೆರವು ಒದಗಿಸಬೇಕು’ ಎಂದು ಮನವಿ ಮಾಡಿದರು.

‘ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳನ್ನು ಮೀರಿ ಬೆಳೆಯುತ್ತಿವೆ. ಆದರೆ ಸೌಕ್ಯ ಕೊರತೆ ಕಾಡುತ್ತಿದ್ದು, ಮತ್ತಷ್ಟು ನೆರವು ಅಗತ್ಯವಿದೆ. ಪೋಷಕರಲ್ಲಿನ ಖಾಸಗಿ ಶಾಲೆಗಳ ವ್ಯಾಮೋಹ ಸರ್ಕಾರಿ ಶಾಲೆಗಳಿಗೆ ಕುತ್ತು ತಂದಿದೆ. ಈ ಮಕ್ಕಳಲ್ಲಿ ಕಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಖಾಸಗಿ ಶಾಲಾ ಮಕ್ಕಳಲ್ಲಿ ಕಾಣಲು ಸಾಧ್ಯವಿಲ್ಲ’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರತ್ನಯ್ಯ ಮಾತನಾಡಿ, ‘ಪ್ರತಿ ಮಗುವಿನಲ್ಲೂ ಅಡಗಿರುವ ವಿಶಿಷ್ಟ ಚೈತನ್ಯವನ್ನು ಹೊರಗೆ ತರುವ ಕೆಲಸ ಶಿಕ್ಷಕರು ಮಾಡಬೇಕು’ ಎಂದು ಹೇಳಿದರು.

‘ಮಕ್ಕಳ ಚಟುವಟಿಕೆಗಳಲ್ಲಿ ನೈತಿಕ ಮೌಲ್ಯಗಳು ಅಡಗಿರಬೇಕು. ಶಿಕ್ಷಕರು ಪರಿಣಾಮಕಾರಿಯಾಗಿ ಪಠ್ಯೇತರ ಚಟುವಟಿಕೆ ನಡೆಸುವ ಮೂಲಕ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಒತ್ತು ನೀಡಿ’ ಎಂದು ಸಲಹೆ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ನೀಡಿ, ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ರಾಮಕೃಷ್ಣಪ್ಪ ಗೋಪಾಲ್, ಶ್ರೀನಿವಾಸಮೂರ್ತಿ, ಸಿದ್ದೇಶ್, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಶಿಕ್ಷಕರಾದ ಜಿ.ಶ್ರೀನಿವಾಸ್, ಆರ್.ಶ್ರೀಧರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !