ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ಕೆರೆಗಳು: ಕೊಡಮೆಗೆ ಬೇಡಿಕೆ

ಬೇಡಿಕೆ ಹೆಚ್ಚಾದ ಕಾರಣ ಹಲವೆಡೆ ಕೊಡಮೆ ವ್ಯಾಪಾರ ಜೋರು
Last Updated 31 ಆಗಸ್ಟ್ 2020, 8:42 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಉತ್ತರ ಭಾಗದ ಬಹುತೇಕ ಕೆರೆಗಳು ತುಂಬಿವೆ. ನಾಟಿ ಮೀನಿಗೆ ಹೆಸರಾದ ಆಳವಾದ ಪುಟ್ಟ ಕೆರೆಗಳು ಮೀನು ಪ್ರಿಯರ ಬಾಯಲ್ಲಿ ನೀರೂರುವಂತೆ ಮಾಡಿವೆ. ಹಾಗಾಗಿ ಈ ಭಾಗದಲ್ಲಿ ಮೀನು ಹಿಡಿಯುವ ಸಾಂಪ್ರದಾಯಿಕ ಸಾಧನ ಕೊಡಮೆಗೆ ಹೆಚ್ಚಿನ ಬೇಡಿಕೆ ಬಂದಿದೆ.

ಬೇಡಿಕೆ ಹೆಚ್ಚಾದ ಕಾರಣ, ಕೆಲವರು ತೆಂಗಿನ ಗರಿಯ ಕಡ್ಡಿಗಳನ್ನು ಸಂಗ್ರಹಿಸಿ, ಕೊಡಮೆ ಮಾಡಿ ಸಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾರುತ್ತಿದ್ದಾರೆ. ಮೀನು ಪ್ರಿಯರು ಕೊಡಮೆಗಳನ್ನು ಖರೀದಿಸಿ ಇಡುತ್ತಿದ್ದಾರೆ. ಸಾಮಾನ್ಯವಾಗಿ ಈ ಕೊಡಮೆಗಳನ್ನು ನೀರು ಹರಿಯುವ ವಿರುದ್ಧ ದಿಕ್ಕಿನಲ್ಲಿ ಅಳವಡಿಸಲಾಗುತ್ತದೆ. ಕಾರಣ ಮೀನು ಹರಿಯುವ ನೀರಿಗೆ ವಿರುದ್ಧವಾಗಿ ಸಾಗುತ್ತದೆ. ಹಾಗೆ ಬಂದ ಮೀನು ಕೊಡಮೆಯಲ್ಲಿ ಸಿಕ್ಕಿ ಬೀಳುತ್ತದೆ. ಒಮ್ಮೆ ಕೊಡಮೆ ಪ್ರವೇಶಿಸಿದ ಮೇಲೆ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ.

ಹಿಂದೆ ಕೆರೆಗಳಲ್ಲಿ ನೀರು ಕಡಿಮೆಯಾದರೆ ಗ್ರಾಮೀಣ ಪ್ರದೇಶದ ಜನ ತಮ್ಮ ಗ್ರಾಮಕ್ಕೆ ಮೀಸಲಾದ ಕೆರೆಯಲ್ಲಿ ಒಟ್ಟಾಗಿ ಮೀನು ಹಿಡಿದು ಹಂಚಿಕೊಳ್ಳುತ್ತಿದ್ದರು. ಮೀನು ಹಿಡಿಯುವುದು ಸಂಭ್ರಮವಾಗಿತ್ತು. ಹಿಡಿದ ಮೀನನ್ನು ತಾವು ಮಾತ್ರವೇ ತಿನ್ನದೆ ಸ್ನೇಹಿತರು ಹಾಗೂ ನೆಂಟರಿಗೆ ಕಳುಹಿಸುವುದೂ ಇತ್ತು. ಸರ್ಕಾರ ಮೀನು ಸಾಕಾಣಿಕೆ ಹೆಸರಲ್ಲಿ ಕೆರೆ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದ ಮೇಲೆ ಗ್ರಾಮಸ್ಥರು ಮೀನಿನ ಮೇಲೆ ಹಕ್ಕು ಕಳೆದುಕೊಂಡರು. ಗುತ್ತಿಗೆ ಪಡೆದವರು ದೈತ್ಯ ಮೀನು ಸಾಕಲು ಪ್ರಾರಂಭಿಸಿದ ಮೇಲೆ ನಾಟಿ ಮೀನು ಸಾಕಿದ ಮೀನಿಗೆ ಆಹಾರವಾಯಿತು.

ರುಚಿಗೆ ಹೆಸರಾದ ಕೊಡದನ, ಗಿರ್ಲು, ಉಣಸೆ, ಚೇಳು, ಮಾರವ ಮುಂತಾದ ಹೆಸರಿನ ಮೀನು ಈಗ ಅಪರೂಪವಾಗಿದೆ. ಗುತ್ತಿಗೆಯಿಂದ ಹೊರಗುಳಿದ ತೀರಾ ಚಿಕ್ಕ ಕೆರೆಗಳು ಹಾಗೂ ಕುಂಟೆಗಳಲ್ಲಿ ಮಾತ್ರ ನಾಟಿ ಮೀನು ಉಳಿದುಕೊಂಡಿದೆ. ಆದರೆ, ಲಭ್ಯತೆ ಪ್ರಮಾಣ ತೀರಾ ಕಡಿಮೆಯಾಗಿದೆ. ಪರಿಣಾಮ ನಾಟಿ ಮೀನಿನ ಬೆಲೆ ಗಗನಕ್ಕೇರಿದೆ. ಆದರೂ ಬೇಡಿಕೆ ಮಾತ್ರ ಕುಸಿದಿಲ್ಲ. ನಾಟಿ ಮೀನು ಕಾಣಿಸಿದರೆ ಸಾಕು
ಮೀನು ಪ್ರಿಯರು ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ.

ತಾಲ್ಲೂಕಿನ ಗೌನಿಪಲ್ಲಿ ಮಾರುಕಟ್ಟೆ ನಾಟಿ ಮೀನಿಗೆ ಪ್ರಸಿದ್ಧಿ. ಕಾರಣ ಗುಡ್ಡಗಾಡಿನ ಕೆರೆಗಳು ತೀರಾ ಚಿಕ್ಕದಾಗಿದ್ದು, ಆಳ ಹೊಂದಿವೆ. ಸ್ವಲ್ಪ ಮಳೆಯಾದರೂ ಸಾಕು ಕೆರೆಗೆ ನೀರು ಹರಿದು ಬರುತ್ತದೆ. ಹಾಗಾಗಿ ಆ ಕೆರೆಗಳಲ್ಲಿ ನಾಟಿ ಮೀನು ಜೀವಂತವಾಗಿದೆ. ಅಂಥ ಮೀನನ್ನು ಮೀನುಗಾರರು ತಮ್ಮದೇ ಆದ ವಿಧಾನದಲ್ಲಿ ಹಿಡಿದು, ತಮಗೆ ಬೇಕಾದಷ್ಟನ್ನು ಉಳಿಸಿಕೊಂಡು ಉಳಿದ ಮೀನನ್ನು ಮಾರುಕಟ್ಟೆಗೆ ತಂದು ಮಾರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT