ಭಾನುವಾರ, ಡಿಸೆಂಬರ್ 5, 2021
27 °C
ಮಿಶ್ರ ಬೇಸಾಯ ಪದ್ಧತಿಯಲ್ಲಿ ರೈತನ ಕೈಹಿಡಿದ ಗುಲಾಬಿ, ಕನಕಾಂಬರ

ಮಾಲೂರು: ಹೂ ಬೆಳೆ - ನಿತ್ಯವೂ ಲಾಭದ ಹಾದಿ

ವಿ.ರಾಜಗೋಪಾಲ್ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ಬಿಸಿಲು, ಮಳೆ ಯಾವುದೇ ಇದ್ದರೂ, ವರ್ಷಾ ಪೂರ್ತಿ ನಿತ್ಯವೂ ಹೂವಿನ ಮಾರಾಟದಿಂದ ಲಾಭದ ದಾರಿ ಕಂಡುಕೊಂಡಿದ್ದಾರೆ ತಾಲ್ಲೂಕಿನ ಕೋಡೂರು ಗ್ರಾಮದ ರೈತ ಆಂಜಿನಪ್ಪ.

ದೊಡ್ಡ ಶಿವಾರ ಗ್ರಾ.ಪಂ ವ್ಯಾಪ್ತಿಯ ಕೋಡೂರು ಗ್ರಾಮದ ಆಂಜಿನಪ್ಪ ಅವರು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಗುಲಾಬಿ, ಕನಕಾಂಬರ ಬೆಳೆಯುತ್ತಿದ್ದಾರೆ. ಈ ಹೂವುಗಳಿಗೆ ನಿತ್ಯವೂ ಬೇಡಿಕೆ ಹಾಗೂ ಬೆಲೆ ಇದೆ. ಬರ, ಕಾರ್ಮಿಕರ ಸಮಸ್ಯೆ ನಡುವೆಯೂ ಅಚ್ಚುಕಟ್ಟಾಗಿ ವ್ಯವಸಾಯದಿಂದ ಸಂತೃಪ್ತಿ ಕಂಡುಕೊಂಡಿದ್ದಾರೆ.

ಇತ್ತೀಚೆಗೆ ಸುರಿದ ಮಳೆಯ ಸಂದರ್ಭವನ್ನು ‌ಹೊರತುಪಡಿಸಿದರೆ, ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಹಾಗೂ ಬರಡಾದ ತಾಲ್ಲೂಕು ಎಂದು ಮಾಲೂರು ಹೆಸರು ಪಡೆದಿದೆ. ಇಂತಹ ಪ್ರದೇಶದಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ಲಭ್ಯ ಇರುವ ಅಲ್ಪ ನೀರನ್ನು ಉಪಯೋಗಿಸಿಕೊಂಡು ಹಲವಾರು ಬೆಳೆಗಳನ್ನು ಬೆಳೆ ಯುತ್ತಿದ್ದಾರೆ ಆಂಜಿನಪ್ಪ.

‘ಕನಕಾಂಬರ ಹೂವು ಬೆಳೆಯಲು ಆರಂಭಿಸಿದ್ದು 6 ವರ್ಷಗಳ ಹಿಂದೆ. ತಾಲ್ಲೂಕಿನ ಲಕ್ಕೂರು ಗ್ರಾಮದ ರೈತರಿಂದ ಸ್ಥಳೀಯ ತಳಿ ಕನಕಾಂಬರ ಸಸಿಗಳನ್ನು ತಂದು ನಾಟಿ ಮಾಡಿದೆ. ಹೂವಿನ ಕೃಷಿ ಲಾಭದಾಯಕವಾಗಿ ಕಂಡಿದ್ದರಿಂದ ಅದರ ಜೊತೆಯಲ್ಲಿ ಗುಲಾಬಿ ಸಸಿಗಳನ್ನು ನಾಟಿ ಮಾಡಿದೆ. ಗಿಡದಿಂದ ಗಿಡಕ್ಕೆ 2 ಅಡಿ, ಸಾಲಿನಿಂದ ಸಾಲಿಗೆ 4 ಅಡಿ ಅಂತರ ಬಿಡಲಾಗಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಇರುವ ಕೊಳವೆ ಬಾವಿಯಿಂದ ಗಿಡಗಳ ನಡುವೆ 4 ದಿನಕ್ಕೊಮ್ಮೆ ನೀರು ಹರಿಸುತ್ತೇನೆ’ ಎಂದು ಆಂಜಿನಪ್ಪ ವಿವರಿಸಿದರು.

‘ಗುಲಾಬಿ ಗಿಡ 6ರಿಂದ 7 ವರ್ಷ ಹೂವು ನೀಡುತ್ತದೆ. 1 ಕೆ.ಜಿ ಕನಕಾಂಬರ ಹೂವಿಗೆ ₹180ರಿಂದ ₹200 ಬೆಲೆ ಸಿಗುತ್ತದೆ. ಹಬ್ಬ ಹರಿ ದಿನಗಳಲ್ಲಿ ₹800ರಿಂದ ₹1 ಸಾವಿರ ಬೆಲೆ ಸಿಗುತ್ತದೆ. ಗುಲಾಬಿ 1 ಕೆಜಿ ಹೂವಿಗೆ ₹80ರಿಂದ ₹100 ಬೆಲೆ ದೊರೆಯುತ್ತದೆ. ಪಟ್ಟಣ ಸೇರಿದಂತೆ ಬೆಂಗಳೂರು ಮತ್ತು ಹೊಸೂರು ಹೂವಿನ ಮಾರುಕಟ್ಟೆಗಳಿಗೂ ಬಸ್‌ನಲ್ಲಿ ಹೂವು ಕಳಿಸುತ್ತೇವೆ. ಬೆಳಗ್ಗೆ 8ರಿಂದ 12ರವರೆಗೆ ಕೊಯ್ದ ಹೂವು ಹಾಗೂ ಬಳಿಕ ಕೊಯ್ದ ಹೂವನ್ನು ಪ್ರತ್ಯೇಕವಾಗಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ’ ಎಂದರು.

‘ಹೂವಿನ ತೆನೆ ತಿನ್ನುವ ಹುಳುಗಳ ಬಾಧೆ ನಿಯಂತ್ರಿಸಲು 15 ದಿನಕ್ಕೊಮ್ಮೆ ಕೀಟನಾಶಕ ಸಿಂಪಡಣೆ ಮಾಡಲಾಗುತ್ತದೆ. ಗಿಡ ಹಳೆಯದಾದರೆ ಹೂವಿನ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಮೂರು ವರ್ಷಕ್ಕೊಮ್ಮೆ ಕನಕಾಂಬರ ಗಿಡಗಳನ್ನು ಬದಲಿಸಲಾಗುತ್ತದೆ’ ಎಂದರು.

ನಿರಂತರ ಆದಾಯ

ಪ್ರತಿನಿತ್ಯ ಸರಾಸರಿ 8ರಿಂದ 10 ಕೆ.ಜಿ ಕನಕಾಂಬರ ಹೂವು ಸಿಗುತ್ತಿದೆ. ಗುಲಾಬಿ ಮತ್ತು ಕನಕಾಂಬರ ಹೂವುಗಳನ್ನು ಖರೀದಿದಾರರು ತೋಟಕ್ಕೆ ಬಂದು ಹೂವನ್ನು ಒಯ್ಯುತ್ತಾರೆ. ಹೂವು ಕೊಯ್ಯುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ನೀಡಲಾಗಿದೆ. ಅತಿಯಾದ ಮಳೆಯಾದಾಗ ಮಾತ್ರ ಹೂವಿನ ಇಳುವರಿಯಲ್ಲಿ ಹೆಚ್ಚು ಕಡಿಮೆ ಆಗುತ್ತದೆ. ನಿತ್ಯವೂ ಹೂವು ಕೊಯ್ಲಿಗೆ ಬರುವುದರಿಂದ ನಿರಂತರ ಆದಾಯ ಕೈಸೇರುತ್ತಿದೆ.

- ರೈತ ಆಂಜಿನಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.