ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಆಟಾಟೋಪ ಮೇರೆ ಮೀರಿದೆ

ಶ್ರೀನಿವಾಸಗೌಡರ ವಿರುದ್ಧ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಗುಡುಗು
Last Updated 9 ಅಕ್ಟೋಬರ್ 2020, 16:22 IST
ಅಕ್ಷರ ಗಾತ್ರ

ಕೋಲಾರ: ‘ಜೆಡಿಎಸ್ ಪಕ್ಷ ಮತ್ತು ಶಾಸಕ ಕೆ.ಶ್ರೀನಿವಾಸಗೌಡರ ಬಗ್ಗೆ ಮಾತನಾಡಲು ಅಸಹ್ಯವಾಗುತ್ತದೆ. ನಾನು ಸುಮ್ಮನಿದ್ದರೆ ತಪ್ಪಾಗುತ್ತದೆ ಎಂಬ ಕಾರಣಕ್ಕೆ ಮಾತನಾಡಲೇಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಗುಡುಗಿದರು.

ಇಲ್ಲಿ ಶುಕ್ರವಾರ ನಡೆದ ಅಂಬೇಡ್ಕರ್ ಸೇವಾ ಸಮಿತಿಯ ವಾರ್ಷಿಕೋತ್ಸವ ಹಾಗೂ ದೇವರಾಜ ಅರಸು ಜಯಂತಿಯಲ್ಲಿ ಮಾತನಾಡಿ, ‘ಕ್ಷೇತ್ರದಲ್ಲಿ ಜೆಡಿಎಸ್‌ ಮುಖಂಡರು ಮತ್ತು ಶ್ರೀನಿವಾಸಗೌಡರ ಆಟಾಟೋಪ ಮೇರೆ ಮೀರಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು’ ಎಂದು ಹೇಳಿದರು.

‘ವಿಧಾನ ಪರಿಷತ್ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರೂ ಶ್ರೀನಿವಾಸಗೌಡರು ತಾಲ್ಲೂಕಿನ ವೇಮಗಲ್‌ ಗ್ರಾಮದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ನಡೆ ಕಾನೂನುಬಾಹಿರ. ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಸಂಬಂಧ ಅಧಿಕಾರಿಗಳು ಶಾಸಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ವಿರುದ್ಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ದೂರು ಕೊಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರು ಮಾಡಿಸಿದ್ದ ₹ 5 ಕೋಟಿ ಅನುದಾನದ ಕಾಮಗಾರಿಗೆ ಶ್ರೀನಿವಾಸಗೌಡರು ಗುದ್ದಲಿ ಪೂಜೆ ಮಾಡಿದ್ದಾರೆ. ಗ್ರಾಮ ವಿಕಾಸ ಯೋಜನೆಯಡಿ ಮಾಡಬೇಕಾದ ಕಾಮಗಾರಿ ಬಿಟ್ಟು ಬೇರೆ ಏನೇನೋ ಮಾಡುತ್ತಿದ್ದಾರೆ. ಸ್ಥಳೀಯರಾದ ಜಿ.ಪಂ ಸಿಇಒ ರವಿಕುಮಾರ್‌ ಶಾಸಕರ ಕಡೆಯವರು ಎಂದು ಗೊತ್ತಿದೆ. ಹೀಗಾಗಿ ಅವರು ಶಾಸಕರ ಎಲ್ಲಾ ಕಡತಗಳಿಗೂ ಸಹಿ ಹಾಕುತ್ತಿದ್ದಾರೆ. ಸಿಇಒ ಅವರು ಕಾನೂನುಬದ್ಧವಾಗಿ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಮುತ್ತಿಗೆ ಹಾಕುತ್ತೇವೆ: ‘ಹುಲ್ಲಂಕಲ್ಲಿನ ಕೊಲೆ ಪ್ರಕರಣದ ಆರೋಪಿಗಳ ರಕ್ಷಣೆಗೆ ನಿಂತಿರುವ ಶಾಸಕರು ಪೊಲೀಸ್‌ ಠಾಣೆಗೆ ಕರೆ ಮಾಡಿ ಮಾತನಾಡಿದ್ದಾರೆ. ಠಾಣೆ ಎಸ್‌ಐ ಸಹ ಶಾಸಕರ ಪರವಾಗಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಈ ಪ್ರಕರಣದ ತನಿಖೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಜನರ ಜತೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಶ್ರೀನಿವಾಸಗೌಡರು ಸಾಕಷ್ಟು ಕಡೆ ಜಮೀನು ಒತ್ತುವರಿ ಮಾಡಿರುವುದಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳು ನನ್ನ ಬಳಿಯಿವೆ. ಅವರಿಗೆ ಎರಡೂವರೆ ವರ್ಷ ಅಧಿಕಾರಾವಧಿ ಇದ್ದು, ಮಜಾ ಮಾಡಲಿ’ ಎಂದು ಕುಟುಕಿದರು.

ಕಾಂಗ್ರೆಸ್‌ ನೆಲಕಚ್ಚಿದೆ: ‘ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಿದೆ. ಕ್ಷೇತ್ರದಲ್ಲಿ ನನ್ನ ಮತ್ತು ಜೆಡಿಎಸ್ ಪಕ್ಷದ ನಡುವೆ ಮಾತ್ರ ಸ್ಪರ್ಧೆ. ಚುನಾವಣೆಗೆ ಇನ್ನೂ ಎರಡೂವರೆ ವರ್ಷವಿದೆ. ನಾನು ಸೋತಿದ್ದರೂ ಜಿಲ್ಲಾ ಪಂಚಾಯಿತಿ, ನಗರಸಭೆ ಚುನಾವಣೆಯಲ್ಲಿ ನನ್ನ ಬೆಂಬಲಿಗ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದೇನೆ. ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ನಾವೇ ನಿರ್ಣಾಯಕರು’ ಎಂದರು.

‘ದೇವರಾಜ ಅರಸು ಅವರಿಗೆ ಎಲ್ಲಾ ವರ್ಗದ ಜನರ ಬಗ್ಗೆ ಕಾಳಜಿಯಿತ್ತು. ಮನೆ, ಭೂಮಿ ಇಲ್ಲದ ಹಲವರಿಗೆ ಸೌಲಭ್ಯ ಒದಗಿಸಿಕೊಟ್ಟ ಮಹನೀಯ ಅವರು. ಅವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ. ಸಿದ್ದರಾಮಯ್ಯ ಅವರು ಅರಸುರಂತೆಯೇ ಆಡಳಿತ ನಡೆಸಿದರು’ ಎಂದು ಬಣ್ಣಿಸಿದರು.

ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಂದೇಶ್, ಸದಸ್ಯ ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT