ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಮಿಶ್ರ ಬೆಳೆಯಲ್ಲಿ ನೂತನ ಪ್ರಯೋಗ

ಉತ್ತಮ ಲಾಭ ನಿರೀಕ್ಷೆಯಲ್ಲಿ ರೈತ ಎಂ.ಶ್ರೀನಿವಾಸ್‌
Published 3 ಏಪ್ರಿಲ್ 2024, 6:04 IST
Last Updated 3 ಏಪ್ರಿಲ್ 2024, 6:04 IST
ಅಕ್ಷರ ಗಾತ್ರ

ಮುಳಬಾಗಿಲು: ವೃತ್ತಿಯಲ್ಲಿ ಸರ್ಕಾರಿ ನೌಕರರಾದರೂ ಪ್ರವೃತ್ತಿಯಾಗಿ ಕೃಷಿಯನ್ನು ಮಾಡುತ್ತಾ, ಸೀಬೆ ಹಾಗೂ ಮಹಾಗನಿಯನ್ನು ಬೆಳೆದು ಯಶಸ್ವಿ ರೈತರಾಗಿದ್ದಾರೆ ಎಂ.ಶ್ರೀನಿವಾಸ್‌.

ತಾಲ್ಲೂಕಿನ ಅಂಬ್ಲಿಕಲ್‌ನ ಎಂ.ಶ್ರೀನಿವಾಸ್ ಅವರು ಅಂಬ್ಲಿಕಲ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗಣಕ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವಾಗಲೂ ಕೆಲಸಕ್ಕೆ ಹೋಗುವುದರಿಂದ ಟೊಮೊಟೊ ಅಥವಾ ಇನ್ನಿತರೆ ತರಕಾರಿ, ಹೂ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಅವರಿವರ ಮಾರ್ಗದರ್ಶನದಂತೆ ತನ್ನ 1.30 ಎಕರೆ ಜಮೀನಿನಲ್ಲಿ ವಾರ್ಷಿಕ ಹಾಗೂ ತೋಟದ ಬೆಳೆ ಬೆಳೆಯಲು ಮುಂದಾಗಿ ಯಶಸ್ವಿ ರೈತರಾಗಿದ್ದಾರೆ.

ತರಕಾರಿ ಬೆಳೆ ಅಥವಾ ಇನ್ನಿತರೆ ಬೆಳೆ ಬೆಳೆದರೆ ಸದಾ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆದರೆ ನನಗೆ ನೌಕರಿಗೆ ಹೋಗಬೇಕಾದ ಕಾರಣ ಹಗಲಿನಲ್ಲಿ ಸಮಯ ಇರುತ್ತಿರಲಿಲ್ಲ. ಇನ್ನೂ ಸ್ವಲ್ಪ ಜಮೀನನ್ನು ಖಾಲಿ ಬಿಟ್ಟರೆ ಲಾಭ ಬರುವುದಿಲ್ಲ ಎಂದು ಯೋಚಿಸುವಾಗ ತನ್ನ ಮಾವನ ಮಾರ್ಗದರ್ಶನದಲ್ಲಿ ಮಹಾಗನಿ ಸಸಿ ನಾಟಿ ಮಾಡಿದೆ. ಜತೆಗೆ ಮಿಶ್ರ ಬೆಳೆಯಾಗಿ ಸೀಬೆ ಗಿಡಗಳನ್ನು ನಾಟಿ ಮಾಡಿದೆ. ಸೀಬೆ ಹಣ್ಣಿನಿಂದ ವಾರ್ಷಿಕ ಲಾಭ ಪಡೆದರೆ. ಮಹಾಗನಿಯಿಂದ ದೀರ್ಘಕಾಲದ ಲಾಭ ಪಡೆಯಬಹುದು ಎಂಬುದು ಶ್ರೀನಿವಾಸ್‌ ಅವರ ಮಾತಾಗಿದೆ.

ತಮ್ಮ ಜಮೀನಿನಲ್ಲಿ ತೈವಾನ್ ಪಿಂಕ್ ಜಾತಿಯ 1000 ಸೀಬೆ ಗಿಡಗಳನ್ನು ನಾಟಿ ಮಾಡಿ ನಂತರ ಸಾಲು ಪದ್ಧತಿಯಲ್ಲಿ ಸೀಬೆ ಗಿಡಗಳ ಮಧ್ಯೆ 800 ಮಹಾಗನಿಯನ್ನು ನಾಟಿ ಮಾಡಲಾಗಿದೆ. ಎರಡೂ ಬೆಳೆಗಳು ಸಮೃದ್ಧಿಯಾಗಿ ಬೆಳೆದಿವೆ. ತಾಲ್ಲೂಕಿನಲ್ಲಿ ಮಹಾಗನಿ ನಾಟಿ ಮಾಡಿದ ರೈತ ಎಂಬ ಖ್ಯಾತಿ ಪಡೆದಿದ್ದಾರೆ.

ಲಕ್ಷಾಂತರ ಲಾಭ ನೀಡುವ ಸೀಬೆ: ಈಗಾಗಲೇ ಎರಡು ಬಾರಿ ಸೀಬೆ ಫಸಲು ಬಂದಿದೆ. ಮೊದಲ ಫಸಲಿನಲ್ಲೇ ಎರಡು ಲಕ್ಷ ಲಾಭ ಬಂದಿದೆ. ಎರಡನೇ ಫಸಲಿನಲ್ಲಿ ₹4.5 ಲಕ್ಷ ಲಾಭ ಗಳಿಸಿದ್ದಾರೆ. ಎರಡೇ ಫಸಲಿನಲ್ಲಿ ಹಾಕಿದ ಬಂಡವಾಳದ ಜತೆಗೆ ರೈತ ಲಾಭ ಗಳಿಸಿದ್ದಾನೆ.

ಸೀಬೆಯ ಪ್ರತಿ ರೆಂಬೆ ಕೊಂಬೆಗಳಲ್ಲಿ ಹೂ, ಕಾಯಿ ಹಾಗೂ ಹಣ್ಣುಗಳು ತುಂಬಿಕೊಂಡಿದ್ದು, ಹಣ್ಣು ಕಟಾವಿಗೆ ಬಂದು ನಿಂತಿವೆ. ವ್ಯಾಪಾರಿಗಳು ತೋಟದ ಬಳಿಯೇ ಬಂದು ವ್ಯಾಪಾರ ಮಾಡುತ್ತಿದ್ದಾರೆ.

ಮಹಾಗನಿ ರೋಗಕ್ಕೆ ಸಗಣಿಯೇ ಔಷಧಿ: ಮಹಾಗನಿಗೆ ಹುಳು ಬಾದೆ ಹಾಗೂ ತೊಗಟೆ ಹಾಗೂ ಕಾಂಡಕ್ಕೆ ಯಾವುದೇ ರೋಗ ಬಂದರೂ ಸಗಣಿ ಹಚ್ಚಿದರೆ ರೋಗ ವಾಸಿಯಾಗುತ್ತದೆ. ಇದರಿಂದ ಮಹಾಗನಿ ಬೆಳೆಸುವುದು ಸುಲಬ ಎಂಬುವುದು ಇವರ ಮಾತಾಗಿದೆ.

ಎರಡು ಕೋಟಿ ಲಾಭದ ನಿರೀಕ್ಷೆ: ಮಹಾಗನಿ ದೀರ್ಘಕಾಲದ ಬೆಳೆಯಾಗಿದ್ದು, ಸುಮಾರು 12 ರಿಂದ 15 ವರ್ಷ ಮರ ಬಲಿಯಲು ಸಮಯ ತೆಗೆದುಕೊಳ್ಳುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಒಂದು ಅಡಿ ಮಹಾಗನಿ ₹1,000ಕ್ಕೆ 800 ಗಿಡಗಳು ಮರಗಳಾಗಿ ಬಲಿತರೆ 15 ವರ್ಷದ ನಂತರ ಸುಮಾರು ₹2 ಕೋಟಿ ಲಾಭ ಬರುವ ನಿರೀಕ್ಷೆ ಇದೆ ಎಂದು ರೈತ ಎಂ.ಶ್ರೀನಿವಾಸ್ ಹೇಳುತ್ತಾರೆ.

ಉತ್ತಮ ಫಸಲು ಬಂದಿರುವ ಸೀಬೆ
ಉತ್ತಮ ಫಸಲು ಬಂದಿರುವ ಸೀಬೆ
ಶ್ರೀನಿವಾಸ್
ಶ್ರೀನಿವಾಸ್

ರೈತರು ವಾಣಿಜ್ಯ ಬೆಳೆಗಳಿಗೆ ಜೋತು ಬೀಳದೆ ಹೊಸ ಹೊಸ ಪ್ರಯೋಗಳಿಗೆ ಮುಂದಾದರೆ ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭ ಪಡೆಯಬಹುದು. 

–ಎಂ.ಶ್ರೀನಿವಾಸ್ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT