ಸೋಮವಾರ, ಏಪ್ರಿಲ್ 12, 2021
23 °C

ಕುಂಟೆ ಪುನಶ್ಚೇತನಕ್ಕೆ ₹ 7.50 ಲಕ್ಷ ನೆರವು: ಶಾಸಕ ಕೆ.ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಜನಪರವಾಗಿ ಕೆಲಸ ಮಾಡುತ್ತಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ತಾಲ್ಲೂಕಿನ ಮಾರ್ಜೇನಹಳ್ಳಿ ಗ್ರಾಮದಲ್ಲಿ ಕೈಗೆತ್ತಿಕೊಂಡಿರುವ ಪುರಾತನ ಕುಂಟೆಯ ಹೂಳೆತ್ತುವ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ‘ಸಂಸ್ಥೆಯು ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಡಿ ಜಿಲ್ಲೆಯ ಹಲವು ಕೆರೆಗಳನ್ನು ಪುನಶ್ಚೇತನಗೊಳಿಸಿದೆ. ಮಾರ್ಜೇನಹಳ್ಳಿ ಕುಂಟೆಯ ಹೂಳೆತ್ತಲು ಸಂಸ್ಥೆಯು ₹ 7.50 ಲಕ್ಷ ನೀಡಿದೆ’ ಎಂದರು.

‘ಗ್ರಾಮದ ಜನರನ್ನು ಒಗ್ಗೂಡಿಸಿ ಕೆರೆ ಸಮಿತಿ ರಚನೆ ಮಾಡಿ ಮಂಜೂರಾದ ಹಣವನ್ನು ಕೆರೆ ಕಾಮಗಾರಿಗೆ ಸಮರ್ಪಕವಾಗಿ ಬಳಸುತ್ತಿರುವುದು ಉತ್ತಮ ಬೆಳವಣಿಗೆ. ಕುಂಟೆ ಪುನಶ್ಚೇತನದ ನಂತರ ಗ್ರಾಮಸ್ಥರು ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ತಾಲ್ಲೂಕಿಗೆ ಒಂದರಂತೆ ಕೆರೆ ಹೂಳೆತ್ತುವ ಕಾಮಗಾರಿ ನಡೆಸಲಾಗುತ್ತಿದೆ. ಮಾರ್ಜೇನಹಳ್ಳಿ ಗ್ರಾಮದ ಕುಂಟೆಯನ್ನು ಮಾದರಿಯಾಗಿಸುವ ಸಂಕಲ್ಪ ಮಾಡಿದ್ದೇವೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂಜಿನಿಯರ್‌ ಅರುಣ್ ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಸಂಸ್ಥೆ ವತಿಯಿಂದ ಪುನಶ್ಚೇತನಗೊಳಿಸುತ್ತಿರುವ 243ನೇ ಕುಂಟೆ ಇದಾಗಿದೆ. ನೀರಿನ ಸಮಸ್ಯೆ ಅರಿತು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದೇವೆ’ ಎಂದು ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಎಸ್‌.ಚಂದ್ರಶೇಖರ್ ವಿವರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಹೇಮಾವತಿ, ಗಾಯಿತ್ರಿ, ಕುಂಟೆ ಸಮಿತಿ ಅಧ್ಯಕ್ಷ ರಾಮಚಂದ್ರಗೌಡ, ತಾಲ್ಲೂಕು ಕೃಷಿ ಮೇಲ್ವಿಚಾರಕ ವಿಜಯ್‌ಕುಮಾತ್‌, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಗೌರಮ್ಮ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು