ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಸುತನ ಅದ್ಧೂರಿ ಮೆರವಣಿಗೆ

ಮೂರ್ತಿಗಳ ಸಾಮೂಹಿಕ ವಿಸರ್ಜನೆ: ಪಟಾಕಿ ಸಿಡಿಸಿ ಸಂಭ್ರಮ
Last Updated 4 ಸೆಪ್ಟೆಂಬರ್ 2019, 15:37 IST
ಅಕ್ಷರ ಗಾತ್ರ

ಕೋಲಾರ: ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆ ಹಾಗೂ ವಿಸರ್ಜನೆ ಬುಧವಾರ ಅದ್ಧೂರಿಯಾಗಿ ನಡೆಯಿತು.

ಬೆಳಿಗ್ಗೆ ಗಾಂಧಿವನದಿಂದ ಆರಂಭವಾದ ಗಣೇಶ ಮೂರ್ತಿಗಳ ಮೆರವಣಿಗೆಯು ರಾತ್ರಿ 9ರವರೆಗೆ ನಡೆಯಿತು. ಗಣೇಶ ಮೂರ್ತಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಕೂರಿಸಿ ಪ್ರಮುಖ ರಸ್ತೆ ಮತ್ತು ಬಡಾವಣೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಮಾವಿನ ತೋರಣ ಕಟ್ಟಿ, ರಂಗೋಲಿ ಹಾಕಲಾಗಿತ್ತು.

ಕೀಲು ಕುದುರೆ, ಹುಲಿ ನೃತ್ಯ, ಗಾರುಡಿ ಗೊಂಬೆ ಕುಣಿತ ಮತ್ತು ತಮಟೆ ವಾದ್ಯವು ಮೆರವಣಿಗೆಗೆ ಮೆರಗು ನೀಡಿತು. ಯುವಕರು ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ, ಶಿಳ್ಳೆ ಹಾಕುತ್ತಾ ಕುಣಿದು ಕುಪ್ಪಳಿಸಿದರು. ಪರಸ್ಪರ ಮುಖಕ್ಕೆ ಬಣ್ಣ ಹಚ್ಚಿ ಸಂಭ್ರಮಪಟ್ಟರು. ಮೆರವಣಿಗೆಗೆ ಚಾಲನೆ ನೀಡಿದ ಸಂಸದ ಎಸ್‌.ಮುನಿಸ್ವಾಮಿ ಅವರನ್ನು ಯುವಕರು ಹೆಗಲ ಮೇಲೆ ಹೊತ್ತು ಜೈಕಾರ ಹಾಕಿದರು.

ಮೆರವಣಿಗೆಗೆ ಜನಸಾಗರವೇ ಹರಿದು ಬಂದಿತು. ಮೆರವಣಿಗೆ ವೈಭವ ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಸಾಲುಗಟ್ಟಿ ನಿಂತಿದ್ದರು. ಎಂ.ಜಿ ರಸ್ತೆ, ಅಮ್ಮವಾರಿಪೇಟೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತ, ಎಂ.ಬಿ ರಸ್ತೆ, ಶಾರದಾ ಚಿತ್ರಮಂದಿರ ರಸ್ತೆ, ಬ್ರಾಹ್ಮಣರ ಬೀದಿ, ಇಟಿಸಿಎಂ ವೃತ್ತದಲ್ಲಿ ಮೆರವಣಿಗೆ ಸಾಗಿತು.

ಮೆರವಣಿಗೆ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹಲವೆಡೆ ಬ್ಯಾರಿಕೇಡ್‌ ಹಾಕಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಪೊಲೀಸ್‌ ಬಂದೋಬಸ್ತ್‌: ಮುನ್ನೆಚ್ಚರಿಕೆ ಕ್ರಮವಾಗಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು. ನಗರಸಭೆ ವತಿಯಿಂದ ಕೋಲಾರಮ್ಮ ಕೆರೆ ಅಂಗಳದಲ್ಲಿ ಗಣೇಶ ವಿಸರ್ಜನೆಗಾಗಿ ನಿರ್ಮಿಸಿರುವ ಪುಷ್ಕರಣಿಯಲ್ಲಿ ಭಕ್ತರ ಹರ್ಷೋದ್ಗಾರದ ನಡುವೆ ಮೂರ್ತಿಗಳನ್ನು ರಾತ್ರಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು.

ಬೃಹತ್‌ ಗಾತ್ರದ ಮೂರ್ತಿಗಳನ್ನು ಕ್ರೇನ್ ಮೂಲಕ ವಿಸರ್ಜನೆ ಮಾಡಲಾಯಿತು. ಮೆರವಣಿಗೆ ಮಾರ್ಗದಲ್ಲಿ ಹಾಗೂ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ಮಜ್ಜಿಗೆ, ಕೋಸಂಬರಿ, ಪುಳಿಯೋಗರೆ ಹಾಗೂ ಪ್ರಸಾದ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT